ಮಂಗಳೂರು: ಮಂಗಳೂರು ಕಂಬಳ ಸಮಿತಿ ವತಿಯಿಂದ ಮೊದಲ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಕಂಬಳ ಡಿ. 3ರಂದು ನಗರದ ಬಂಗ್ರಕೂಳೂರು ಗೋಲ್ಡ್‌ಫಿಂಚ್ ಸಿಟಿಯಲ್ಲಿ ಜರಗಲಿದೆ ಎಂದು ಸಮಿತಿ ಅಧ್ಯಕ್ಷ ಕ್ಯಾ| ಬೃಜೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರು ನಗರದ ಕದ್ರಿಯ ಕಂಬಳ ನಿಂತ ಬಳಿಕ ನಗರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಮಂಗಳೂರು ಕಂಬಳ್ಳೋತ್ಸವವಾಗಿ ಆಚರಿಸಲಾಗುತ್ತದೆ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕರೆ ನಿರ್ಮಿಸಲಾಗಿದೆ ಎಂದರು. ಕಂಬಳವನ್ನು ಡಿ. 3ರಂದು ಬೆಳಗ್ಗೆ 9.30ಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಉದ್ಘಾಟಿಸುವರುಎಂದರು.
ಸಂಜೆ ಸಭೆ, ಸಮ್ಮಾನ: ಸಂಜೆ 6.30ಕ್ಕೆ ಸಂಸದ ನಳಿನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಅತಿಥಿಗಳಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ರಾಜ್ಯದ ಸಚಿವರಾದ ಬಿ. ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ವಿ. ಸುನಿಲ್ ಕುಮಾರ್, ಅಭಯಚಂದ್ರ ಜೈನ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ವಿಧೇಯಕ ಮರುಮಂಡನೆ: ಕಂಬಳದ ವಿಧೇಯಕವು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಮರುಮಂಡನೆಯಾಗಿ ರಾಜ್ಯಪಾಲರ ಕಚೇರಿಗೆ ತಲುಪಿದೆ. ರಾಜ್ಯಪಾಲರ ಸಹಿಯ ಬಳಿಕ ಕೇಂದ್ರ ಕಾನೂನು ಹಾಗೂ ಪರಿಸರ ಸಚಿವಾಲಯದ ಮೂಲಕ ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸಲಾಗುತ್ತದೆ. ಪ್ರಸ್ತುತ ಎಲ್ಲ ಷರತ್ತುಗಳ ಪ್ರಕಾರವೇ ಕಂಬಳವನ್ನು ನಡೆಸಲಾಗುತ್ತದೆ ಎಂದು ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ ವಿವರಿಸಿದರು.
ಕಂಬಳ ಸಮಿತಿ ಪ್ರಮುಖರಾದ ನಿತಿನ್ ಶೆಟ್ಟಿ, ಸಾಂತ್ಯಗುತ್ತು ಸಚಿನ್ ಶೆಟ್ಟಿ, ತಲಪಾಡಿ ದೊಡ್ಡಮನೆ ಪ್ರೀತಮ್ ರೈ, ಪ್ರಸಾದ್ ಕುಮಾರ್ ಶೆಟ್ಟಿ ಶೆಡ್ಡೆ, ಕಿಶೋರ್ ಕುಮಾರ್ ಪುತ್ತೂರು, ಉಳ್ಳಾಲ ನಂದನ್ ಮಲ್ಯ ಉಪಸ್ಥಿತರಿದ್ದರು.