Advertisement

KPL ಕೂಟದಿಂದ ಹಿಂದೆ ಸರಿದ ಮಂಗಳೂರು ಯುನೈಟೆಡ್

11:45 AM Aug 07, 2017 | Team Udayavani |

ಮಹಾನಗರ: ಜಾಗತಿಕ ಕ್ರಿಕೆಟ್‌ ನಲ್ಲಿ ತನ್ನದೇ ಛಾಪು ಮೂಡಿಸಿರುವ ಐಪಿಎಲ್‌ ಟಿ 20 ಕ್ರಿಕೆಟ್‌ನಿಂದ ಪ್ರೇರಣೆ ಪಡೆದು ರಚಿಸಲಾದ ಕರ್ನಾಟಕ ಪ್ರೀಮಿ ಯರ್‌ ಲೀಗ್‌ (ಕೆಪಿಎಲ್‌) ಟಿ 20 ಯ ಈ ಬಾರಿಯ ಕೂಟದಿಂದ ಕರಾವಳಿಯ ಪ್ರತಿಷ್ಠಿತ ಹಾಗೂ 2010ರ ಚಾಂಪಿಯನ್‌ “ಮಂಗಳೂರು ಯುನೈಟೆಡ್‌’ ತಂಡ ಹಿಂದೆ ಸರಿದಿದೆ.

Advertisement

ಸೆಪ್ಟಂಬರ್‌ನಲ್ಲಿ ಶುರುವಾಗಲಿರುವ ಕೆಪಿಎಲ್‌ ಕೂಟಕ್ಕೆ, ಹರಾಜು ಪ್ರಕ್ರಿಯೆ ರವಿವಾರ ನಡೆಯಿತು.ಕಳೆದ ನಾಲ್ಕು ಆವೃತ್ತಿಯಲ್ಲಿ ಭಾಗವ ಹಿಸಿದ್ದ ಕರಾವಳಿಗರ ನೆಚ್ಚಿನ ತಂಡ ಮಂಗಳೂರು ಯುನೈಟೆಡ್‌ ಈ ಬಾರಿ ಕಣಕ್ಕಿಳಿಯದಿರುವುದು ಕರಾವಳಿ ಭಾಗದ ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸ‌ರ ತರಿಸಿದೆ. ಕಬಡ್ಡಿ ಮೂಲಕವೇ ಗಮನ ಸೆಳೆಯುತ್ತಿರುವ ಕರಾವಳಿ ಭಾಗದಲ್ಲಿ ಕ್ರಿಕೆಟ್‌ ಬಗ್ಗೆ ಒಲವು ಮೂಡಿಸುವಲ್ಲಿ ಕೆಪಿಎಲ್‌ನ ಮಂಗಳೂರು ತಂಡ ಶ್ರಮಿಸಿತ್ತು. ಈ ಬಗ್ಗೆ ಮಂಗಳೂರು ಯುನೈಟೆಡ್‌ ತಂಡದ ಯಜಮಾನರಾದ, ಶಾಸಕ ಮೊಯಿದಿನ್‌ ಬಾವ ಅವರಲ್ಲಿ ವಿಚಾರಿಸಿದಾಗ ಅವರು ನೀಡುವ ಉತ್ತರವೇ ಬೇರೆ.

‘ರಾಜಕೀಯ ಒತ್ತಡದ ಕೆಲವು ಕಾರಣದಿಂದ ಈ ಬಾರಿಯ ಕೂಟಕ್ಕೆ ಮಂಗಳೂರು ತಂಡವನ್ನು ಆಡಿಸುತ್ತಿಲ್ಲ. ಮುಂದಿನ ವರ್ಷ ನಮ್ಮ ಸ್ಪರ್ಧೆ ಇರಲಿದೆ’ ಎನ್ನುತ್ತಾರೆ. “ರಾಜಕೀಯ ಕಾರಣದ ನೆಪವೊಡ್ಡಿ ಕೂಟದಿಂದ ಮಂಗಳೂರು ತಂಡವನ್ನು ವಾಪಸು ಪಡೆಯಬಾರದಿತ್ತು. ಆಟದ ಹೊಣೆಯನ್ನು ಬೇರೆಯವರಿಗೆ ವಹಿಸಬೇಕಿತ್ತು. ಮಂಗಳೂರು ತಂಡದ ಮೂಲಕ ಇನ್ನಷ್ಟು ಕ್ರಿಕೆಟ್‌ ಪಟುಗಳಿಗೆ ವೇದಿಕೆ ಒದಗಿಸುವಲ್ಲಿ ಪ್ರಯತ್ನ ಮಾಡ ಬಹುದಿತ್ತು’ ಎನ್ನುವುದು ಹೆಸರು ಹೇಳಲಿಚ್ಛಿಸದ ಕ್ರಿಕೆಟ್‌ ಆಟಗಾರರೋರ್ವರ ಅಭಿಪ್ರಾಯ.

