Advertisement

ಆರಂಭದಲಿಯೇ ಕ್ಷೀಣಿಸಿದ್ದ ಮುಂಗಾರು; ಮಂಗಳೂರಿನಲ್ಲಿ ಇನ್ನೂ ಸುರಿದಿಲ್ಲ ವಾಡಿಕೆ ಮಳೆ!

12:22 PM Jun 27, 2022 | Team Udayavani |

ಮಹಾನಗರ: ರಾಜ್ಯ ಕರಾವಳಿ ಭಾಗದಲ್ಲಿ ಆರಂಭದಲ್ಲೇ ಮುಂಗಾರು ಕ್ಷೀಣಿಸಿದ್ದ ಪರಿಣಾಮ ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನಲ್ಲಿ ವಾಡಿಕೆಗಿಂತ ಅತೀ ಕಡಿಮೆ ಮಳೆ ಸುರಿದಿದೆ.

Advertisement

ಮೇ ಅಂತ್ಯದಲ್ಲಿ ಕೇರಳ ಕರಾವಳಿಗೆ ಕಾಲಿಟ್ಟ ಮುಂಗಾರು ಜೂನ್‌ 1ರಂದು ರಾಜ್ಯ ಕರಾವಳಿಗೆ ತಲುಪಿತ್ತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಒಂದು ದಿನ ಬಿರುಸಿನ ಮಳೆಯಾದ ಬಳಿಕ ಮತ್ತೆ ಮಳೆ ತಗ್ಗಿತ್ತು. ಇದೀಗ ಕಳೆದ ಒಂದು ವಾರಗಳ ಹಿಂದೆಯಷ್ಟೇ ಮಳೆ ಬಿರುಸು ಪಡೆದಿದೆ. ಆದರೆ, ತಿಂಗಳ ಲೆಕ್ಕಾಚಾರದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹೆಚ್ಚಿನ ಮಳೆ ಕೊರತೆ ಇದೆ.

ಜೂನ್‌ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ 732.4 ಮಿ.ಮೀ. ವಾಡಿಕೆ ಮಳೆಯಲ್ಲಿ 407.4 ಮಿ.ಮೀ. ಮಳೆಯಾಗಿದೆ. ಬಂಟ್ವಾಳ ತಾಲೂಕಿನಲ್ಲಿ 768.4 ಮಿ.ಮೀ. ವಾಡಿಕೆ ಮಳೆಯಲ್ಲಿ 338.2 ಮಿ.ಮೀ., ಮಂಗಳೂರಿನಲ್ಲಿ 837.7 ಮಿ.ಮೀ.ನಲ್ಲಿ 362.3 ಮಿ.ಮೀ., ಪುತ್ತೂರು ತಾಲೂಕಿನಲ್ಲಿ 761.2 ಮಿ.ಮೀ.ನಲ್ಲಿ 324.9 ಮಿ.ಮೀ., ಸುಳ್ಯ ತಾಲೂಕಿನಲ್ಲಿ 610.6 ಮಿ.ಮೀ.ನಲ್ಲಿ 283.4 ಮಿ.ಮೀ., ಮೂಡುಬಿದಿರೆಯಲ್ಲಿ 810 ಮಿ.ಮೀ.ನಲ್ಲಿ 361 ಮಿ.ಮೀ. ಮತ್ತು ಕಡಬ ತಾ|ನಲ್ಲಿ 675 ಮಿ.ಮೀ. ವಾಡಿಕೆ ಮಳೆಯಲ್ಲಿ 445 ಮಿ.ಮೀ. ಮಳೆಯಾಗಿದೆ. ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿದರೆ ಮುಂದೆ ಅಪ್ಪಳಿಸುವ ಮುಂಗಾರು ಮಾರುತದ ಪ್ರಭಾವ ಕಡಿಮೆ ಇರುವ ಸಾಧ್ಯತೆ ಇರುತ್ತದೆ.

