Advertisement

ಹುಬ್ಬಳ್ಳಿಯಲ್ಲಿ ಸಾಧ್ಯವಾದರೆ ಮಂಗಳೂರಿನಲ್ಲಿ ಏಕಾಗದು?

12:50 AM Sep 05, 2020 | mahesh |

ಉಡುಪಿ: ಕೈಗಾರಿಕೆ, ಬ್ಯಾಂಕಿಂಗ್‌ ಸಂಸ್ಥೆಗಳಿಗೆ ಅಗತ್ಯವೆನಿಸಿರುವ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ (ಪಿಸಿಐಟಿ)ರ ಕಚೇರಿಯನ್ನು ಹೋರಾಟ ನಡೆಸಿ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಯಶಸ್ವಿಯಾಗಿದೆ. ಆದರೆ ಮಂಗಳೂರು? ಹುಬ್ಬಳ್ಳಿಗೆ ಹೋಲಿಸಿದರೆ ಮಂಗಳೂರಿನಲ್ಲಿರುವ ಸಂಸ್ಥೆಗಳ ಸಂಖ್ಯೆ ಎರಡು ಪಟ್ಟು ಹೆಚ್ಚು. ಮಂಗಳೂರು ಕಚೇರಿಯ ವ್ಯಾಪ್ತಿಗೊಳ ಪಟ್ಟಂತೆ ಸುಮಾರು 4 ಲಕ್ಷ ಮಂದಿ ತೆರಿಗೆ ದಾರರಿದ್ದಾರೆ. ಇವರಲ್ಲಿ ಶೇ. 10ರಷ್ಟು ಮಂದಿಗೆ ಸಮಸ್ಯೆ ಎದುರಾದರೂ ಅವರು ಇದನ್ನು ಪರಿಹರಿಸಿಕೊಳ್ಳುವುದಕ್ಕೆ ಗೋವಾಕ್ಕೆ ತೆರಳ ಬೇಕಾಗುತ್ತದೆ. ಇದು ಎಷ್ಟು ಸರಿ ಎಂಬುದು ತೆರಿಗೆದಾರರ ಪ್ರಶ್ನೆ.

Advertisement

ಜನಪ್ರತಿನಿಧಿಗಳ ಜವಾಬ್ದಾರಿ
ಮಂಗಳೂರು ಮತ್ತು ಹುಬ್ಬಳ್ಳಿಯ ಎರಡೂ ಕಚೇರಿಗಳನ್ನು ಗೋವಾ ಕಚೇರಿಯಲ್ಲಿ ವಿಲೀನಕ್ಕೆ ಸರಕಾರ ಆದೇಶಿಸಿತ್ತು. ಆದರೆ ಹುಬ್ಬಳಿಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಕೂಡಲೇ ಎಚ್ಚೆತ್ತು ಅದನ್ನು ಅಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2020ರ ಆ.13ರಂದು ಕೇಂದ್ರ ಹಣಕಾಸು ಸಚಿವಾಲಯ ಹುಬ್ಬಳ್ಳಿ ಪಿಸಿಐಟಿ ಕಚೇರಿಯನ್ನು ಗೋವಾದ ಪಿಸಿಐಟಿ ಕಚೇರಿಗೆ ಸ್ಥಳಾಂತರಸಲು ಆದೇಶಿಸಿತ್ತು. ಈ ಸಂಬಂಧ ಹುಬ್ಬಳ್ಳಿಯ ಜನಪ್ರತಿನಿಧಿಗಳು ಒಟ್ಟಾಗಿ ಪಿಸಿಐಟಿ ಕಚೇರಿಯನ್ನು ತಮ್ಮಲ್ಲಿ ಉಳಿಸಿಕೊಳ್ಳಲು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಮನವಿ ಮಾಡಿದ್ದರು. ಅವರು ತತ್‌ಕ್ಷಣ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸಂಪರ್ಕಿಸಿ ಸ್ಥಳಾಂತರ ಆದೇಶ ರದ್ದು ಮಾಡುವಂತೆ ವಿನಂತಿಸಿದ್ದರಿಂದ ಕೇಂದ್ರ ವಿಲೀನದ ಆದೇಶವನ್ನು ಹಿಂಪಡೆದಿದೆ. ಹಾಗಿರುವಾಗ ಮಂಗಳೂರಿನವರಿಂದ ಏಕೆ ಸಾಧ್ಯವಾಗದು ಎಂಬುದು ತೆರಿಗೆದಾರರ ಪ್ರಶ್ನೆಯಾಗಿದೆ.

