Advertisement

ಮಂಗಳೂರು: ಮತ್ತೆ “ಲೇಡಿಸ್‌ ಬಸ್‌’ಗೆ ಮಹಿಳೆಯರ ಬೇಡಿಕೆ

02:32 PM Jun 25, 2024 | Team Udayavani |

ಮಹಾನಗರ: ನಗರದ ಸಿಟಿ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ರಶ್‌ ಹೆಚ್ಚಾಗುತ್ತಿದ್ದು, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಮತ್ತು
ನಗರದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮಹಿಳೆಯರಿಗೆಂದೇ “ಮಹಿಳಾ ಬಸ್‌’ ಆರಂಭಿಸಬೇಕು ಎಂಬ
ಒತ್ತಾಯ ಕೇಳಿಬರತೊಡಗಿದೆ.

Advertisement

ಸುಮಾರು ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ “ಮಹಿಳಾ ಬಸ್‌’ ಬಳಿಕ ಸ್ಥಗಿತಗೊಂಡಿತ್ತು. ಜಿಲ್ಲೆಗೆ ಸೀಮಿತವಾಗಿ ಕೆಲವೊಂದು ರೂಟ್‌ ಗಳಲ್ಲಿ ಆರಂಭಿಸಬೇಕು, ಇದರಿಂದಾಗಿ ಮಹಿಳಾ ಪ್ರಯಾಣಿಕರಿಗೆ, ಅದರಲ್ಲೂ ಬೆಳಗ್ಗೆ ವೇಳೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿಗೆ ಬಹು ಅನುಕೂಲವಾಗಬಹುದು ಎಂಬ ಅಭಿಪ್ರಾಯವಿದೆ. ಶಕ್ತಿ ಯೋಜನೆಯ ಮೂಲಕ ರಾಜ್ಯ ಸರಕಾರದಿಂದ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಘೋಷಣೆ ಮಾಡಲಾಗಿದ್ದು, ಮಹಿಳೆಯರಿಗೆಂದೇ ಬಸ್‌ ಸೌಲಭ್ಯ ಕಲ್ಪಿಸಿದರೆ ಹೆಚ್ಚಿನವರಿಗೆ ಇದರಿಂದ ಅನುಕೂಲ ಆಗಬಹುದು.

ಮಂಗಳೂರು ನಗರ ಸೀಮಿತವಾಗಿ ಸದ್ಯ ಬೆರಳೆಣಿಕೆಯಷ್ಟು ಮಾತ್ರ ನರ್ಮ್ ಸರಕಾರಿ ಬಸ್‌ ಇದೆ. ಉಳಿದಂತೆ ವಿವಿಧ ರೂಟ್‌ಗಳಲ್ಲಿ ಸಿಟಿ ಬಸ್‌ಗಳೇ ತೆರಳುತ್ತದೆ. ಇದರಿಂದಾಗಿ ಇಲ್ಲಿನ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆಯೂ ಹೆಚ್ಚಾಗುತ್ತಿದೆ.

ಸುದಿನದ ಜತೆ ಮಾತನಾಡಿದ ಕಾಲೇಜು ವಿದ್ಯಾರ್ಥಿನಿ ಅಮಿತಾ ಅವರು, “ನಾನು ಬೆಳಗ್ಗೆ ಕುಲಶೇಖರ ಕಡೆಯಿಂದ ಕಾಲೇಜಿಗೆ
ತೆರಳುತ್ತೇನೆ. ಬಸ್‌ನಲ್ಲಿ ಪ್ರತೀ ದಿನ ರಶ್‌ ಇದ್ದು, ಕಷ್ಟಪಟ್ಟು ಪ್ರಯಾಣಿಸಬೇಕಾದ ಅನಿವಾರ್ಯವಿದೆ. ಬೆಳಗ್ಗೆ, ಸಂಜೆ ವೇಳೆ
ಶಾಲಾ-ಕಾಲೇಜು, ಕೆಲಸಕ್ಕೆಂದು ತೆರಳುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆಂದೇ ಮಹಿಳಾ ಬಸ್‌ ಆರಂಭ ಮಾಡಬೇಕು ಎಂಬುವುದು ನಮ್ಮ ಒತ್ತಾಯ’ ಎಂದು ಹೇಳಿದರು.