ಈ ಬಗ್ಗೆ ಬಾವಾ ಅವರ ಜತೆಯಲ್ಲೇ ಮಾತನಾಡಿದಾಗ, ‘ಈ ಹಿಂದಿನ ನಮ್ಮ ಆವೃತ್ತಿಗಳನ್ನು ಗಮನಿಸುವುದಾದರೆ, ನಾನು ಪ್ರತಿ ಹಂತದಲ್ಲೂ ತಂಡದೊಂದಿಗೆ ಗುರುತಿಸಿಕೊಂಡಿದ್ದೆ. ಆಟಗಾರರು ಆಡುವಾಗ, ಅಭ್ಯಾಸದಲ್ಲಿರುವಾಗ ಅವರೊಟ್ಟಿಗೇ ಇದ್ದು, ಪ್ರೋತ್ಸಾಹ ನೀಡುತ್ತ ಬಂದಿದ್ದೇನೆ. ಹೀಗಾಗಿ ಮಾಲಕನಾಗಿ ಪ್ರತಿ ಆಗುಹೋಗುಗಳಲ್ಲಿ ತಂಡದ ಜತೆಗೆ ಸ್ಪಂದಿಸುತ್ತಿದ್ದೆ. ಸಾಮಾನ್ಯವಾಗಿ ಪಂದ್ಯಾಟದಲ್ಲಿ ಭಾಗವಹಿಸಿದರೆ ಕನಿಷ್ಠ 2 ತಿಂಗಳು ತಂಡಕ್ಕಾಗಿಯೇ ಸಮಯವನ್ನು ಮೀಸಲಿಡಬೇಕು. ಆದರೆ, ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಪಂದ್ಯಾಟದಲ್ಲಿ ಭಾಗವಹಿಸಿ, ತಂಡದೊಂದಿಗೇ ಇದ್ದರೆ ಕ್ಷೇತ್ರದ ಕೆಲಸ ಕಾರ್ಯಗಳು ನಡೆಯದು. ಆದ್ದರಿಂದ ಈ ಬಾರಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ. ತಂಡವನ್ನು ಇನ್ನೊಬ್ಬರ ಕೈಗೆ ಒಪ್ಪಿಸುವುದೂ ನನಗೆ ಇಷ್ಟವಿಲ್ಲ’ ಎನ್ನುತ್ತಾರೆ.

ಅಮೋಘ ಪ್ರದರ್ಶನ
ಐಪಿಎಲ್‌ನಲ್ಲಿ ಮಿಂಚಿದ ಮಂಗಳೂರು ತಂಡದ ಕರುಣ್‌ ನಾಯರ್‌ 2009ರಲ್ಲಿ ಕೆಪಿಎಲ್‌ನಲ್ಲಿ ಮಂಗಳೂರು ಯುನೈಟೆಡ್‌ ತಂಡದಲ್ಲಿದ್ದ. ಕರುಣ್‌ ನಾಯರ್‌ ಐಪಿಎಲ್‌ನ 9ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ 4 ಕೋ.ರೂ.ಗೆ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದರು. ರಾಜಸ್ಥಾನ ತಂಡದಲ್ಲೂ ಆಡಿದ್ದರು. ಶತಕಗಳ ಮೂಲಕ ಅವರು ಸುದ್ದಿಯಾಗಿದ್ದರು.

Advertisement

ಉಳಿದಂತೆ ರೋಣಿತ್‌ ಮೋರೆ ಮಂಗಳೂರು ತಂಡದ ಮೂಲಕ ಸಾಧನೆ ಮಾಡಿದ್ದರು. ಎಂಪಿಎಲ್‌ನಲ್ಲಿ ಆಡಿದ್ದ ಮೂಲತಃ ಮಂಗಳೂರಿನ ನಿಶಿತ್‌ರಾಜ್‌, ಅಕ್ಷಯ್‌ ಬಲ್ಲಾಳ್‌, ಮಾಸೂಕ್‌ ಹುಸೈನ್‌ ಕೆಪಿಎಲ್‌ನಲ್ಲಿ ಮಿಂಚಿದ್ದರು. ಅಮೋಘ ಆಟದ ಮೂಲಕ ಮಂಗಳೂರು ಯುನೈಟೆಡ್‌ ತಂಡವು 2010ರ ಕೆಪಿಎಲ್‌ನ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 2009ರಲ್ಲಿ ಆರಂಭವಾದ ಕೆಪಿಎಲ್‌ನ ಮೊದಲ ಆವೃತ್ತಿಯಲ್ಲಿ ಮಂಗಳೂರು ಯುನೈಟೆಡ್‌ 6ನೇ ಸ್ಥಾನದಲ್ಲಿತ್ತು. 2014ರಲ್ಲಿ ನಡೆದ ರನ್ನರ್‌ ಅಪ್‌ ತಂಡವಾಗಿ ಹಾಗೂ 2015ರಲ್ಲಿ ಸೆಮಿಫೈನಲ್‌ ಪ್ರವೇಶಿಸಿತ್ತು.  

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next