ಬದ್ಧತೆ ಅಗತ್ಯ
ಈಗಾಗಲೇ ಹಲವಾರು ಯೋಜನೆಗಳು, ಸೌಲಭ್ಯಗಳಿಂದ ಕರಾವಳಿಯ ಜನತೆ ವಂಚಿತರಾಗಿದ್ದಾರೆ. ಈಗಲೂ ಜನಪ್ರತಿನಿಧಿಗಳು ಸ್ಪಷ್ಟ ನಿಲುವು ಹೊಂದದಿದ್ದರೆ ಈ ಕಚೇರಿ ದೂರವಾಗುವುದು ಖಚಿತ. ಎಲ್ಲ ಸ್ತರದ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಜತೆಯಾಗಿ ಒತ್ತಡ ಹೇರಿದರೆ ಮಾತ್ರ ಹುಬ್ಬಳ್ಳಿಯಂತೆ ಈ ಕಚೇರಿಯನ್ನೂ ಇಲ್ಲಿಯೇ ಉಳಿಸಿಕೊಳ್ಳುವುದಕ್ಕೆ ಸಾಧ್ಯ.

ಮಂಗಳೂರು ಪಿಸಿಐಟಿ ಕಚೇರಿಯು ಮಂಗಳೂರು, ಉಡುಪಿ, ಉತ್ತರ ಕನ್ನಡ ಸಹಿತ ವಿವಿಧ ಜಿಲ್ಲೆಗಳ ಕಾರ್ಯಾವ್ಯಾಪ್ತಿಯನ್ನು ಹೊಂದಿದೆ. ಸರಕಾರದ ಆದೇಶದ ಅನ್ವಯ ಮುಂದೆ ಕರ್ನಾಟಕದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ಪಿಸಿಐಟಿ ಕಚೇರಿಗಳು ಕಾರ್ಯಾಚರಿಸಲಿವೆ.

ಪಿಸಿಐಟಿ ಕಚೇರಿಯನ್ನು ಮಂಗಳೂರಿನಲ್ಲಿ ಉಳಿಸಿಕೊಳ್ಳಬೇಕು. ಅವಳಿ ಜಿಲ್ಲೆಗಳಲ್ಲಿ 4 ಲಕ್ಷ ತೆರಿಗೆ ಪಾವತಿದಾರರು ಇದ್ದಾರೆ. ಗೋವಾದಲ್ಲಿ ಕೇವಲ 1 ಲಕ್ಷ ಜನರು ತೆರಿಗೆ ಪಾವತಿ ಮಾಡುತ್ತಾರೆ. ಆದ್ದರಿಂದ ಅಗತ್ಯವಿದ್ದರೆ ಗೋವಾ ಕಚೇರಿ ಮಂಗಳೂರಿನ ಪಿಸಿಐಟಿ ಕಚೇರಿಯೊಂದಿಗೆ ವಿಲೀನ ಮಾಡಬಹುದು. ಈಗಾಗಲೇ ಜನಪ್ರತಿನಿಧಿ ಗಳಿಗೆ ಮನವಿ ಮಾಡಲಾಗಿದೆ.
-ಶ್ರೀಕೃಷ್ಣರಾವ್‌ ಕೊಡಂಚ ಮತ್ತು ಐಸಾಕ್‌ ವಾಸ್‌, ಕೆನರಾ ಚೇಂಬರ್‌ ಆಫ್ ಕಾಮರ್ಸ್‌ ಅಧ್ಯಕ್ಷರು ಉಡುಪಿ, ದ.ಕ. ಜಿಲ್ಲೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next