Advertisement

ಮಂಗಳೂರು: ಮನೆ ಮಂದಿ ಹೊರಗೆ- ಕಳ್ಳರು ಮನೆಯೊಳಗೆ !

06:06 PM May 22, 2024 | Team Udayavani |

ಮಹಾನಗರ: ಮಂಗಳೂರು ನಗರ ವಾಸಿ ಗಳೇ ಎಚ್ಚರ. ಮನೆಗೆ ಬೀಗ ಹಾಕಿ ಕಾರ್ಯಕ್ರಮಕ್ಕೋ, ಸಂಬಂಧಿಕರ ಮನೆಗೋ ಅಥವಾ ಪ್ರವಾಸಕ್ಕೋ ಹೋಗುವಾಗ ಹುಷಾರಾಗಿರಿ. ಯಾಕೆಂದರೆ ಕಳ್ಳರು ಮನೆಯನ್ನು ದೋಚುವ ಅಪಾಯವಿದೆ!
ಕಳೆದ ಕೇವಲ 12 ದಿನಗಳ ಅಂತರದಲ್ಲಿ ನಗರದಲ್ಲಿ ಮೂರು ಮನೆಗಳಲ್ಲಿ ಕಳ್ಳತನ ನಡೆದಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ
ಚಿನ್ನಾಭರಣಗಳು ಕಳ್ಳರ ಪಾಲಾಗಿವೆ. ಮನೆಗೆ ಬಾಗಿಲು ಹಾಕಿ ಹೊರಗೆ ಹೋಗುವುದನ್ನೇ ಕಾಯುತ್ತಿರುವ ಕಳ್ಳರು ಬೀಗ ಮುರಿದು ನಗ, ನಗದು ದೋಚುತ್ತಾರೆ ಎಂಬ ಸಂಶಯವಿದೆ.

Advertisement

ಮೇ 5ರಿಂದ ಮೇ 17ರ ವರೆಗೆ ಕಂಕನಾಡಿ ನಗರ, ಬರ್ಕೆ ಠಾಣಾ ವ್ಯಾಪ್ತಿಗಳಲ್ಲಿ ನಡೆದಿರುವ ಕಳ್ಳತನ ಕೃತ್ಯಗಳಲ್ಲಿ ಒಂದಕ್ಕೊಂದು ಸಾಮ್ಯತೆ ಕಂಡುಬರುತ್ತಿದ್ದು ಒಂದೇ ಗ್ಯಾಂಗ್‌ ವ್ಯವಸ್ಥಿತವಾಗಿ ಕೃತ್ಯ ಎಸಗುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಜನರಿಲ್ಲದ ಮನೆಗಳೇ ಟಾರ್ಗೆಟ್‌
ಘಟನೆ 1: ಮನೆಯವರು ಮೈಸೂರಿಗೆ ಮೇ 5ರಂದು ಪ್ರವಾಸಕ್ಕೆ ಹೋಗಿದ್ದರು. ಮೇ 7ರಂದು ಬಂದು ನೋಡಿದಾಗ ಮನೆಯಲ್ಲಿದ್ದ
ಅಂದಾಜು 1.60 ಲ.ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು.

ಘಟನೆ 2: ಮೇ 10ರಂದು ಮನೆಯವರು ಯಕ್ಷಗಾನ ನೋಡಲು ಹೋಗಿದ್ದರು. ವಾಪಸ್‌ ಬಂದಾಗ ಮನೆಯಲ್ಲಿದ್ದ ಚಿನ್ನದ ಬಳೆ, ಲ್ಯಾಪ್‌ಟಾಪ್‌, ನಗದು ಇರಲಿಲ್ಲ.

ಘಟನೆ 3: ಮನೆಯವರು ಮೇ 17ರಂದು ಸಂಜೆ ಮನೆಯಿಂದ ಸಂಬಂಧಿಕರ ಮನೆಗೆ ಹೋಗಿದ್ದರು. ಮೇ 20ರಂದು ಮಧ್ಯಾಹ್ನ ಬಂದು ನೋಡಿದಾಗ ಮನೆಯಲ್ಲಿದ್ದ ಚಿನ್ನದ ಪೆಂಡೆಂಟ್‌, ಬ್ರಾಸ್ಲೆಟ್‌, ಬೆಳ್ಳಿಯ ಉಂಗುರ, ವಾಚ್‌ ಕಳವಾಗಿತ್ತು.

