Advertisement

Mangaluru: ಮತ್ತೆ ನಗರಕ್ಕೆ ಕೊಳೆತ ಮೀನಿನ ದುರ್ವಾಸನೆ ಶಿಕ್ಷೆ

05:15 PM Sep 24, 2024 | Team Udayavani |

ಮಹಾನಗರ: ಮತ್ತೆ ನಗರದ ದಕ್ಷಿಣ ಭಾಗದ ನಿವಾಸಿಗಳಿಗೆ ಮೀನಿನ ತೈಲ ಸಂಸ್ಕರಣ ಘಟಕಗಳಿಂದ ದುರ್ವಾಸನೆಯ ಕಾಟ ಶುರುವಾಗಿದೆ.

Advertisement

ಬೋಳಾರ, ಮುಳಿಹಿತ್ಲು, ಲೀವೆಲ್‌ ರೋಡ್‌, ಜೆಪ್ಪು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ದುರ್ವಾಸನೆ ಹಬ್ಬಿದ್ದು ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಮುಖ್ಯವಾಗಿ ಮಕ್ಕಳು, ಅಸ್ತಮಾದಂತಹ ಕಾಯಿಲೆ ಹೊಂದಿರುವವರು, ವೃದ್ಧರಿಗಂತೂ ಇದು ಅಸಹನೀಯವಾಗಿ ಪರಿಣಮಿಸಿದೆ.
ಪ್ರತಿವರ್ಷವೂ ಮೀನುಗಾರಿಕೆ ಸೀಸನ್‌ನಲ್ಲಿ ಈ ಸಮಸ್ಯೆ ಮರುಕಳಿಸುತ್ತದೆ. ಉಳ್ಳಾಲ ಕೋಟೆಪುರ ಭಾಗದಲ್ಲಿ ಮೀನು ಸಂಸ್ಕರಣೆ ಘಟಕಗಳಿದ್ದು, ಅಲ್ಲಿ ಕೊಳೆತ ಮೀನನ್ನು ಬೃಹತ್‌ ಪ್ರಮಾಣದಲ್ಲಿ ತಂದು ಫಿಶ್‌ ಮೀಲ್‌ ಉತ್ಪಾದಿಸಲಾಗುತ್ತದೆ. ಈ ವೇಳೆ ಇಡೀ ಪರಿಸರದಲ್ಲಿ ಅದು ಬೃಹತ್‌ ಪ್ರಮಾಣದಲ್ಲಿ ದುರ್ವಾಸನೆ ಹರಡುತ್ತದೆ.

ಇದು ಸ್ಥಳೀಯವಾಗಿ ಅನಾರೋಗ್ಯಕರ ಪರಿಸರ ಸೃಷ್ಟಿಸುತ್ತದೆ. ನಾವು ಅಂಬಾಮಹೇಶ್ವರಿ ಸೇವಾ ಟ್ರಸ್ಟ್‌ನಿಂದ ಮಾದರಿ ವಾರ್ಡ್‌ ನಿರ್ಮಾಣದ ಯತ್ನ ಮಾಡಲಾಗುತ್ತಿದೆ. ಸ್ಥಳೀಯವಾಗಿ ಮಹಾನಗರ ಪಾಲಿಕೆಯ ಯತ್ನಗಳಿಗೆ ಕೈ ಜೋಡಿಸುತ್ತಿದ್ದೇವೆ. ಆದರೆ ಈ ಮೀನು ಸಂಸ್ಕರಣೆಯ ಸಮಸ್ಯೆ ನಮ್ಮೆಲ್ಲ ಯತ್ನಕ್ಕೆ ತಡೆಯೊಡ್ಡಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಸೀತಾರಾಮ ಅವರು ಈ ಕುರಿತು ಜಿಲ್ಲಾಧಿಕಾರಿಯವರಿಗೆ ಬರೆದ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಈ ಸಮಸ್ಯೆಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು, ಮೀನು ಸಂಸ್ಕರಣ ಕಾರ್ಖಾನೆ ಗಳಿಂದ ಆಗುವ ಸಮಸ್ಯೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next