Advertisement

ಮಂಗಳೂರು ಶಾಂತಿಪ್ರಿಯನಗರ;ಇಲ್ಲಿ ಪ್ರಕ್ಷುಬ್ಧತೆಇಲ್ಲ:ಟಿ.ಆರ್‌. ಸುರೇಶ್

10:56 AM Mar 08, 2018 | |

ಮಹಾನಗರ: ಯಾವುದೇ ಕಾರಣಕ್ಕೂ ಮಂಗಳೂರು ಕೋಮುಗಲಭೆ ಪೀಡಿತ ಪ್ರದೇಶವಲ್ಲ. ಇಲ್ಲಿ ಯಾವುದೇ ಪಕ್ಷುಬ್ಧ ವಾತಾವರಣವಿಲ್ಲ. ವದಂತಿಗಳನ್ನು ಹರಡಿಸುವ ಕೆಲಸ ನಡೆಯುತ್ತಿದೆ. ಇಂತವರ ಮೇಲೆ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಹೇಳಿದರು.

Advertisement

ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಆಶ್ರಯದಲ್ಲಿ ಬುಧವಾರ ಆಯೋಜಿಸಲಾದ ಸಂವಾದಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜ್ಞಾವಂತ, ಅತ್ಯಂತ ಶಾಂತಿಪ್ರಿಯ ನಾಗರಿಕರೇ ಇಲ್ಲಿದ್ದಾರೆ. ಇತರ ಜಿಲ್ಲೆ, ರಾಜ್ಯದಲ್ಲಿ ನಡೆಯುವಂತಹುದೇ ಘಟನೆ ಇಲ್ಲಿಯೂ ಆಗುತ್ತಿದೆ. ಆದರೆ, ಮಂಗಳೂರಿನಲ್ಲಿ ನಡೆಯುವ ಘಟನೆಯನ್ನು ವೈಭವೀಕರಿಸಲಾಗುತ್ತಿದೆ ಎಂದರು.

ತಾನು 8 ತಿಂಗಳ ಹಿಂದೆ ಮಂಗಳೂರು ಆಯುಕ್ತನಾಗಿ ಆಗಮಿಸುವ ವೇಳೆಯಲ್ಲಿ ಇಲ್ಲಿಯ ಜವಾಬ್ದಾರಿ ಬೇಡ ಎಂದು ಹೇಳಿದ್ದೆ. ಯಾಕೆಂದರೆ ಇಲ್ಲಿ ಕೆಲಸ ಮಾಡುವುದು ಕಷ್ಟ ಎಂಬ ಭಾವನೆ ಇತ್ತು. ಆದರೆ, ಬಂದ ಮೇಲೆ ತಿಳಿಯಿತು, ಇಲ್ಲಿನ ನಿಜರೂಪ ಬೇರೆಯೇ ಆಗಿದೆ. ಹೊರ ಭಾಗದಲ್ಲಿ ಮಂಗಳೂರಿನ ಬಗ್ಗೆ ಇದ್ದ ದೃಷ್ಟಿಕೋನ ಹಾಗೂ ನೈಜ ಸ್ಥಿತಿಗೆ ಪೂರ್ಣ ಬದಲಾವಣೆ ಇದೆ ಎಂದರು.

ಯಾವುದೇ ಪ್ರದೇಶದಲ್ಲಿ ನಡೆಯುವ ಘಟನೆಗಳೇ ಇಲ್ಲಿ ಕೂಡ ನಡೆಯುತ್ತಿದೆ. ಆದರೆ, ಇಲ್ಲಿ ಎರಡು ವ್ಯಕ್ತಿಗಳ ನಡುವೆ ಕೋಮು ವಿಚಾರ ಇದ್ದಾಗ ಅದು ದೊಡ್ಡ ಘಟನೆಯಾಗಿ ಮಾರ್ಪಾಡು ಹೊಂದುತ್ತದೆ. ಒಂದೇ ಕೋಮಿನ ಮಧ್ಯೆ ಆದರೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಹಜವಾಗಿ ಸಮಾಜ ಅಂದಾಗ ಘಟನೆ- ಘರ್ಷಣೆ ಆಗುತ್ತದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಗಳೂರಿಗಿಂತಲೂ ದೊಡ್ಡ ಪ್ರಮಾಣದ ಘಟನೆ ಬೇರೆ ಜಿಲ್ಲೆಯಲ್ಲಿ ಘಟಿಸಿರುತ್ತದೆ. ಆದರೆ, ಅದು ದೊಡ್ಡ ಮಟ್ಟದಲ್ಲಿ ಪ್ರತಿಧ್ವನಿಸುವುದಿಲ್ಲ ಎಂದು ಅವರು ವಿಶ್ಲೇಷಿಸಿದರು.

2016ರಲ್ಲಿ ಮಂಗಳೂರಿನಲ್ಲಿ 24 ಕೊಲೆ ಆಗಿದ್ದರೆ, 2017ರಲ್ಲಿ 16 ಕೊಲೆ ಆಗಿದೆ. ಇದನ್ನು ಬೇರೆ ಜಿಲ್ಲೆಗೆ ಹೋಲಿಸಿದರೆ ಇತರ ಜಿಲ್ಲೆಗಳಲ್ಲಿ ಇದಕ್ಕಿಂತಲೂ ಅಧಿಕ ಪ್ರಕರಣಗಳಿವೆ. 2016ರಲ್ಲಿ 83 ಕೊಲೆಯತ್ನ ಪ್ರಕರಣಗಳು ಮಂಗಳೂರಲ್ಲಿ ದಾಖಲಾಗಿದ್ದರೆ, 2017ರಲ್ಲಿ 69 ಕೊಲೆಯತ್ನ ಪ್ರಕರಣ ದಾಖಲಾಗಿತ್ತು.