Advertisement

ಮತ್ತೆ ಕ್ರಿಯಾಶೀಲರಾದ ಕಳ್ಳರು
ಕುಲಶೇಖರದಲ್ಲಿ ಜ. 11ರಂದು ಮನೆಯವರು ಬೆಳಗ್ಗೆ ಹೊರಗಡೆ ಹೋಗಿ ಅಪರಾಹ್ನ ವಾಪಸ್‌ ಬಂದಾಗ ಮನೆಯ ಹೆಂಚುಗಳನ್ನು ತೆಗೆದು ಅಂದಾಜು 3.50 ಲ.ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿತ್ತು. ಡಿ. 19ರಂದು ರಾತ್ರಿ ನಗರದ ಮನೆಯೊಂದರಿಂದ 160 ಗ್ರಾಂ ಚಿನ್ನಾಭರಣ, 6,000 ರೂ. ನಗದು ಹಣ ಕಳವು ಮಾಡಲಾಗಿತ್ತು. ಕದ್ರಿಯ ಬಾಡಿಗೆ
ಮನೆಯಲ್ಲಿದ್ದವರು ಮೈಸೂರಿಗೆ ಊರಿಗೆಂದು ತೆರಳಿ ವಾಪಸ್‌ ಜ. 16ರಂದು ಬಂದು ನೋಡಿದಾಗ ಮನೆಯ ಬಾಗಿಲಿನ ಲಾಕ್‌ ಮುರಿದು ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿರುವುದು ಗೊತ್ತಾಗಿತ್ತು. ಕೆಲವು ಸಮಯದ ಅನಂತರ ಮತ್ತೆ ಕಳ್ಳರು ಕ್ರಿಯಾಶೀಲರಾಗಿದ್ದಾರೆ.

ಆಸ್ಪತ್ರೆ, ಪಿಜಿಗೂ ಲಗ್ಗೆ ಹಾಕ್ತಾರೆ ಹುಷಾರ್‌
*ಉರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಟ್ಟಾರದ ಪಿಜಿಯಲ್ಲಿದ್ದವರು ಮೇ 9ರಂದು ಸಂಜೆ ಹೊರಗೆ ಹೋಗಿ ರಾತ್ರಿ 7.20ಕ್ಕೆ ಬಂದು ನೋಡಿದಾಗ ಲ್ಯಾಪ್‌ಟಾಪ್‌, ಮೊಬೈಲ್‌ ಕಳವಾಗಿತ್ತು.

*ನಗರದ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿಯೊಬ್ಬರು ಮೇ 18ರಂದು ರಾತ್ರಿ 9ಕ್ಕೆ ಮನೆ ಲಾಕ್‌ ಮಾಡಿ ಆಸ್ಪತ್ರೆಗೆ ಹೋಗಿದ್ದ ರು. ಮೇ 20ರ ಬೆಳಗ್ಗೆ ಬಂದು ನೋಡಿದಾಗ ಬೀಗ ಒಡೆದು 74,000 ರೂ. ಕಳವಾಗಿತ್ತು.

ಸಾರ್ವಜನಿಕರು ಏನು ಮಾಡಬಹುದು?
*ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಮನೆಯಲ್ಲಿ ಚಿನ್ನ, ನಗದು ಇಟ್ಟು ಹೋಗಬಾರದು. ಬದಲಾಗಿ ಬ್ಯಾಂಕ್‌ನಲ್ಲೇ ಇಡಬೇಕು.

*ಮನೆಗೆ ಸಿಸಿ ಕೆಮರಾ ಅಳವಡಿಸುವುದು ಸೂಕ್ತ.

*ಅಲರ್ಟ್‌ ಮಾಡುವಂತಹ ಹಲವು ಸಾಧನಗಳು ಲಭ್ಯವಿದ್ದು ಅವುಗಳನ್ನು ಕೂಡ ಗೌಪ್ಯವಾಗಿ ಅಳವಡಿಸಬಹುದು.

*ತುಂಬ ದಿನ ಮನೆ ಬಿಟ್ಟು ಹೋಗುವುದಾದರೆ ಸಮೀಪದ ಪೊಲೀಸ್‌ ಠಾಣೆಗೆ ತಿಳಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next