Advertisement

ಮಂಗಳೂರು: ಮೇರಿಹಿಲ್‌ ಹೆಲಿಪ್ಯಾಡ್‌ಗೆ “ಹೆಲಿ ಟೂರಿಸಂ’ ಸ್ವರೂಪ

01:36 PM Apr 12, 2024 | Team Udayavani |

ಮಹಾನಗರ: ಮಂಗಳೂರಿಗೆ ಗಣ್ಯ ವ್ಯಕ್ತಿಗಳು ಹೆಲಿಕಾಪ್ಟರ್‌ ಮೂಲಕ ಬಂದಿಳಿಯುವ ಮೇರಿಹಿಲ್‌ ಹೆಲಿಪ್ಯಾಡ್‌ ಮೇಲ್ದರ್ಜೆಗೇರಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಮೇರಿಹಿಲ್‌ನಲ್ಲಿ ಹೆಲಿ ಟೂರಿಸಂ, ಹೆಲ್ತ್‌ ಟೂರಿಸಂ ಅಭಿವೃದ್ಧಿಗೊಳಿಸುವ ಮೂಲಕ ಪ್ರವಾಸೋದ್ಯಮ ಮತ್ತು ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಲು ರೂಪರೇಖೆ ತಯಾರಾಗುತ್ತಿದೆ.

Advertisement

ಮೇರಿಹಿಲ್‌ ಹೆಲಿಪ್ಯಾಡ್‌ ಅನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದು ಎಂಬ ಸವಿವರವುಳ್ಳ ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಲೋಕಸಭಾ ಚುನಾವಣೆಯ ಬಳಿಕ ಈ ಕುರಿತು ಅಂತಿಮ ನಿರ್ಧಾರ ಹೊರಬರುವ ಸಾಧ್ಯತೆ ಇದೆ. ನವ ಮಂಗಳೂರು ಬಂದರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಸ್‌ ನಿಲ್ದಾಣ ಸಂಪರ್ಕ ಮೇರಿಹಿಲ್‌ ಸಮೀಪವೇ ಇರುವ ಕಾರಣ ಹೆಲಿ ಟೂರಿಸಂ ಅಭಿವೃದ್ಧಿಗೆ ಈ ಜಾಗವನ್ನು ಅಂತಿಮಗೊಳಿಸಲಾಗಿದೆ.

ಮಂಗಳೂರಿನಲ್ಲಿ ಹೆಲಿ ಟೂರಿಸಂ ಆರಂಭದ ಬಗ್ಗೆ ನಾಲ್ಕೈದು ವರ್ಷಗಳ ಹಿಂದೆಯೇ ಪ್ರಸ್ತಾವ ಇತ್ತು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ನಗರದ ಕದ್ರಿ ಪಾರ್ಕ್‌ ಬಳಿಯ ಸ್ಕೇಟಿಂಗ್‌ ರಿಂಕ್‌ ಸಮೀಪ “ಹೆಲಿ ಟೂರಿಸಂ’ ಆರಂಭಿಸುವ ನಿಟ್ಟಿನಲ್ಲಿ ಸ್ಥಳ ವೀಕ್ಷಣೆ ನಡೆದಿತ್ತು. ಬಳಿಕ ತಜ್ಞರ ತಂಡ ಮಂಗಳೂರಿಗೆ ಆಗಮಿಸಿ ಸಮೀಕ್ಷೆ ನಡೆಸಲಾಗಿತ್ತು. ಆದರೆ ಈ ಭಾಗದಲ್ಲಿ ಆಕಾಶವಾಣಿ ಕೇಂದ್ರ ಸಹಿತ ವಿದ್ಯುತ್‌ ತಂತಿಗಳು ಹಾದು ಹೋಗುವ ಕಾರಣ ಆ ಪ್ರದೇಶ ಅಷ್ಟೊಂದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಆ ಪ್ರಸ್ತಾವನೆಯನ್ನು ಕೈ ಬಿಡಲಾಗಿತ್ತು. ನಗರದ ಮೇರಿಹಿಲ್‌ನಲ್ಲಿ ಈಗಾಗಲೇ ಹೆಲಿಪ್ಯಾಡ್‌
ಇರುವ ಕಾರಣ ಅದನ್ನೇ ಅಭಿವೃದ್ಧಿಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಏನೇನು ಅನುಕೂಲ?
ಕೇರಳ, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದಲ್ಲಿ ಹಲವು ಧಾರ್ಮಿಕ ಕ್ಷೇತ್ರಗಳಿವೆ. ದೇಶ-ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಕೆಲವು ಮಂದಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಟ್ಯಾಕ್ಸಿ ಮುಖೇನ ಪ್ರವಾಸಿ ಕ್ಷೇತ್ರ ದರ್ಶನ ಮಾಡುತ್ತಾರೆ. ಹೆಲಿ ಟೂರಿಸಂ ಅಭಿವೃದ್ಧಿಗೊಂಡರೆ, ಈ ಭಾಗಕ್ಕೆ ಹೆಲಿಕಾಪ್ಟರ್‌ ಮುಖೇನ ತೆರಳಬಹುದು.

