Advertisement

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

12:39 AM Jun 15, 2024 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ನಾಲ್ಕು ಘಟಕ ಕಾಲೇಜುಗಳ ಕಾರ್ಯ ನಿರ್ವಹಣೆಗೆ ಸರಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಜತೆಗೆ ಆರ್ಥಿಕ ಸಂಕಷ್ಟವೂ ಇರುವುದರಿಂದ ನಿರ್ವಹಣೆ ಕಷ್ಟ ಎಂದು ವಿ.ವಿ. ಕುಲಾಧಿಪತಿ ರಾಜ್ಯಪಾಲರಿಗೆ ಹಾಗೂ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದೆ ಎಂದು ಕುಲಪತಿ ಪ್ರೊ| ಪಿ.ಎಲ್‌.ಧರ್ಮ ತಿಳಿಸಿದ್ದಾರೆ.

Advertisement

ಬನ್ನಡ್ಕ ಹಾಗೂ ನೆಲ್ಯಾಡಿಯ ಕಾಲೇಜುಗಳು, ಮಂಗಳೂರು ವಿ.ವಿ.ಯ ಆವರಣದ ಘಟಕ ಕಾಲೇಜು, ಸಂಧ್ಯಾ ಕಾಲೇಜು ಏಳೆಂಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಆದರೆ ನಾಲ್ಕು ವರ್ಷಗಳಿಂದ ಅವುಗಳ ಸ್ಟಾಚೂÂಟ್‌ಗೆ ಸರಕಾರದಿಂದ ಅನುಮತಿ ದೊರಕಿಲ್ಲ. ಎ.15ರಂದು ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗೂ ಅನುಮತಿ ಕೋರಿ ಪತ್ರ ಬರೆಯಲಾಗಿದೆ ಎಂದವರು ಹೇಳಿದರು.

ಮಂಗಳೂರು ವಿ.ವಿ.ಯು ತನ್ನ ಆಂತ
ರಿಕ ಸಂಪತ್ತಿನ ಕ್ರೋಢೀ ಕರಣ ಶಕ್ತಿಯನ್ನು ಕಳೆದು ಕೊಂಡಿದೆ. ವಿವಿಧ ಕಾಲೇಜುಗಳು ಸ್ವಾಯತ್ತ ಕಾಲೇಜುಗಳಾಗಿದ್ದು, ಅವುಗಳಿಂದ ಶುಲ್ಕ ಬರುತ್ತಿಲ್ಲ. ಕೋವಿಡ್‌ ಬಳಿಕ ಸರಕಾರದ ಅನುದಾನವೂ ದೊರೆಯುತ್ತಿಲ್ಲ. ಇದರ ಜತೆಗೆ ಈ ಘಟಕ ಕಾಲೇಜುಗಳ ನಿರ್ವಹಣೆಯೂ ಕಷ್ಟವಾಗಿ, ಉಪನ್ಯಾಸಕರು, ಸಿಬಂದಿಗೆ ಮೂರ್‍ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುವ ಪರಿಸ್ಥಿತಿ ಎದುರಾಗಿದೆ ಎಂದು ವಿವರಿಸಿದರು.

ವಿ.ವಿ.ಗೆ ಆದಾಯ ನೀಡುತ್ತಿದ್ದ ದೂರ ಶಿಕ್ಷಣ ಕೇಂದ್ರವನ್ನು ಸರಕಾರದ ಆದೇಶದ ಮೇರೆಗೆ ಮುಚ್ಚಲಾಗಿದೆ. ಮಂಗಳೂರು ವಿ.ವಿ.ಯ ಆಂತರಿಕ ಸಂಪನ್ಮೂಲ ಕಾಲೇಜುಗಳ ಶುಲ್ಕ, ವಿವಿಧ ಸರ್ಟಿಫಿಕೆಟ್‌ಗಳಿಂದ ಬರುವ ಮೊತ್ತಕ್ಕೆ ಸೀಮಿತಗೊಂಡಿದೆ. ಯುಜಿಸಿ ಪ್ರಾಜೆಕ್ಟ್ಗಳು, ಕೈಗಾರಿಕೆಗಳಿಂದ ದೊರೆಯುತ್ತಿದ್ದ ಆದಾಯವೂ ಕಡಿಮೆ ಆಗಿದೆ. ಈ ಎಲ್ಲದರ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದೆ. ಈಗಾಗಲೇ ಮಂಗಳೂರು ವಿ.ವಿ. ಕ್ಯಾಂಪಸ್‌ನೊಳಗಿನ ಘಟಕ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ದಾಖಲಾತಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಿಧಾನಸಭಾ ಸ್ಪೀಕರ್‌ ಅವರ ಭರವಸೆ ಮೇರೆಗೆ ಆರಂಭಿಸಲಾಗಿದೆ ಎಂದವರು ಹೇಳಿದರು.

ಹಗರಣಗಳ ಬಗ್ಗೆ ತನಿಖೆ
ಮಂಗಳೂರು ವಿ.ವಿ.ಯಲ್ಲಿನ ಹಿಂದಿನ ಹಲವು ಹಗರಣಗಳ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆ ಬಗ್ಗೆ ಪ್ರತಿಕ್ರಿಯಿಸಲಾಗದು. ಹಿಂದಿನ ಉಪ ಕುಲಪತಿಗಳ ಅವಧಿಯಲ್ಲಿ ಆಗಿರಬಹುದೆನ್ನದಾದ ಹಗರಣಗಳ ಬಗ್ಗೆ ತನಿಖೆ ಮಾಡುವ ಅಧಿಕಾರ ವಿ.ವಿ.ಗೆ ಇಲ್ಲ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಕುಲಪತಿ ಉತ್ತರಿಸಿದರು.

Advertisement

ಅನಧಿಕೃತ ನೇಮಕ
ಮಂಗಳೂರು ವಿ.ವಿ.ಯಲ್ಲಿ ಒಂದೆರಡು ವರ್ಷದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೈಗೊಂಡಿದ್ದ 187 ಮಂದಿಯ ನೇಮಕವನ್ನು ಅನಧಿಕೃತ ಎಂದು ಸರಕಾರ ತಿಳಿಸಿದ್ದು, ವಿ.ವಿ.ಯ ನಿವೃತ್ತ ಉದ್ಯೋಗಿಗಳಿಗೆ ನೀಡಲು ಬಾಕಿ ಇರುವ ಪಿಂಚಣಿ (14 ಕೋ.ರೂ) ಪಾವತಿಸಲು ಅನಧಿಕೃತ ನೇಮಕಾತಿಯನ್ನು ತತ್‌ಕ್ಷಣವೇ ಕೈಬಿಡಲು ಆದೇಶಿಸಿದೆ. ಹಾಗಾಗಿ ಹಂತ ಹಂತವಾಗಿ ಅವರನ್ನು ಕೈಬಿಡಲಾಗುತ್ತಿದೆ. ಈ ಮೂಲಕ ವಾರ್ಷಿಕವಾಗಿ ಸುಮಾರು 3 ಕೋ.ರೂ. ಉಳಿತಾಯದ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next