Advertisement

ಮಂಗಳೂರಿನಿಂದ ವಿಶೇಷ ರೈಲು ಸೌಲಭ್ಯ : ಝಾರ್ಖಂಡ್‌ಗೆ ತೆರಳಿದ 1,250 ವಲಸೆ ಕಾರ್ಮಿಕರು

12:57 PM May 10, 2020 | sudhir |

ಮಂಗಳೂರು: ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಕಿಯಾಗಿದ್ದ ಸುಮಾರು 1,250 ವಲಸೆ ಕಾರ್ಮಿಕರನ್ನು ಹೊತ್ತ ಮೊದಲ ಹಂತದ ಮಂಗಳೂರು-ಝಾರ್ಖಂಡ್‌ ವಿಶೇಷ ರೈಲಿಗೆ ಶನಿವಾರ ಸಂಜೆ ಮಂಗಳೂರು ಜಂಕ್ಷನ್‌ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.

Advertisement

ಈ ಸಂದರ್ಭ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಲಸೆ ಕಾರ್ಮಿಕರು ಬಾಕಿಯಾಗಿದ್ದಾರೆ. ಎಲ್ಲರನ್ನೂ ಅವರವರ ಊರುಗಳಿಗೆ ಕಳುಹಿಸಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ, ಪಿಯೂಷ್‌ ಗೋಯಲ್‌, ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಹಕಾರದಿಂದ ರೈಲ್ವೇ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಝಾರ್ಖಂಡ್‌ ಮೂಲದ ಸುಮಾರು 4,500 ಮಂದಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಈಗಾಗಲೇ ನೋಂದಣಿ ಮಾಡಿದ್ದು ಅವರಲ್ಲಿ 1,250 ಮಂದಿಯನ್ನು ಶನಿವಾರ ಝಾರ್ಖಂಡ್‌ನ‌ ಬೊಕಾರಾ ನಿಲ್ದಾಣಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿಸಿದರು.

ಇಷ್ಟೇ ಅಲ್ಲದೆ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ತೆರಳುವ ಅಪೇಕ್ಷಿತ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡುವ ಕೆಲಸ ನಡೆಯುತ್ತಿದೆ. ಈವರೆಗೆ ಒಟ್ಟು 21,000 ಮಂದಿ ವಲಸೆ ಕಾರ್ಮಿಕರು ಕಾರ್ಮಿಕ ಇಲಾಖೆ ಮತ್ತು ಸೇವಾ ಸಿಂಧು ಪೋರ್ಟಲ್‌ ಮುಖೇನ ನೋಂದಣಿ ಮಾಡಿಕೊಂಡಿದ್ದಾರೆ. ಅವರೆಲ್ಲರನ್ನು ಯಾವುದೇ ತೊಂದರೆಯಾಗದಂತೆ ಪೂರ್ಣ ರಕ್ಷಣೆಯೊಂದಿಗೆ ಅವರ ಊರುಗಳಿಗೆ ಕಳುಹಿಸಿ ಕೊಡಲಾಗುತ್ತದೆ. ಈ ವ್ಯವಸ್ಥೆ ನೋಡಿಕೊಳ್ಳಲು ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಡಾ| ವೈ. ಭರತ್‌ ಶೆಟ್ಟಿ ಅವರನ್ನು ನಿಯೋಜಿಸಿದ್ದೇವೆ ಎಂದು ನಳಿನ್‌ ಹೇಳಿದರು.

ಶಾಸಕ ವೇದವ್ಯಾಸ ಕಾಮತ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ., ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next