Advertisement

Mangaluru ಶ್ರೀ ಶಾರದೋತ್ಸವ ಸಂಪನ್ನ

11:39 PM Oct 25, 2023 | Team Udayavani |

ಮಂಗಳೂರು: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನ ಆಚಾರ್ಯಮಠ ವಠಾರದ 101ನೇ ವರ್ಷದ ಶಾರದಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ಬುಧವಾರ ರಾತ್ರಿ ಸಂಭ್ರಮೋಲ್ಲಾಸಗಳಿಂದ ನಡೆಯಿತು.

Advertisement

ಅ. 19ರಿಂದ ಪೂಜಿಸಲ್ಪಟ್ಟ ಶಾರದಾ ಮಾತೆಯನ್ನು ಸರ್ವಾಲಂಕೃತಗೊಳಿಸಿ, ಬುಧವಾರ ಸಂಜೆಯಿಂದ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಸಹಸ್ರಾರು ಭಕ್ತರು ಶಾರದಾ ಮಾತೆಯನ್ನು ವೀಕ್ಷಿಸಿ ಕಣ್ತುಂಬಿಕೊಂಡು ಪ್ರಸಾದ ಸ್ವೀಕರಿಸಿದರು.

ರಾತ್ರಿ ಭಕ್ತರಿಂದ ದುರ್ಗಾ ಶ್ಲೋಕದ ಸಾಮೂಹಿಕ ಪಠಣದ ನಡುವೆ “ಗೋವಿಂದಾ ಅನ್ನಿ ಗೋವಿಂದಾ’ ಎನ್ನುವ ಘೋಷಗಳೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.

ಬಳಿಕ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆಯು ಉತ್ಸವ ಸ್ಥಾನದಿಂದ ಹೊರಟಿತು. ಶ್ರೀ ಮಹಾಮಾಯಿ ದೇವಸ್ಥಾನ, ಗದ್ದೆಕೇರಿ, ಕೆನರಾ ಹೈಸ್ಕೂಲ್‌ ಹಿಂಬದಿ ರಸ್ತೆಯಿಂದ ನವಭಾರತ ವೃತ್ತ, ಅಮ್ಮೆಂಬಳ ಸುಬ್ಬರಾವ್‌ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರಾ ಟಾಕೀಸ್‌, ಬಸವನ ಗುಡಿ, ಚಾಮರಗಲ್ಲಿ, ರಥಬೀದಿಯಾಗಿ ಶ್ರೀ ಮಹಾಮಾಯಾ ತೀರ್ಥದಲ್ಲಿ ವಿಸರ್ಜನೆ ನಡೆಯಿತು.

ಸ್ವಯಂಸೇವಕರು ಭುಜ ಸೇವೆಯ ಮೂಲಕ ಶ್ರೀ ಮಾತೆಯ ವಿಗ್ರಹದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ವಿವಿಧ ವೇಷಧಾರಿಗಳಿಂದ ವಿಶೇಷ ಟ್ಯಾಬ್ಲೋಗಳು, ಹರಕೆಯ ಶಾರದಾ ಹುಲಿವೇಷದ ಟ್ಯಾಬ್ಲೋಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು.

Advertisement

ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಆಚಾರ್ಯರ ಮಠದಲ್ಲಿ ನಡೆಸಲಾಗುತ್ತಿರುವ ಮಂಗಳೂರು ಶ್ರೀ ಶಾರದಾ ಮಹೋತ್ಸವ 100 ವರ್ಷ ಪೂರ್ಣಗೊಳಿಸಿ ಈ ಬಾರಿ 101ನೇ ವರ್ಷದ ಸಂಭ್ರಮದಲ್ಲಿದೆ. 10 ದಿನಗಳ ಪರ್ಯಂತ ಶ್ರೀ ಮಾತೆಯ ವಿಗ್ರಹಕ್ಕೆ ವಿವಿಧ ದೇವಿಯ ಅವತಾರಗಳ ಅಲಂಕಾರಗಳು ನಡೆದವು. ಸಹಸ್ರಾರು ಕುಂಕುಮಾರ್ಚನೆ ಸೇವೆ, ರಂಗ ಪೂಜೆ, ಸಹಸ್ರ ಚಂಡಿಕಾ ಮಹಾಯಾಗ, ಮಕ್ಕಳಿಗೆ ವಿದ್ಯಾರಂಭ ನೆರವೇರಿತು.

ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಡಾ| ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಆಚಾರ್ಯ ಮಠದ ಪಂಡಿತ್‌ ನರಸಿಂಹ ಆಚಾರ್ಯ, ಶ್ರೀ ವೆಂಕಟರಮಣ ದೇಗುಲದ ಮೊಕ್ತೇಸರರಾದ ಸಾಹುಕಾರ್‌ಕಿರಣ್‌ ಪೈ, ಸತೀಶ್‌ ಪ್ರಭು, ಗಣೇಶ್‌ ಕಾಮತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next