15 ವರ್ಷಗಳ ಹಿಂದಿತ್ತು ” ಮಹಿಳಾ ಸಿಟಿ ಬಸ್‌’
ಮಂಗಳೂರಿನಲ್ಲಿ ಸುಮಾರು 15 ವರ್ಷಗಳ ಹಿಂದೆ ಮಹಿಳಾ ವಿಶೇಷ ಸಿಟಿ ಬಸ್‌ ಸೇವೆ ಇತ್ತು. ಆಗಿನ ರಾಜ್ಯಪಾಲರಾಗಿದ್ದ ರಮಾದೇವಿ ಅವರು ನೂತನ ಬಸ್ಸಿಗೆ ಚಾಲನೆ ನೀಡಿದ್ದರು. ಬಳಿಕ 27 ನಂಬರ್‌ನ ಸ್ಟೇಟ್‌ಬ್ಯಾಂಕ್‌ -ಮಂಗಳಾದೇವಿ, 44 ನಂಬರ್‌ನ ಉಳ್ಳಾಲ-ಸ್ಟೇಟ್‌ಬ್ಯಾಂಕ್‌ ಮತ್ತು 21 ನಂಬರ್‌ನ ನೀರುಮಾರ್ಗಕ್ಕೆ ಮಹಿಳಾ ಬಸ್‌ ಸಂಚಾರ ಇತ್ತು. ದಿನಕಳೆದಂತೆ ಬಸ್‌ ಗೆ ಬೇಡಿಕೆ ಕಡಿಮೆಯಾದ ಹಿನ್ನಲೆಯಲ್ಲಿ ಒಂದೇ ಬಸ್‌ನಲ್ಲಿ ಎರಡು ಭಾಗ ಮಾಡಿ ಮಹಿಳೆಯರು ಮತ್ತು ಪುರುಷರ ವಿಭಾಗ ಮಾಡಲಾಗಿತ್ತು. ಆದರೂ, ಉತ್ತಮ ಜನಸ್ಪಂದನೆ ದೊರಕದ ಹಿನ್ನಲೆಯಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು.

Advertisement

ಕಾಸರಗೋಡು ಮಾರ್ಗದಲ್ಲೂ ಇತ್ತು
ಮಂಗಳೂರು- ಕಾಸರಗೋಡು ಮಾರ್ಗದಲ್ಲಿ ಹತ್ತು ವರ್ಷಗಳ ಹಿಂದೆ ಮಹಿಳಾ ಬಸ್‌ ಕಾರ್ಯಾಚರಣೆ ನಡೆಸುತ್ತಿತ್ತು. ಕೆಲವೇ ವರ್ಷಗಳಲ್ಲಿ ಸ್ಥಗಿತಗೊಂಡ ಬಸ್‌ ಸೇವೆ ಮರು ಆರಂಭಗೊಳ್ಳಲಿಲ್ಲ. ಈ ಬಸ್‌ ಎರಡು ಟ್ರಿಪ್‌ ಇತ್ತು. ಬೆಳಗ್ಗೆ 8 ಗಂಟೆಗೆ ಕಾಸರಗೋಡಿನಿಂದ ಹೊರಟು 9.40ಕ್ಕೆ ಮಂಗಳೂರು ತಲುಪುತ್ತಿತ್ತು. ಇನ್ನು ಸಂಜೆ 6.05ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 7.30ಕ್ಕೆ ಕಾಸರಗೋಡು ತಲುಪುತ್ತಿತ್ತು.

ಬಸ್‌ ಸಂಚಾರ ಆರಂಭಕ್ಕೆ ಮನವಿ
ಮಂಗಳೂರಿನಿಂದ ಕಾಸರಗೋಡಿಗೆ ಹಿಂದೆ ಮಹಿಳಾ ಬಸ್‌ ಸಂಚರಿಸುತ್ತಿತ್ತು. ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದ ಕಾರಣ ರದ್ದುಗೊಂಡಿತ್ತು. ಸದ್ಯ ಬಸ್‌ ಸಂಚಾರ ಆರಂಭಕ್ಕೆ ಪತ್ರ ಮೂಲಕ ಮನವಿ ಬಂದರೆ ಆ ಕುರಿತು ಕೇಂದ್ರ ಕಚೇರಿಗೆ ಮಾಹಿತಿ ತಿಳಿಸಲಾಗುವುದು.
– ರಾಜೇಶ್‌ ಶೆಟ್ಟಿ,
ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಂಗಳೂರು

ಸ್ಪಂದನೆ ಕಡಿಮೆ
ನಗರದಲ್ಲಿ ಈ ಹಿಂದೆ ಮಹಿಳಾ ಸಿಟಿ ಬಸ್‌ ಓಡುತ್ತಿತ್ತು. ರಾಜ್ಯಪಾಲರಾಗಿದ್ದ ರಮಾದೇವಿ ಅವರು ಟೌನ್‌ಹಾಲ್‌ನಲ್ಲಿ ಬಸ್ಸಿಗೆ ಚಾಲನೆ ನೀಡಿದ್ದರು. ಬಳಿಕದ ದಿನಗಳಲ್ಲಿ ಪ್ರಯಾಣಿಕರಿಂದ ಸ್ಪಂದನೆ ಕಡಿಮೆಯಾಯಿತು. ಇದರಿಂದಾಗಿ ಅರ್ಧದಲ್ಲೇ ಬಸ್‌ ಸಂಚಾರ ನಿಲ್ಲಿಸಲಾಗಿತ್ತು.
* ಜಯರಾಮ ಶೇಖರ, ಬಸ್‌ ಮಾಲಕ

*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next