Advertisement

ಇದೂ ಕೂಡ ರಾಜ್ಯದ ಇತರ ಜಿಲ್ಲೆಗೆ ಹೋಲಿಸಿದರೆ ಕಡಿಮೆ. ಬೆಂಗಳೂರು ಒಂದು ವಿಭಾಗದಲ್ಲಿಯೇ ವರ್ಷದಲ್ಲಿ 9,000 ಒಟ್ಟು ಪ್ರಕರಣಗಳು ದಾಖಲಾದರೆ, ನಮ್ಮಲ್ಲಿ ಕೇವಲ 5,000ದಷ್ಟು ಪ್ರಕರಣ ದಾಖಲಾಗಿವೆ. ಆದರೆ, ಬೆಂಗಳೂರಿಗಿಂತ ಮಂಗಳೂರನ್ನೇ ದೊಡ್ಡ ಮಟ್ಟದಲ್ಲಿ ನಕಾರಾತ್ಮಕವಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದು ಸರಿಯಲ್ಲ ಎಂದರು.

ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ ಸಮೀಕ್ಷೆ
ಮಂಗಳೂರಿನಲ್ಲಿ ಸಂಚಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಾವು ಟ್ರಾಫಿಕ್‌ ಮಾನಿಟರಿಂಗ್‌ ಕಮಿಟಿ ರಚಿಸಿದ್ದು, ಆ ಮೂಲಕ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವ ಬಗ್ಗೆ ಅಧ್ಯಯನ, ಸರ್ವೆ ನಡೆಯುತ್ತಿದೆ. ಅದು ಕೊಡುವ ಶಿಫಾರಸಿನ ಆಧಾರದಲ್ಲಿ ಕೆಲವು ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ವಾಹನ ದಟ್ಟಣೆ ಇರುವುದಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ವಾಹನಗಳೂ ಕಾರಣ. ಮಂಗಳೂರು ಬಂಟ್ವಾಳ ಈ ಎರಡೂ ಕಡೆ ಸೇರಿ 2017ರ ಅಂತ್ಯದ ವೇಳೆಗೆ 6,54,000 ವಾಹನಗಳಿದ್ದವು. ಪ್ರತಿ ತಿಂಗಳೂ ಇದಕ್ಕೆ 2 ಸಾವಿರ ಸಂಖ್ಯೆ ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಸ್ಟೇಟ್‌ ಬ್ಯಾಂಕ್‌ ಬಸ್‌ನಿಲ್ದಾಣವನ್ನು ಪಂಪ್‌ವೆಲ್‌ ಗೆ ವರ್ಗಾಯಿಸುವ ಬಗ್ಗೆ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರಪಾಲಿಕೆ ಜತೆ ಚರ್ಚಿಸಲಾಗುತ್ತಿದೆ ಎಂದರು. ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ವತಿಕಾ ಪೈ ಸ್ವಾಗತಿಸಿದರು. ಪದಾಧಿಕಾರಿಗಳು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಸಂಚಾರ ನಿಯಮ ಉಲ್ಲಂಘನೆಯ ಪರಿಶೀಲನೆಗೆ ಹೆಚ್ಚುವರಿ ಸಿಸಿಟಿವಿ
ಪೊಲೀಸರು ತಮ್ಮ ಕರ್ತವ್ಯದ ವೇಳೆ ಸಾರ್ವಜನಿಕರ ಜತೆಗೆ ಉತ್ತಮ ಬಾಂಧವ್ಯ, ವರ್ತನೆ ಸುಧಾರಿಸಿಕೊಳ್ಳುವುದಕ್ಕಾಗಿ ಅವರಿಗೆ ಸಾಫ್ಟ್ ಸ್ಕಿಲ್ಸ್‌(ಸಂವಹನ ಕಲೆ ಬಗ್ಗೆ) ತರಬೇತಿ ನೀಡಲಾಗುತ್ತಿದೆ. ಸದ್ಯ ಸಂಚಾರ ಪೊಲೀಸರು ಸಂಗ್ರಹಿಸುವ ದಂಡವನ್ನು ಕದ್ರಿಯ ಟ್ರಾಫಿಕ್‌ ಅಟೋಮೇಶನ್‌ ಕೇಂದ್ರದಲ್ಲೇ ಶೇ.70ರಷ್ಟು ಕ್ಯಾಶ್‌ಲೆಸ್‌ ಆಗಿದೆ. ಇನ್ನೆರಡು ವರ್ಷಗಳಲ್ಲಿ ಶೇ.100 ಕ್ಯಾಶ್‌ಲೆಸ್‌ ಆಗಲಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ಮಂಗಳೂರಿಗೆ ಸಿಸಿಟಿವಿ ಬರಲಿದೆ. ಈ ಮೂಲಕ ಪೊಲೀಸರು ವಾಹನ ನಿಲ್ಲಿಸಿ ದಂಡ ಸಂಗ್ರಹಿಸುವ ಬದಲು ಸಿಸಿಟಿವಿ ಮೂಲಕ ಮನೆಗೆ ದಂಡದ ನೋಟಿಸ್‌ ಕಳುಹಿಸಲಾಗುತ್ತದೆ. ಜತೆಗೆ, ಪೊಲೀಸರು ಕೂಡ ಅರ್ಧ ಹೆಲ್ಮೆಟ್‌ ಧರಿಸಿದ್ದರೆ ಅವರ ವಿರುದ್ಧವೂ ಕಾನೂನು ಕ್ರಮ ಹಾಗೂ ದಂಡ ಸಂಗ್ರಹಿಸಲಾಗುವುದು ಎಂದು ಟಿ.ಆರ್‌. ಸುರೇಶ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next