Advertisement

Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ

08:09 PM Jan 06, 2025 | Team Udayavani |

ಮಂಗಳೂರು: ಸಹಜ ಗರ್ಭಧಾರಣೆಯಲ್ಲೇ ತಾಯಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ಅಪರೂಪದ ಪ್ರಕರಣವಿದು.

Advertisement

ನವೆಂಬರ್‌ 9ರಂದು ಮಂಗಳೂರಿನ ಫಾ|ಮುಲ್ಲರ್ ಆಸ್ಪತ್ರೆಯಲ್ಲಿ ಸೆಸೇರಿಯನ್‌ ಮೂಲಕ ಹೆರಿಗೆಯಾಗಿದೆ. ಹುಟ್ಟಿದ ನಾಲ್ಕೂ ಶಿಶುಗಳಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಆರೈಕೆ ನೀಡಲಾಗಿದ್ದು ಕೆಲ ದಿನಗಳ ಹಿಂದೆಯಷ್ಟೇ ತಾಯಿ ತಂದೆ ತಮ್ಮ ಮಕ್ಕಳೊಂದಿಗೆ ಮನೆಗೆ ತೆರಳಿದ್ದಾಗಿದೆ.

ಹುಟ್ಟಿರುವ ಮಕ್ಕಳಲ್ಲಿ ಎರಡು ಗಂಡಾದರೆ ಎರಡು ಹೆಣ್ಣು, ಈ ಅಪರೂಪದ ವಿದ್ಯಮಾನದ ಕುರಿತು ಆಸ್ಪತ್ರೆಯವರು ವಿವರ ನೀಡಿದ್ದಾರೆ. ಹುಟ್ಟುವಾಗ ಮಕ್ಕಳ ತೂಕ 1.1 ಕೆಜಿ, 1.2 ಕೆಜಿ, 800 ಗ್ರಾಮ್‌ ಹಾಗೂ 900 ಗ್ರಾಂ ಇದ್ದು ಕಳೆದೆರಡು ತಿಂಗಳಿನಿಂದ ನವಜಾತ ಶಿಶುಗಳ ವಾರ್ಡ್‌ನಲ್ಲಿ ಆರೈಕೆ ನೀಡಲಾಗಿತ್ತು.

ತೆಲಂಗಾಣ ಮೂಲದ ದಂಪತಿಗಳಾದ ತೇಜ ಹಾಗೂ ಬಾನೊತ್‌ ದುರ್ಗಾ ಈ ನಾಲ್ಕು ಮಕ್ಕಳನ್ನು ಪಡೆದ ಖುಷಿಯಲ್ಲಿದ್ದಾರೆ. ತೇಜ ಅವರು ಮಂಗಳೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ.ದುರ್ಗಾ ಅವರು ಗರ್ಭಧರಿಸಿದ ಬಳಿಕ ಸ್ಕ್ಯಾನಿಂಗ್ ಗೆಂದು ಫಾ.ಮುಲ್ಲರ್ ಆಸ್ಪತ್ರೆಗೆ ಬಂದಾಗ ನಾಲ್ಕು ಶಿಶುಗಳಿರುವುದು ಗೊತ್ತಾಗಿದೆ.

ಸಾಮಾನ್ಯವಾಗಿ ಐವಿಎಫ್‌ ಕೃತಕ ಗರ್ಭಧಾರಣೆಯಲ್ಲಿ ಈ ರೀತಿ ಒಂದಕ್ಕಿಂತ ಹೆಚ್ಚು ಮಕ್ಕಳ ಜನನವಾಗುವುದು ಹೆಚ್ಚು, ಆದರೆ ಈ ಪ್ರಕರಣ ಸಹಜ ಗರ್ಭಧಾರಣೆಯದ್ದಾಗಿದ್ದರಿಂದ ಇದು ವಿರಳ ಎನ್ನುತ್ತಾರೆ, ಈ ಹೆರಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೈನೆಕಾಲಜಿಸ್ಟ್‌ ಡಾ|ಜೋಯ್ಲಿನ್‌ ಅಲ್ಮೇಡ.

Advertisement

ತಮ್ಮ ಹೊಟ್ಟೆಯಲ್ಲಿ ನಾಲ್ಕು ಮಕ್ಕಳಿರುವುದು ಗೊತ್ತಾದಾಗ ದಂಪತಿ ಸಹಜವಾಗಿ ಖುಷಿಯಾದರು. ಆದರೆ ಈ ಗರ್ಭಧಾರಣೆ ಹಾಗೂ ಹೆರಿಗೆ ವೇಳೆಯ ಗಂಭೀರತೆ ಬಗ್ಗೆ ವಿವರಿಸಿದೆವು, ಅಗತ್ಯವಿದ್ದರೆ ಶಿಶುಗಳ ಸಂಖ್ಯೆಯನ್ನು ಇಳಿಸುವ(ಫೀಟಲ್‌ ರಿಡಕ್ಷನ್‌) ಆಯ್ಕೆ ಇದೆಯೆಂದೂ ತಿಳಿಸಿದೆವು, ಆದರೆ ದಂಪತಿಗಳು ನಾಲ್ಕೂ ಮಕ್ಕಳನ್ನೂ ಉಳಿಸಿಕೊಳ್ಳುವುದಕ್ಕೆ ಮುಂದಾದರು ಎನ್ನುತ್ತಾರೆ ಡಾ|ಅಲ್ಮೇಡ.

