Advertisement

‘ಮಂಗಲ್‌ಪಾಂಡೆಚೌಕ’, ಯೋಧನಿಂದಲೇ ಲೋಕಾರ್ಪಣೆ

11:11 AM Aug 15, 2018 | Team Udayavani |

ಪುತ್ತೂರು : ಪುನರ್‌ ನಿರ್ಮಾಣಗೊಂಡ 1857ರ ಮಹಾ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ಧ್ವಜಸ್ತಂಭ, ಮಂಗಲ್‌ ಪಾಂಡೆ ಚೌಕ (ಅಮೃತ ಶಿಲೆ ಸ್ಮಾರಕ) ಕಿಲ್ಲೆ ಮೈದಾನದ ಬಳಿ ಮಂಗಳವಾರ ಲೋಕಾರ್ಪಣೆಗೊಂಡಿತು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವ ನೆನಪಿನಲ್ಲಿ 1957ರಲ್ಲಿ ಧ್ವಜಸ್ತಂಭವನ್ನು ನಿರ್ಮಿಸಲಾಗಿದ್ದು, ಅಂಬಿಕಾ ಶಿಕ್ಷಣ ಸಂಸ್ಥೆಯ ಮುಂದಾಳತ್ವದಲ್ಲಿ ಅದಕ್ಕೆ ಚೌಕವನ್ನು ಅಭಿವೃದ್ಧಿಪಡಿಸಿ ಮಂಗಲ್‌ ಪಾಂಡೆ ಚೌಕ ಹೆಸರಿನಲ್ಲಿ ಲೋಕಾರ್ಪಣೆಗೊಳಿಸಿ, ನಗರಸಭೆಗೆ ಹಸ್ತಾಂತರಿಸಲಾಯಿತು.

Advertisement

ಕಾರ್ಗಿಲ್‌ ಯುದ್ಧದಲ್ಲಿ ಅಂಗಹೀನರಾದ ಯೋಧ ರಂಗಪ್ಪ ಆಲೂರು ಬಾಗಲಕೋಟೆ ಮಂಗಲ್‌ ಪಾಂಡೆ ಚೌಕವನ್ನು ಉದ್ಘಾಟಿಸಿ, ದ್ವಿತೀಯ ಪಿಯುಸಿ ಕಲಿಯುತ್ತಿದ್ದಾಗಲೇ ನಾನು ಭಾರತ ಮಾತೆಯ ಸೇವೆಗೆ ತೆರಳಿದ್ದೇನೆ. ಸೇನೆಗೆ ಸೇರುವ ಅಪರಿಮಿತ ಛಲ ನನ್ನಲ್ಲಿತ್ತು. ಕಾರ್ಗಿಲ್‌ ಯುದ್ಧ 1999ರ ಮಾರ್ಚ್‌ ತಿಂಗಳಲ್ಲಿ ಆರಂಭಗೊಂಡಿತ್ತು. ಜು. 29ರಂದು ನನಗೆ ಆಘಾತ ಉಂಟಾಯಿತು ಎಂದು ಸ್ಮರಿಸಿಕೊಂಡರು.

ಕರೆದರೆ ತೆರಳುವೆ
ದೇಶಕ್ಕಾಗಿ ನನ್ನ ಎರಡೂ ಕೈ, ಒಂದು ಕಾಲು ಹೋಗಿವೆ. ಆದರೆ, ಸೇನೆಗೆ ಸಂಬಂಧಪಟ್ಟಂತೆ ತರಬೇತಿ ನೀಡಲು ನನ್ನನ್ನು ಕರೆದರೆ ತೆರಳಲು ಸಿದ್ಧನಿದ್ದೇನೆ. ದೇಶ ರಕ್ಷಣೆಯ ಕಾರ್ಯಕ್ಕೆ ಸೈನ್ಯ ಸೇರಲು ಯುವ ಸಮುದಾಯ ಮುಂದೆ ಬರಬೇಕು. ಒಂದು ಮನೆಯಿಂದ ಒಬ್ಬರಾದರೂ ಸೈನ್ಯಕ್ಕೆ ಸೇರಬೇಕು ಎಂದು ರಂಗಪ್ಪ ಹೇಳಿದರು. ಮುಖ್ಯ ಅತಿಥಿಯಾಗಿದ್ದ ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೆ ಮುನ್ನಡಿ ಬರೆದ ನೆನಪಿನಲ್ಲಿ ಇಂತಹ ಚೌಕವನ್ನು ನಿರ್ಮಿಸಲು ಸಿಕ್ಕಿದ ಅವಕಾಶ ಹೆಮ್ಮೆ ಪಡುವಂತದ್ದು ಎಂದು ಹೇಳಿದರು.

