Advertisement
ಮಂಗಳೂರಿನಿಂದ ಅಬುಧಾಬಿ, ಬಹ್ರೈನ್, ದಮಾಮ್, ದೋಹಾ, ದುಬೈ, ಕುವೈಟ್ ಹಾಗೂ ಮಸ್ಕತ್‌ಗೆ ನೇರ ವಿಮಾನ ಇದೆಯಾದರೂ ಪ್ರತೀ ದಿನ ಲಭ್ಯವಿಲ್ಲ. ಜತೆಗೆ ಜೆದ್ದಾ, ಶಾರ್ಜಾ ಸಹಿತ ಅನಿವಾಸಿ ಭಾರತೀಯರು ನೆಲೆಸಿರುವ ಹಲವು ದೇಶಗಳಿಗೆ ನೇರ ವಿಮಾನವಿಲ್ಲ. ಇನ್ನು ಸಿಂಗಾಪುರ, ಮಾಲ್ಡೀವ್ಸ್ ಸಹಿತ ಹಲವು ಪ್ರವಾಸಿ ನೆಲೆಯ ದೇಶಗಳಿಗೆ ನೇರ ಸಂಪರ್ಕವಂತೂ ಸಾಧ್ಯವೇ ಇಲ್ಲ.
Related Articles
Advertisement
ಶೈಕ್ಷಣಿಕವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ದೇಶಗಳಿಂದ ವಿದ್ಯಾಭ್ಯಾಸದ ನಿಮಿತ್ತ ಬರುವವರಿದ್ದಾರೆ. ಜತೆಗೆ ಇಲ್ಲಿಂದ ವಿದ್ಯಾಭ್ಯಾಸಕ್ಕಾಗಿ ತೆರಳುವವರಿದ್ದಾರೆ. ಉದ್ಯೋಗ, ಪ್ರವಾಸಕ್ಕಾಗಿ ಬೇರೆ ದೇಶಗಳಿಗೆ ಭೇಟಿ ನೀಡುವವರು ಅಥವಾ ಇಲ್ಲಿಗೆ ಆಗಮಿಸುವವರಿದ್ದಾರೆ. ಆದರೆ ನೇರ ವಿಮಾನ ಇಲ್ಲದೆ ದುಬಾರಿ ಹಣ ಪಾವತಿಸಿ, ಹೆಚ್ಚು ಸಮಯ ವ್ಯಯಿಸಿ “ಕನೆಕ್ಟಿಂಗ್’ ವಿಮಾನ ಅವಲಂಬಿಸುವುದು ಅನಿವಾರ್ಯ. ಏರ್‌ಲೈನ್ಸ್‌ನವರು ಹೇಳುವ ಪ್ರಕಾರ, ಬೇಕಾದಷ್ಟು ವಿಮಾನಗಳು ಸದ್ಯ ಇಲ್ಲ. ಎರಡು ದೇಶಗಳ ಮಧ್ಯೆ ಆದ ಒಪ್ಪಂದಗಳ ಪ್ರಕಾರ ಅನುಮತಿ ಸಿಗಲು ಕೊಂಚ ಕಷ್ಟವಿದೆ. ಈ ವಿಚಾರದಲ್ಲಿ ಪ್ರಯಾಣಿಕರ ಬೇಡಿಕೆಯೂ ಪರಿಗಣಿಸಲ್ಪಡುತ್ತದೆ.
ದೇಶೀಯ ಸಂಚಾರಕ್ಕೆ ಹೊಸ ಏರ್‌ಲೈನ್ಸ್ ಅಲಭ್ಯ!
ಹೊಸದಿಲ್ಲಿ, ಬೆಂಗಳೂರು, ಮುಂಬಯಿ, ಚೆನ್ನೈ, ಹೈದರಾಬಾದ್, ಪುಣೆಗೆ ಸದ್ಯ ಇಂಡಿಗೋ ವಿಮಾನಗಳು ಮಾತ್ರ ಬಹು ಸಂಖ್ಯೆಯಲ್ಲಿ ಹಾರಾಟ ನಡೆಸುತ್ತಿವೆ. ಏರ್‌ಇಂಡಿಯಾದಿಂದ ಮುಂಬಯಿಗೆ ಮಾತ್ರ ಸಂಚಾರವಿದೆ. ಉಳಿದೆಡೆಗೆ ಸದ್ಯಕ್ಕೆ ಮಂಗಳೂರಿನಿಂದ ದೇಶೀಯ ನೇರ ವಿಮಾನಯಾನವೂ ಇಲ್ಲ. ಅಂದಹಾಗೆ ಮಂಗಳೂರು ಏರ್‌ಪೋರ್ಟ್‌ಗೆ ಹೊಸ ಏರ್ ಲೈನ್ಸ್ ಸಿಗಲಿದೆ ಎಂಬ ಬಗ್ಗೆ ಈ ಹಿಂದಿನಿಂದಲೂ ಚರ್ಚೆ ನಡೆದಿತ್ತು. ಗೋ ಏರ್, ಅಕಾಶ, ವಿಸ್ತಾರ, ಏರ್ ಏಷ್ಯಾ ಹೀಗೆ ವಿವಿಧ ಏರ್‌ಲೈನ್ಸ್ ಸಂಸ್ಥೆಗಳು ಮಂಗಳೂರಿನಿಂದ ಸಂಚಾರ ಆರಂಭಿಸುವ ಬಗ್ಗೆ ಮಾತುಕತೆ ನಡೆದಿತ್ತಾದರೂ ಯಾವುದೂ ಅಂತಿಮ ಹಂತಕ್ಕೆ ಬಂದಿಲ್ಲ.
ಕರಾವಳಿಯ ಬೇಡಿಕೆಯನ್ನು ಪರಿಗಣಿಸಿ ಗಲ್ಫ್ ರಾಷ್ಟ್ರಗಳಿಗೆ ಹೆಚ್ಚುವರಿ ವಿಮಾನ ಸೇವೆ ಆರಂಭಿಸಬೇಕು. ಅದೇ ರೀತಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೊಲಂಬೋ, ಮಲೇಷ್ಯಾ, ಸಿಂಗಾಪುರ, ಮಾಲ್ಡೀವ್ಸ್‌ಗಳಿಗೆ ವಾರದಲ್ಲಿ ಕನಿಷ್ಠ ಒಂದು ದಿನವಾದರೂ ನೇರ ವಿಮಾನ ಸೇವೆ ಲಭಿಸಿದರೆ ಉತ್ತಮ. ಈ ನಿಟ್ಟಿನಲ್ಲಿ ಏರ್‌ಲೈನ್ಸ್‌ನವರಿಗೆ ಮನವಿ ಮಾಡಲಾಗುವುದು. ಗಣೇಶ್ ಕಾಮತ್, ಅಧ್ಯಕ್ಷರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ-ಮಂಗಳೂರು
ಮಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕರ ನಿರ್ವಹಣೆ
(2023 ಜನವರಿ-ಜುಲೈ)
ದೇಶೀಯ ಪ್ರಯಾಣಿಕರು: 1,07,455
ಅಂತಾರಾಷ್ಟ್ರೀಯ ಪ್ರಯಾಣಿಕರು: 55,212
-ದಿನೇಶ್ ಇರಾ