ಚಿಕ್ಕಮಗಳೂರು, ಶಿವಮೊಗ್ಗ ಸಹಿತ ಹಲವು ಪ್ರಾಕೃತಿಕ ಸೌಂದರ್ಯ ವೀಕ್ಷಣೆಗೂ ಹೆಲಿ ಟೂರಿಸಂ ಆರಂಭದಿಂದ ಅನುಕೂಲವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸೋದ್ಯಮದ ಜತೆ ಆರೋಗ್ಯ ಕ್ಷೇತ್ರದಲ್ಲೂ ಹೆಸರುವಾಸಿ ಅನೇಕ ಆಸ್ಪತ್ರೆಗಳು, ಮೆಡಿಕಲ್‌ ಕಾಲೇಜುಗಳು ಆಸುಪಾಸಿ ನಲ್ಲಿದೆ. ಇಲ್ಲಿನ ಚಿಕಿತ್ಸಾ ಗುಣಮಟ್ಟ ಉತ್ತಮ ಇರುವ ಕಾರಣ ದೇಶದ ಹಲವು ಕಡೆಗಳಿಂದ ರೋಗಿಗಳು ಆಗಮಿಸುತ್ತಾರೆ. ಒಂದೊಮ್ಮೆ ಅತ್ಯಗತ್ಯ ಸಂದರ್ಭ ರೋಗಿಗಳನ್ನು ಒಂದು ಕಡೆಯಿಂದ ಮತ್ತೂಂದು ಕಡೆ ಸ್ಥಳಾಂತರ ಸಹಿತ ತ್ವರಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇದು ನೆರವಾಗಬಹುದು.

Advertisement

ಶೀಘ್ರ ಕಾರ್ಯಗತ ನಿರೀಕ್ಷೆ
ಮಂಗಳೂರಿನಲ್ಲಿ ಹೆಲಿ ಟೂರಿಸಂ ಅಭಿವೃದ್ಧಿಗೊಳಿಸಲು ಮಾತುಕತೆ ನಡೆಯುತ್ತಿದೆ. ಮೇರಿಹಿಲ್‌ನಲ್ಲಿ ಈಗಾಗಲೇ ಹೆಲಿಪ್ಯಾಡ್‌ ಇದ್ದು, ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು. ಇಲ್ಲಿಂದ ವಿವಿಧ ಸ್ಥಳಗಳ ಭೇಟಿ ಸಹಿತ ಹೆಲ್ತ್‌ ಟೂರಿಸಂಗೂ ಇದರಿಂದ ಉತ್ತೇಜನ ಸಿಗಬಹುದು. ಸದ್ಯದಲ್ಲೇ ಈ ಯೋಜನೆ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ.
*ಮಾಣಿಕ್ಯ, ಪ್ರವಾಸೋದ್ಯಮ ಇಲಾಖೆ
ಸಹಾಯಕ ನಿರ್ದೇಶಕ

*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next