Advertisement

ಮಾನವ ಕಳ್ಳಸಾಗಣೆ ಭೇದಿಸಿದ ಮಂಗಳೂರು ಪೊಲೀಸರು : ಶ್ರೀಲಂಕಾದ 38 ನಾಗರಿಕರ ಬಂಧನ

01:44 AM Jun 12, 2021 | Team Udayavani |

ಮಂಗಳೂರು : ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿರುವ ಶ್ರೀಲಂಕಾದ 38 ಪ್ರಜೆಗಳು ಮತ್ತು ನಗರದಲ್ಲಿ ಅವರಿಗೆ ಆಶ್ರಯ ನೀಡಿದ 6 ಮಂದಿ ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲವೊಂದನ್ನು ಬೇಧಿಸಿದ್ದಾರೆ.

Advertisement

ಏಜೆಂಟ್‌ಗಳ ಮೂಲಕ ಶ್ರೀಲಂಕಾದಿಂದ ತ.ನಾಡಿಗೆ ಬಂದು ಅಲ್ಲಿಂದ ಬೆಂಗಳೂರಿಗೆ, ಬಳಿಕ ಮಂಗಳೂರಿಗೆ ಬಂದಿರುವ ಇವರು ಕೆನಡಕ್ಕೆ ಹೋಗುವ ಯೋಜನೆ ಹಾಕಿದ್ದರು. ಶ್ರೀಲಂಕಾದ ಏಜೆಂಟ್‌ ಇವರಿಗೆ ಕೆನಡದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಪ್ರತಿಯೊಬ್ಬರಿಂದ 10 ಲಕ್ಷ ರೂ.ವರೆಗೆ ಹಣ ಪಡೆದಿರುವ ಮಾಹಿತಿ ಲಭಿಸಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿ ಕುಮಾರ್‌ ತಿಳಿಸಿದ್ದಾರೆ.

ಮಾ. 17ರಂದು ಶ್ರೀಲಂಕಾದಿಂದ ದೋಣಿಯಲ್ಲಿ ಇವರನ್ನು ತಮಿಳುನಾಡಿನ ತೂತುಕುಡಿಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿಂದ ಬಸ್‌ ಪ್ರಯಾಣ ಮಾಡಿ ಮಧುರೈ, ಸೇಲಂ ಮೂಲಕ ಬೆಂಗಳೂರಿಗೆ ಕರೆದೊಯ್ಯಲಾಯಿತು. ಅಲ್ಲಿ ಸಣ್ಣ ಗುಂಪು ಮಾಡಿ ಒಂದೊಂದೇ ಗುಂಪನ್ನು ಮಂಗಳೂರಿಗೆ ಕಳುಹಿಸಲಾಗಿತ್ತು. ನಗರದ 2 ಲಾಡ್ಜ್ಗಳು ಮತ್ತು ಒಂದು ಖಾಸಗಿ ಮನೆ ಯಲ್ಲಿ ಸುಮಾರು ಒಂದೂವರೆ ತಿಂಗಳು ಆಶ್ರಯ ನೀಡಲಾಗಿತ್ತು.

ಮಾನವ ಕಳ್ಳಸಾಗಣೆ ಪ್ರಕರಣ
ಇದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಗಂಭೀರ ಪ್ರಕರಣವಾಗಿದ್ದು, ಮಾನವ ಕಳ್ಳ ಸಾಗಾಟವೂ ಹೌದು. ವಶವಾಗಿರುವವರಲ್ಲಿ ಹೆಚ್ಚಿನವರು ಉತ್ತರ ಶ್ರೀಲಂಕಾ ಭಾಗದವರು ಎಂಬ ಮಾಹಿತಿ ಲಭಿಸಿದೆ. ಇವರ ವಿರುದ್ಧ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ 103/2021 ಕಲಂ 120 (ಬಿ), 370, 420 ಐಪಿಸಿ, ವಿದೇಶೀ ಕಾಯಿದೆ 1964ರ ಸೆಕ್ಷನ್‌ 14 ಮತ್ತು ಪಾಸ್‌ಪೋರ್ಟ್‌ ಕಾಯಿದೆ 1967ರ ಸೆಕ್ಷನ್‌ 12(1)(ಎ)ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next