Advertisement

Madanthyar: ಬಾಲಕಿಯರ ಹಾಸ್ಟೆಲ್‌ ಕಟ್ಟಡ ಅನಾಥ!

12:43 PM Nov 28, 2024 | Team Udayavani |

ಮಡಂತ್ಯಾರು: ಸುತ್ತಲೂ ಆಳೆತ್ತರ ಬೆಳೆದ ಹುಲ್ಲು. ಗಿಡಗಂಟಿ, ಬಳ್ಳಿಗಳೆಲ್ಲ ಬೇಕಾಬಿಟ್ಟಿ ಹರಡಿಕೊಂಡಿವೆ. ಕಟ್ಟಡ ಅಲ್ಲಲ್ಲಿ ಪಾಚಿಕಟ್ಟಿದೆ. ಕಬ್ಬಿಣದ ಗೇಟೂ ಪಾಚಿ ಕಟ್ಟಿದೆ. ಹೊರಗಿನಿಂದ ನೋಡಿದರೆ ಯಾವುದೋ ಸಿನೆಮಾದಲ್ಲಿ ಬರುವ ಹಳೆಯ ಬಂಗಲೆಯಂತಿದೆ.

Advertisement

ಹೀಗೆ ಕಾಣುತ್ತಿರುವುದು ಕಣಿಯೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪದ್ಮುಂಜದಲ್ಲಿರುವ ಸರಕಾರಿ ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ನಿಲಯದ ಕಟ್ಟಡ. ಇದು ಮೂರು ವರ್ಷಗಳಿಂದ ವಸ್ತುಶಃ ಅನಾಥವಾಗಿದೆ, ಪಾಳು ಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಈ ಹಾಸ್ಟೆಲ್‌ ಕಟ್ಟಡವನ್ನು 2000-01ರಲ್ಲಿ ನಿರ್ಮಿಸಲಾಗಿದೆ. 2021ರ ವರೆಗೆ ಇಲ್ಲಿ 60ಕ್ಕೂ ಅಧಿಕ ವಿದ್ಯಾರ್ಥಿನಿಯರಿದ್ದು ಸಂಭ್ರಮ ಮನೆ ಮಾಡಿತ್ತು. ಆದರೆ ಕಳೆದ 3-4 ವರ್ಷಗಳಿಂದ ಬಳಕೆ ಇಲ್ಲದೆ ನಿರುಪಯುಕ್ತ ವಾಗಿದೆ.

ಈ ಕಟ್ಟಡ ಈಗ ಹುಲ್ಲು ಪೊದೆಗಳ ನಡುವೆ ಅಡಗಿ ಕುಳಿತಂತಿದ್ದು, ಮೇಲಿನ ಭಾಗ ಮಾತ್ರ ಹೊರಗೆ ಕಾಣಿಸುತ್ತಿದೆ. ಗಾಳಿ, ಮಳೆಗೆ ಟೇರಸ್‌ ಕಟ್ಟಡದ ಮೇಲ್ಛಾವಣಿಯಿಂದ ನೀರು ಬಿದ್ದು ಅಲ್ಲಲ್ಲಿ ಪಾಚಿ ಹಿಡಿದಿದೆ. ರಸ್ತೆಯ ಮುಖ್ಯ ದ್ವಾರದಿಂದ ಬರುವ ಕಬ್ಬಿಣದ ಗೇಟು ತುಕ್ಕು ಹಿಡಿದಿದೆ. ವಿದ್ಯುತ್‌ ಉಪಕರಣಗಳು ಅಲ್ಲಲ್ಲಿ ತಂಡಾಗಿ ನೇತಾಡಿಕೊಂಡಿವೆ. ಹೀಗೇ ಬಿಟ್ಟರೆ ಅದು ಕುಡುಕರ ಅಡ್ಡೆ, ಅಕ್ರಮ ದಂಧೆಗಳ ಆವಾಸ ಸ್ಥಾನವಾಗುವ ಅಪಾಯವಿದೆ.

Advertisement

ನಿರುಪಯುಕ್ತ ಆಗಿದ್ದು ಯಾಕೆ?
ಈ ಹಾಸ್ಟೆಲ್‌ನಲ್ಲಿ 60ಕ್ಕೂ ಅಧಿಕ ವಿದ್ಯಾರ್ಥಿನಿಯರು ಇದ್ದರು. 2020-21ರಲ್ಲಿ ಕೊರೊನಾ ವಕ್ಕರಿಸಿದಾಗ ಮಕ್ಕಳನ್ನು ಮನೆಗೆ ಕಳುಹಿಸಲಾಗಿತ್ತು. ಆಗ ಈ ಕಟ್ಟಡವನ್ನು ಸಂಶಯಿತ ಪ್ರಕರಣಗಳಲ್ಲಿ ಕ್ವಾರಂಟೈನ್‌ ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತಿತ್ತು. 2021-22ನೇ ಸಾಲಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಯಿತು. ಕಡಿಮೆ ಸಂಖ್ಯೆಯಲ್ಲಿದ್ದ ಮಕ್ಕಳನ್ನು ತಾಲೂಕಿನ ಬೇರೆ ಬಾಲಕಿಯರ ನಿಲಯಕ್ಕೆ ಕಳುಹಿಸಿ ಕೊಡಲಾಯಿತು. ಅಲ್ಲಿಂದ ಬಳಿಕ ಇಲಾಖೆ ಈ ಕಟ್ಟಡವನ್ನು ಸಂಪೂರ್ಣವಾಗಿ ಮರೆತಿದೆ. ಹೀಗಾಗಿ ಅದು ಪಾಳುಬಿದ್ದಿದೆ.

ಪಂಚಾಯತ್‌ ಬಳಕೆಗೆ ಮನವಿ
ಈ ಹಾಸ್ಟೆಲ್‌ ಕಣಿಯೂರು ಗ್ರಾಮ ಪಂಚಾಯತ್‌ ಕಚೇರಿಯ ಪಕ್ಕದಲ್ಲೇ ಇದೆ. ನಿಜವೆಂದರೆ ಪಂಚಾಯತ್‌ನಲ್ಲಿ ಸರಿಯಾದ ಸ್ಥಳಾವಕಾಶವಿಲ್ಲ. ಖಾಲಿಯಾಗಿರುವ ಸುಸಜ್ಜಿತ ಹಾಸ್ಟೆಲ್‌ ಕಟ್ಟಡವನ್ನು ಕನಿಷ್ಠ ಬಳಕೆಗಾದರೂ ಕೊಡಿ ಎಂದು ಕಳೆದ ಎರಡು ವರ್ಷಗಳಿಂದ ಮನವಿ ಮಾಡಲಾಗುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ಒಂದು ವೇಳೆ ಪಂಚಾಯತ್‌ ಬಳಕೆಗೆ ನೀಡಿದ್ದರೆ ಅದು ಈ ರೀತಿ ಅನಾಥವಾಗಿ, ಜೀರ್ಣಾವಸ್ಥೆ ತಲುಪುವ ಸ್ಥಿತಿ ಬರುತ್ತಿರಲಿಲ್ಲ ಎಂಬುದು ಜನರ ಅಭಿಪ್ರಾಯ. ನಮ್ಮ ಬಳಕೆಗೆ ಕೊಡಿ ಎಂಬ ಪಂಚಾಯತ್‌ ಮನವಿಯನ್ನು ಬೆಳ್ತಂಗಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೇಲಾಧಿಕಾರಿಗಳಿಗೆ ಕಳುಹಿಸಿದೆ. ಆದರೆ ಅಲ್ಲಿಂದ ಯಾವುದೇ ಉತ್ತರ ಸಿಕ್ಕಿಲ್ಲ ಎನ್ನಲಾಗಿದೆ.

ಕನಿಷ್ಠ ರಕ್ಷಣೆಯಾದರೂ ಮಾಡುತ್ತೇವೆ
2-3 ವರ್ಷಗಳಿಂದ ಬಾಲಕಿಯರ ದಾಖಲಾತಿ ಕಡಿಮೆಯಾಗಿ ಸರಕಾರಿ ಕಟ್ಟಡ ಖಾಲಿಯಾಗಿಯೇ ಇದೆ. ಪಂಚಾಯತ್‌ನ‌ ಅಗತ್ಯ ಕೆಲಸಗಳಿಗೆ ಸ್ಥಳಾವ ಕಾಶದ ಕೊರತೆಯಿದೆ. ಅದುದರಿಂದ ಸಂಬಂಧಿಸಿದ ಇಲಾಖೆಯವರು ಪಂಚಾಯತ್‌ ನೀಡಬೇಕೆಂದು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ಕಟ್ಟಡ ಶಿಥಿಲವಾಗದಂತೆ ರಕ್ಷಿಸಲು ಪಂಚಾಯತ್‌ ಬದ್ಧವಾಗಿದೆ.
-ಸೀತಾರಾಮ ಮಡಿವಾಳ, ಅಧ್ಯಕ್ಷರು, ಕಣಿಯೂರು ಗ್ರಾಪಂ

ರಕ್ಷಣೆ ಮಾಡುತ್ತಿದ್ದೇವೆ!
ಕಚೇರಿಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರ ಹಾಗೂ ಪರಿಕರಗಳನ್ನು ಅಗತ್ಯವಿರುವ ಬೇರೆ ಕಡೆ ಕೊಂಡೊಯ್ಯಲಾಗಿದೆ. ಸದ್ಯ ಕಟ್ಟಡವನ್ನು ಯಾವುದೇ ರೀತಿಯಲ್ಲಿ ಉಪಯೋಗ ಮಾಡದೆ ಬೀಗ ಹಾಕಲಾಗಿದೆ. ಪರ್ಯಾಯ ವ್ಯವಸ್ಥೆಗೆ ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಿ ಮನವಿ ಸಲ್ಲಿಸಲಾಗಿದೆ. ಕಟ್ಟಡದ ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬರಲಾಗುತ್ತಿದೆ.
-ಜೋಸೆಫ್‌ ಪಿ.ಎಸ್‌., ಮುಖ್ಯಸ್ಥರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಳ್ತಂಗಡಿ

-ಕೆ.ಎನ್.ಗೌಡ. ಗೇರುಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next