ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕಗಳು ತುಂಬಿದ್ದ ಬ್ಯಾಗ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಇಂದು ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗುತ್ತಿದ್ದಂತೆ, ಈ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಮಂಗಳೂರು ನಗರ ಪೊಲೀಸರ ತನಿಖಾ ತಂಡವು ಇದೀಗ ಬೆಂಗಳೂರಿಗೆ ತೆರಳಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಈ ತನಿಖಾ ತಂಡವು ಆರೋಪಿಯನ್ನು ವಿಚಾರಣೆಗೊಳಪಡಿಸಲಿದೆ ಮತ್ತು ಅಗತ್ಯ ಕಾನೂನು ಕ್ರಮಗಳನ್ನು ಜಾರಿಗೊಳಿಸಲಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಹರ್ಷ ಐ.ಪಿ.ಎಸ್. ಅವರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿತ್ತು. ಅದರಲ್ಲಿ ಸ್ಪೋಟಕ ಪತ್ತೆಯಾದ ಕೂಡಲೇ ಪೊಲೀಸರು ಸುರಕ್ಷಿತ ಕ್ರಮ ಕೈಗೊಂಡಿದ್ದರು. ನಂತರ ಅದೇ ದಿನ ಸಂಜೆ ಕೆಂಜಾರು ಮೈದಾನದಲ್ಲಿ ಅದನ್ನು ನಿಯಂತ್ರಿತ ಸ್ಫೋಟ ಮಾಡಲಾಗಿತ್ತು.
ರಾಜ್ಯವನ್ನೇ ತಲ್ಲಣಗೊಳಿಸಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸಿಸಿಟಿವಿಯಲ್ಲಿ ದಾಖಲಾಗಿದ್ದ ಶಂಕಿತ ವ್ಯಕ್ತಿಯ ಫೋಟೋವನ್ನು ಬಿಡುಗಡೆ ಮಾಡಿದ್ದರು.
ಆರೋಪಿಯ ಪತ್ತೆಗಾಗಿ ಮಂಗಳೂರು ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದರು.