Advertisement

Flood; ಅಸ್ಸಾಂನಲ್ಲಿ ಭೀಕರ ಪ್ರವಾಹ: 4 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿ

07:55 PM Jun 21, 2024 | Team Udayavani |

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಶುಕ್ರವಾರ ಮತ್ತಷ್ಟು ಬಿಗಡಾಯಿಸಿದ್ದು ಹಲವಾರು ಜಿಲ್ಲೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ತತ್ತರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಗುರುವಾರ ಸಂಜೆಯವರೆಗೂ ವರದಿಗಳ ಪ್ರಕಾರ ಕೊಪಿಲಿ, ಬರಾಕ್ ಮತ್ತು ಕುಶಿಯಾರಾ ಸೇರಿದಂತೆ ಹಲವು ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬಜಾಲಿ, ಬಕ್ಸಾ, ಬಾರ್ಪೇಟಾ, ಬಿಸ್ವನಾಥ್, ಕ್ಯಾಚರ್, ದರ್ರಾಂಗ್, ಗೋಲ್ಪಾರಾ, ಹೈಲಕಂಡಿ, ಹೋಜೈ, ಕಮ್ರೂಪ್, ಕರೀಮ್‌ಗಂಜ್, ಕೊಕ್ರಜಾರ್, ಲಖಿಂಪುರ, ನಾಗಾಂವ್, ನಲ್ಬರಿ, ಸೋನಿತ್‌ಪುರ್, ದಕ್ಷಿಣ ಸಲ್ಮಾರಾ, ತಮುಲ್‌ಪುರ್ ಮತ್ತು ಉದಲ್‌ಗುರಿ ಸೇರಿ 19 ಜಿಲ್ಲೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ತೊಂದರೆಗೀಡಾಗಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿರುವುದು ಪ್ರವಾಹಕ್ಕೆ ಕಾರಣವಾಗಿದೆ. ಕರೀಂಗಂಜ್ ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿದ್ದು, 2.5 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ. ದರ್ರಾಂಗ್ ಮತ್ತು ತಮುಲ್ಪುರ್ ನಲ್ಲೂ ಪರಿಸ್ಥಿತಿ ಗಂಭೀರವಾಗಿದೆ.ಪೀಡಿತ ಜಿಲ್ಲೆಗಳಲ್ಲಿ ಪ್ರವಾಹದ ನೀರಿನಿಂದ ಹಲವಾರು ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ.

100ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 14,000ಕ್ಕೂ ಹೆಚ್ಚು ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.ಅಸ್ಸಾಂನಲ್ಲಿ ಈ ವರ್ಷದ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಲ್ಲಿ ಬಲಿಯಾದವರ ಸಂಖ್ಯೆ 36 ಕ್ಕೆ ತಲುಪಿದೆ.

ಖರ್ಗೆ ಟೀಕೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸ್ಸಾಂನಲ್ಲಿ ಪ್ರವಾಹ ನಿರ್ವಹಣೆ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಸ್ಸಾಂ ಅನ್ನು ಪ್ರವಾಹ ಮುಕ್ತಗೊಳಿಸುವ ಭರವಸೆ ನೀಡಿದ್ದ “ಡಬಲ್ ಎಂಜಿನ್ ಮೋದಿ-ಶಾ” ಜನರಿಗೆ ಸಂಪೂರ್ಣವಾಗಿ ದ್ರೋಹ ಮಾಡಿದ್ದಾರೆ ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.

Advertisement

“ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. 15 ಜಿಲ್ಲೆಗಳಲ್ಲಿ ಲಕ್ಷಾಂತರ ಜನರು ಬಾಧಿತರಾಗಿದ್ದಾರೆ ಮತ್ತು ಇದುವರೆಗೆ 36 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಅಸ್ಸಾಂ ಜನತೆಯೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ಸಂತ್ರಸ್ತರ ಕುಟುಂಬಗಳಿಗೆ ನಮ್ಮ ತೀವ್ರ ಸಂತಾಪಗಳು” ಎಂದು ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next