Advertisement

ಮಂಗಳೂರು ಪಾಲಿಕೆ; “ಕಟ್ಟಡ ನಿರ್ಮಾಣ ನಿಯಮಾವಳಿಯಲ್ಲಿ ಬದಲಾವಣೆ?

04:58 PM Jul 24, 2024 | Team Udayavani |

ಲಾಲ್‌ಬಾಗ್‌: ಮಂಗಳೂರು ಪಾಲಿಕೆ ಕಟ್ಟಡ ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆ ತರುವ “ಬಿಲ್ಡಿಂಗ್‌ ಬೈಲಾ’ದ ಉಪವಿಧಿಗಳ ಪರಿಷ್ಕೃತ ಅನುಮೋದನೆಗೆ ಸಿದ್ದತೆ ಅಂತಿಮ ಗೊಂಡಿದೆ. ಸರಕಾರದಿಂದ ಬಂದಿರುವ ಕರಡು ಉಪವಿಧಿಗಳನ್ನು ಪಾಲಿಕೆ ಪರಿಶೀಲಿಸಿ, ಅದನ್ನು ಸರಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯುವ ಮೂಲಕ ಪರಿಷ್ಕೃತ ಬೈಲಾ ಅನುಷ್ಠಾನವಾಗಲಿದೆ.

Advertisement

ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ “ಬಿಲ್ಡಿಂಗ್‌ ಬೈಲಾ’ ಅನುಷ್ಠಾನದಲ್ಲಿದೆ. ಆದರೆ, ಅದು ಹಳೆಯ ಕಾಲದ್ದಾಗಿರುವುದರಿಂದ ಈಗ ಕೆಲವೊಂದಿಷ್ಟು ಹೊಸತನ, ಜನಸ್ನೇಹಿ ನಿಯಮಗಳನ್ನು ಕಟ್ಟಡ ನಿರ್ಮಾಣ ಸಂದರ್ಭ
ಪಾಲಿಸಬೇಕಾದ ಕಾರಣದಿಂದ ಹೊಸ ಉಪವಿಧಿಗಳ ಅನುಷ್ಠಾನಕ್ಕೆ ಸರಕಾರ ಈ ಹಿಂದೆಯೇ ತೀರ್ಮಾನಿಸಿತ್ತು. ಅದರಂತೆ
ಪರಿಷ್ಕೃತವಾಗಿರುವ ಬೈಲಾವು ಪಾಲಿಕೆಯ ಈ ಬಾರಿಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

ಆದೇಶ ಆಗಿದ್ದು ಯಾವಾಗ?
ರಾಜ್ಯದ ಎಲ್ಲ ಮಹಾನಗರಪಾಲಿಕೆಗಳಿಗೆ ಅನ್ವಯವಾಗುವಂತೆ ಮಾದರಿ ಕರಡು ಕಟ್ಟಡ ಉಪವಿಧಿಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. 2017 ಜು.11ರಂದು ಇದರ ಜಾರಿಗೆ ಆದೇಶವೂ ಆಗಿತ್ತು. ಇದರಂತೆ, ಮಂಗಳೂರು ಪಾಲಿಕೆ ಸಾಮಾನ್ಯ ಸಭೆಯಲ್ಲಿ 2018ರ ಜ.31ರಂದು ಮಂಡನೆಯಾಗಿತ್ತು. ಬಳಿಕ ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯೀ ಸಮಿತಿಯ ವರದಿಗೆ ಕಳುಹಿಸಿಕೊಡಲಾಗಿತ್ತು. ಸಮಿತಿ ಯಲ್ಲಿ ಕೆಲವೊಂದು ಅಂಶಗಳನ್ನು ಸೇರ್ಪಡೆಗೊಳಿಸಿ ಹಾಗೂ ಕೆಲವೊಂದು ಅಂಶಗಳಿಗೆ ತಿದ್ದುಪಡಿ ಮಾಡಿ ಸ್ಥಾಯೀ ಸಮಿತಿಯ ನಿರ್ಣಯವನ್ನು 2019 ಜ.10ರಂದು ಸಾಮಾನ್ಯ ಸಭೆಯಲ್ಲಿ ಶಿಫಾರಸ್ಸು ಮಾಡಲಾಗಿತ್ತು. ಸಮಿತಿಯ ನಿರ್ಣಯವನ್ನು ಅನುಮೋದಿಸಿ 2020 ಆ.13 ರಂದು ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಸ್ಥಿರೀಕರಿಸಲಾಗಿತ್ತು.