ಅಲ್ಲದೆ, ಮೇ ತಿಂಗಳಲ್ಲಿ “ಅಸಾನಿ’ ಎಂಬ ಚಂಡಮಾರುತ ಉದ್ಭವಿಸಿದ್ದು, ಈ ಚಂಡಮಾರುತ ಕ್ಷೀಣಿ ಸಿದ ಬಳಿಕ ಮುಂಬರುವ ಮುಂಗಾರು ಮಳೆಯಲ್ಲೂ ಪ್ರಭಾವ ಬೀರಿತ್ತು. ಕಳೆದ ವರ್ಷವೂ ಒಟ್ಟಾರೆ ಮುಂಗಾರು ವೇಳೆ ಶೇ.13ರಷ್ಟು ಮಳೆ ಕೊರತೆ ಉಂಟಾಗಿತ್ತು. ಆದರೆ ಐಎಂಡಿ ಹೇಳಿಕೆಯ ಪ್ರಕಾರ ಒಟ್ಟಾರೆ ಮುಂಗಾರು ಅವಧಿಯಲ್ಲಿ ವಾಡಿಕೆ ಮಳೆ ಸುರಿಯುತ್ತದೆ ಎಂದು ಅಂದಾಜಿಸಲಾಗಿದೆ.

ಉಷ್ಣಾಂಶದಲ್ಲೂ ಏರು ಪೇರು

Advertisement

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ದಾಖಲಾಗುವ ಉಷ್ಣಾಂಶದಲ್ಲೂ ಏರು ಪೇರಾಗುತ್ತಿದೆ. ಕೆಲವು ದಿನಗಳ ಕಾಲ ಉರಿ ಬಿಸಿಲು, ಸೆಕೆ ಇದ್ದರೆ ಕೆಲವು ದಿನ ಬೆಳಗ್ಗೆಯೇ ಮಳೆ ಇರುತ್ತಿದೆ. ಹೀಗಿದ್ದಾದ ದಾಖಲಾಗುವ ಉಷ್ಣಾಂಶಲ್ಲಿಯೂ ಏರಿಳಿತ ಕಂಡು ಬಂದಿದೆ. ಜಿಲ್ಲೆಯಲ್ಲಿ ಜೂ.26 ರಂದು 29.4 ಡಿ.ಸೆ. ಗರಿಷ್ಠ 24 ಡಿ.ಸೆ. ಕನಿಷ್ಠ, ಜೂ.25ರಂದು 28.1 ಡಿ.ಸೆ. ಮತ್ತು 23.3 ಡಿ.ಸೆ., ಜೂ.24ರಂದು 28.1 ಡಿ.ಸೆ ಮತ್ತು 23.3 ಡಿ.ಸೆ., ಜೂ.23ರಂದು 26.3 ಡಿ.ಸೆ. ಮತ್ತು 23.5 ಡಿ.ಸೆ., ಜೂ.22ರಂದು 27.8 ಡಿ.ಸೆ. ಮತ್ತು 22.7 ಡಿ.ಸೆ., ಜೂ.21ರಂದು 30.5 ಡಿ.ಸೆ. ಮತ್ತು 22.4 ಡಿ.ಸೆ., ಜೂ.20ರಂದು 31.2 ಡಿ.ಸೆ. ಗರಿಷ್ಠ ಮತ್ತು 23.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

ಕರಾವಳಿ ಭಾಗದಲ್ಲಿ ಮುಂಗಾರು ಮಾರುತ ಅಪ್ಪಳಿಸಿದ ಕೆಲವೇ ದಿನಗಳಲ್ಲಿ ಕ್ಷೀಣಿಸಿತ್ತು. ಕಳೆದ ಕೆಲ ದಿನಗಳಿಂದ ಮತ್ತೆ ಬಿರುಸು ಪಡೆದಿದ್ದು, ಕೆಲವು ಕಡೆ ಉತ್ತಮ ಮಳೆ ಸುರಿದಿದೆ. ಮುಂದಿನ ಕೆಲವು ದಿನಗಳ ಕಾಲ ಕರಾವಳಿಯಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ಈ ಬಾರಿಯ ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ ಮಳೆಯಾಗುವ ಸಾಧ್ಯತೆ ಇದೆ. –ಡಾ| ರಾಜೇಗೌಡ,, ಕೃಷಿ ವಿ.ವಿ. ಹವಾಮಾನ ವಿಜ್ಞಾನಿ

„ ನವೀನ್‌ ಭಟ್‌ ಇಳಂತಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next