31 ವಾರಗಳ ಕಾಲ ದುರ್ಗಾ ಅವರನ್ನು ನಿರಂತರ ಪರಿಶೀಲನೆ ಮಾಡುತ್ತಿರಲಾಗಿದೆ. ಹಿಂದೆ ಆಕೆಗೆ ಒಮ್ಮೆ ಸೆಸೇರಿಯನ್‌ ಆಗಿದ್ದು, ಒಂದು ಮಗುವಿದೆ, ಹಾಗಾಗಿ ಗರ್ಭಕೋಶದಲ್ಲಿ ಅದರ ಹೊಲಿಗೆ ಇರುವುದರಿಂದ ಮತ್ತೆ ಸೆಸೇರಿಯನ್‌ ಮಾಡುವಾಗ ಹೆಚ್ಚಿನ ನಿಗಾ ಅಗತ್ಯವಿತ್ತು.

ಟೀಂ ವರ್ಕ್‌ನಿಂದ ಯಶಸ್ಸು
32ನೇ ವಾರದಲ್ಲಿ ನ.9ರಂದು ಹೆರಿಗೆ ಮಾಡಿಸಲಾಯಿತು. ನಾಲ್ಕು ಶಿಶುಗಳಿದ್ದುದರಿಂದ ಎಲ್ಲಾ ವೈದ್ಯರ ಟೀಂ ವರ್ಕ್‌ ಅಗತ್ಯವಿದ್ದು, ಈ ಇಡೀ ಪ್ರಕ್ರಿಯೆಯಲ್ಲಿ ರೇಡಿಯೇಶನ್‌ ವಿಭಾಗದ ಡಾ|ಮುರಳೀಧರ್‌, ಡಾ.ರಾಮ್‌ ಭಾಸ್ತಿ ಮತ್ತು ಡಾ|ಮಹೇಶ್‌, ಪ್ರಸೂತಿ ವಿಭಾಗದ ಡಾ|ವಿಸ್ಮಯ, ಡಾ|ಏಕ್ತ, ಡಾ|ದಿಯಾ, ಡಾ|ನಯನ, ಮಕ್ಕಳ ತಜ್ಞೆ ಡಾ.ಚಂದನಾ ಪೈ ಮತ್ತಿತರರು ನೆರವು ನೀಡಿದರು. ಶಸ್ತ್ರಕ್ರಿಯಾ ಕೊಠಡಿ ಸಿಬಂದಿಗಳೂ ಸೂಕ್ತ ಸಹಕಾರವಿತ್ತರು. ಹೆರಿಗೆ ಬಳಿಕ ಮಕ್ಕಳ ತೂಕ ಕಡಿಮೆ ಇದ್ದ ಕಾರಣ ಡಾ|ಪ್ರವೀಣ್‌ ಬಿ.ಕೆ ಅವರ ತಂಡ ಗರಿಷ್ಠ ಆರೈಕೆ ನೀಡಿತು. ಇದರಿಂದ ಶಿಶುಗಳು ಪ್ರತಿದಿನವೂ ಉತ್ತಮ ಆರೋಗ್ಯ ಪ್ರಗತಿ ದಾಖಲಿಸಿವೆ.

7ಲಕ್ಷಕ್ಕೊಂದು ಪ್ರಕರಣ
ಅಪರೂಪದ ಪ್ರಕರಣ ಇದಾಗಿದೆ, ಈ 7 ಲಕ್ಷದಲ್ಲಿ ಒಂದು ಪ್ರಕರಣ ಇಂಥದ್ದು ಬರುತ್ತದೆ, ಇಂತಹ ಕೇಸ್‌ ನಿಭಾಯಿಸುವುದು ಬಹಳ ಕ್ಲಿಷ್ಟಕರ ಎಂದು ಡಾ|ಅಲ್ಮೇಡಾ ತಿಳಿಸುತ್ತಾರೆ.

14 ವರ್ಷಗಳ ಹಿಂದೆ ಕೆಎಂಸಿಯಲ್ಲಿ ಇಂತಹದೇ ನಾಲ್ಕು ಮಕ್ಕಳ ಜನನವಾಗಿತ್ತು, ಅದರಲ್ಲಿ ನಾಲ್ಕೂ ಮಕ್ಕಳು ಗಂಡು ಎನ್ನುವುದು ಗಮನಾರ್ಹ.

ಡ/ಪ
0601ಞlr31/32

Advertisement

Udayavani is now on Telegram. Click here to join our channel and stay updated with the latest news.

Next