ಬಜ್ಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಅನುಮಾನಸ್ಪದ ಬ್ಯಾಗ್ ಒಂದು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದೆ.
ಅನುಮಾನಸ್ಪದ ಬ್ಯಾಗ್ ಪತ್ತೆಯಾದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣ ಸುತ್ತಲೂ ಬಿಗು ಭದ್ರತೆ ಒದಗಿಸಲಾಗಿದೆ. ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಮಂಗಳೂರಿನ ಬಜ್ಪೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ ಸುಮಾರು 10 ಗಂಟೆಗೆ ಲ್ಯಾಪ್ ಟ್ಯಾಪ್ ಬ್ಯಾಗೊಂದು ಅನುಮಾನಸ್ಪದವಾಗಿ ಪತ್ತೆಯಾಗಿತ್ತು. ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಹತ್ತಿರ ಇದು ಪತ್ತೆಯಾಗಿತ್ತು.
ನಂತರ ಅಧಿಕಾರಿಗಳು ಜನರನ್ನು ಅಲ್ಲಿಂದ ದೂರ ಸರಿಸಿ ಆ ಬ್ಯಾಗನ್ನು ಅಲ್ಲಿಂದ ದೂರದಲ್ಲಿ ಇರಿಸಲಾಗಿದೆ. ಬಾಂಬ್ ನಿಷ್ಕ್ರಿಯ ಯಂತ್ರದ ಒಳಗೆ ಬ್ಯಾಗನ್ನು ಇರಿಸಲಾಗಿದೆ.
ಮಂಗಳೂರು ಅನುಮಾನಸ್ಪದ ಬ್ಯಾಗ್ ಪತ್ತೆ ಪ್ರಕರಣ: ಪರಿಸ್ಥಿತಿ ನಮ್ಮ ಹತೋಟಿಯಲ್ಲಿದೆ: ಡಾ. ಹರ್ಷ: //bit.ly/2tChOdg
ವಿಮಾನ ನಿಲ್ದಾಣದಿಂದ ಸುಮಾರು 500 ಮೀಟರ್ ನಷ್ಟು ದೂರದಲ್ಲಿ ಇದನ್ನು ಇರಿಸಲಾಗಿದ್ದು, ಈ ಭಾಗಕ್ಕೆ ಯಾರಿಗೂ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ.
ಪ್ರಯಾಣಿಕರ ಸುರಕ್ಷಿತೆಯ ದೃಷ್ಟಿಯಿಂದ ವಿಮಾನ ನಿಲ್ದಾಣಕ್ಕೆ ಬರುವ ದಾರಿಯನ್ನು ಬದಲಾವಣೆ ಮಾಡಲಾಗಿದೆ.
ವಿಮಾನಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವಿಮಾನ ಸಂಚಾರ ಎಂದಿನಂತೆ ನಡೆಯುತ್ತಿದೆ ಎನ್ನಲಾಗಿದೆ.