ಇತಿಹಾಸ ಮರೆಯಬೇಡಿ
ಅಧ್ಯಕ್ಷತೆ ವಹಿಸಿದ ನಿವೃತ್ತ ವೈಸ್‌ ಏರ್‌ ಮಾರ್ಷಲ್‌ ರಮೇಶ್‌ ಕಾರ್ಣಿಕ್‌, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹತ್ತಿದ ಮೀರತ್‌, ಬ್ಯಾರಕ್‌ಪುರಗಳಲ್ಲಿ ಕೆಲವೇ ವರ್ಷಗಳಲ್ಲಿ ಆ ನೆನಪುಗಳನ್ನು ಮರೆತಿದ್ದಾರೆ. ಆದರೆ ಪುತ್ತೂರಿನಲ್ಲಿ ಅದರ ನೆನಪು ಉಳಿಸಿಕೊಂಡಿದ್ದು ಖುಷಿಯ ವಿಚಾರ ಎಂದರು. ನಾವು ಇತಿಹಾಸವನ್ನು ಮರೆತರೆ, ಪಾಠ ಕಲಿಯದಿದ್ದರೆ ನಮ್ಮ ಮೇಲೆಯೇ ಎರಗುತ್ತದೆ. ಈ ದೃಷಿಯಿಂದ ನಮ್ಮಲ್ಲಿ ಇತಿಹಾಸ ತಿಳಿಯುವ ಆಸಕ್ತಿ ಇರಬೇಕು ಎಂದರು.

ವೀರ ಸಾವರ್ಕರ್‌ ಅವರ ದೇಶಪ್ರೇಮ, ಹೋರಾಟಗಳ ಕುರಿತು ತಪ್ಪು ಕಲ್ಪನೆಗಳನ್ನು ಹರಡಲಾಗಿದೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಸಿಪಾಯಿ ದಂಗೆ ಎನ್ನದಂತೆ ಸಾವರ್ಕರ್‌ ಅವರೇ ಪುಸ್ತಕದಲ್ಲಿ ಬರೆದಿದ್ದಾರೆ. ಅವರಿಗೆ ಭಾರತರತ್ನ ಸಿಗಬೇಕಿತ್ತು. ದೇಶಕ್ಕಾಗಿ ಶ್ರಮಿಸುವುದು ನಮ್ಮ ಪ್ರಥಮ ಕರ್ತವ್ಯವಾಗಬೇಕು ಎಂದರು. ಕಾರ್ಗಿಲ್‌ ಯೋಧ ರಂಗಪ್ಪ ಹುಲಿಯಪ್ಪ ಆಲೂರು ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಜಪಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕೌಟ್ಸ್‌ ಗೈಡ್ಸ್‌ ಉತ್ಸವ ಜಾಂಬೂರಿಯಲ್ಲಿ ಭಾಗವಹಿಸಿ ಭಾರತ ರಾಷ್ಟ್ರಧ್ವಜ ಹಿಡಿದು ತಂಡ ಮುನ್ನಡೆಸಿದ ಅಂಬಿಕಾದ ವಿದ್ಯಾರ್ಥಿನಿ ರಂಜಿತಾ ಶೆಟ್ಟಿ ಹಾಗೂ ಸದಸ್ಯ ವಿಶಾಖ್‌ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

Advertisement

ಉದ್ಯಮಿ ಎಂ.ಎಸ್‌. ರಘುನಾಥ ರಾವ್‌ ಪುತ್ತೂರು, ನಟ್ಟೋಜ ಫೌಂಡೇಶನ್‌ ಟ್ರಸ್ಟ್‌ನ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್‌,
ಚೌಕ ನಿರ್ಮಾಣ ಸಂಸ್ಥೆಯ ಪ್ರಸನ್ನ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಸುರೇಶ್‌ ಶೆಟ್ಟಿ ಸ್ವಾಗತಿಸಿ, ಪ್ರಾಂಶುಪಾಲೆ ರಾಜಶ್ರೀ ನಟ್ಟೋಜ ವಂದಿಸಿದರು. ನ್ಯಾಯವಾದಿ ಮಹೇಶ್‌ ಕಜೆ ನಿರ್ವಹಿಸಿದರು.

ನಿಧಿ ಸಮರ್ಪಣೆ 
ಯೋಧರಿಗಾಗಿ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಉಳಿಸಿದ ನಿಧಿಯನ್ನು ರಂಗಪ್ಪ ಅವರ ಮೂಲಕ ಸೇನೆಗೆ ಸಮರ್ಪಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next