ಕಳೆದ ವರ್ಷ ನಿರ್ಣಯ ಅನುಮೋದನೆ
ಪಾಲಿಕೆಯ ಪರಿಷ್ಕೃತ ನಿರ್ಣಯದಂತೆ ತಯಾರಿಸಲಾದ ಕಟ್ಟಡ ಉಪವಿಧಿಗಳಿಗೆ ಅನುಮೋದನೆ ಕೋರಿ ಕಳೆದ ವರ್ಷ ಸೆ.14ರಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದನ್ನು ನಗರಾಭಿವೃದ್ದಿ ಪ್ರಾಧಿಕಾರಗಳ ಆಯುಕ್ತರು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಶೀಲಿಸಲು ಸರಕಾರದ ಮಟ್ಟದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಪಾಲಿಕೆಯಿಂದ ಕಳುಹಿಸಲಾದ ಕಟ್ಟಡ ಉಪವಿಧಿಗಳನ್ನು ಪರಿಶೀಲನೆ ಮಾಡಿ ಸರಕಾರಕ್ಕೆ ವರದಿ ನೀಡಿದೆ.

ಪರಿಷ್ಕರಣೆ ಆಗಿ ಪಾಲಿಕೆಗೆ ವಾಪಾಸ್‌!
ಸರಕಾರಕ್ಕೆ ಸಲ್ಲಿಸಿರುವ ಕರಡು ಉಪವಿಧಿಗಳನ್ನು ಲಗತ್ತಿಸಿ ಈ ವರ್ಷ ಜೂ.27ರಂದು ನಗರಾಭಿವೃದ್ಧಿ ಇಲಾಖೆಯಿಂದ ಪಾಲಿಕೆಗೆ ಪತ್ರ ಬರೆದು ಉಪ ವಿಧಿಗಳಲ್ಲಿನ ಅಂಶ ಗಳನ್ನು ಜಾರಿಯಲ್ಲಿರುವ ಕಾಯ್ದೆ/ನಿಯಮಗಳಲ್ಲಿನ ಅವಕಾಶಗಳ ಅನುಸಾರವಾಗಿ ಮತ್ತೊಮ್ಮೆ ಪಾಲಿಕೆಯ ಹಂತದಲ್ಲಿ ಪರಿಶೀಲಿಸಿ ಪ್ರಸ್ತಾವನೆ ಕಳುಹಿಸುವಂತೆ ಸರಕಾರ ಪಾಲಿಕೆಗೆ ಸೂಚಿಸಿದೆ. ಹೀಗಾಗಿ, ಸ್ವೀಕೃತವಾಗಿರುವ ಕಟ್ಟಡ ಉಪವಿಧಿಗಳ ಕರಡು ಪ್ರತಿ ಹಾಗೂ ಪಾಲಿಕೆಯಿಂದ ಸರಕಾರಕ್ಕೆ ಕಳುಹಿಸಲಾದ ಪ್ರಸ್ತಾವನೆಗೆ ಹೋಲಿಕೆ ಮಾಡಿ ಪಟ್ಟಿಯನ್ನು ತಯಾರಿಸಿ ಸೂಕ್ತ ನಿರ್ಣಯ ಮಂಡಿಸಲು ಪರಿಷತ್ತು ಸಭೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎನ್ನುತ್ತಾರೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ

Advertisement

ಹೊಸ “ಬೈಲಾ’ ಏನಿದೆ ವಿಶೇಷ?
ಒಂದು ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ವಲಯ ನಿಯಮಾವಳಿ ಪ್ರಕಾರ ಎತ್ತರ, ಸೆಟ್‌ಬ್ಯಾಕ್‌, ಕವರೇಜ್‌ ಎಲ್ಲವೂ ಇರುತ್ತದೆ. ಇದರಲ್ಲಿ ವಿಸ್ತಾರ ಹಾಗೂ ವಿಸ್ತೃತ ಮಾಹಿತಿ ಸದ್ಯ ಲಭ್ಯ ಇಲ್ಲ. ಅಗ್ನಿ ಸಹಿತ ಯಾವುದೇ ಆವಘಡ ಆಗದಂತೆ ಯಾವ ಕ್ರಮ ಕೈಗೊಳ್ಳಬೇಕು? ಸಿಸಿ ಕೆಮರಾ ಸಹಿತ ಮೂಲಸೌಕರ್ಯ ವ್ಯವಸ್ಥೆ ಕಡ್ಡಾಯ ಜಾರಿ ಹೇಗಿರಬೇಕು? ಘನತ್ಯಾಜ್ಯ ನಿರ್ವಹಣೆ ಕಟ್ಟಡದಲ್ಲಿಯೇ ಯಾವ ರೀತಿ ಅನುಷ್ಠಾನಿಸಬೇಕು? ಮಳೆ ನೀರು ಕೊಯ್ಲು ಅನುಷ್ಠಾನ ಹೇಗೆ? ಹೀಗೆ ಎಲ್ಲ ಅಂಶಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿ ಇನ್ನು ಮುಂದೆ ಬೈಲಾದಲ್ಲಿ ಅಡಕವಾಗಿರುತ್ತದೆ. ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಬೇಕಾಗಿದ್ದು, ಅದರ ವ್ಯವಸ್ಥೆ ಮಾಡಿರುವವರಿಗೆ ಪ್ರೋತ್ಸಾಹ ಹಾಗೂ ಮಾಡದವರಿಗೆ ದಂಡ ಇರಲಿದೆ.

ಮಕ್ಕಳ ಸುರಕ್ಷತಾ ಕ್ರಮಗಳು, ಅಂಗವಿಕಲರಿಗೆ ಸೌಲಭ್ಯಗಳು, ವಿದ್ಯುತ್‌ ಶಕ್ತಿಯ ಕನಿಷ್ಟ ಬಳಕೆ, ಸೌರಶಕ್ತಿಯ ಕಡ್ಡಾಯ ಅಳವಡಿಕೆ, ತುರ್ತು ನಿರ್ಗಮನ ದ್ವಾರಗಳು ಇತ್ಯಾದಿ ಅಂಶಗಳನ್ನು ಅಳವಡಿಸಬೇಕಾಗಿದೆ. ಈಗ ಇವೆಲ್ಲವೂ ಇದ್ದರೂ ಕೂಡ ಅದು ಬೇರೆ ಬೇರೆ ಪ್ರಕಾರದಲ್ಲಿ ಸಿಗುತ್ತಿದ್ದು ಅಲ್ಲಿ ಕಡ್ಡಾಯ ಪರಿಶೀಲನೆ ಆಗುತ್ತಿಲ್ಲ. ಒಂದೇ ಕಡೆ ಬೈಲಾದಲ್ಲಿ ಈ ವಿಷಯಗಳು ಇಲ್ಲ. ಬೈಲಾ ಆದರೆ ಎಲ್ಲವೂ ಸಾಮಾನ್ಯವಾಗಿ ಒಂದೇ ಸೂತ್ರದಲ್ಲಿ ದೊರೆಯಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಏಕಗವಾಕ್ಷಿ ವ್ಯವಸ್ಥೆಗೆ ಅವಕಾಶ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂತಿಮಗೊಳಿಸಲಾಗಿರುವ ಬೈಲಾ ತಿದ್ದುಪಡಿ ಬಗ್ಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ- ಚರ್ಚೆ ನಡೆದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಬಹುದಾದ ಕಟ್ಟಡಗಳ ಗರಿಷ್ಟ ಎತ್ತರ, ರಸ್ತೆಯ ಅಗಲ, ಪಾರ್ಕಿಂಗ್‌ ಶುಲ್ಕ ಸೇರಿದಂತೆ ಇತರೆ ವಿಷಯ ಕುರಿತು ಸಮಾಲೋಚಿಸಿ ಬೈಲಾ ಅಂತಿಮ ಹಂತಕ್ಕೆ ಬಂದಿದೆ. ಯಾವುದೇ ಉಲ್ಲಂಘನೆ ಇಲ್ಲದಿದ್ದರೂ, ಪರವಾನಗಿ ಪಡೆಯದೆ ಕಟ್ಟಡ ಕಟ್ಟಿರುವ ಪ್ರಕರಣಗಳಲ್ಲಿ ಅನುಸರಿಸಬೇಕಾದ ಕ್ರಮಗಳು, ಅಗ್ನಿಶಾಮಕ ಸೇರಿದಂತೆ ಎಲ್ಲ ಎನ್‌ಒಸಿಗಳನ್ನು ಮಹಾನಗರ ಪಾಲಿಕೆಯಲ್ಲೇ ಏಕಗವಾಕ್ಷಿ ಮೂಲಕ ಒದಗಿಸಲು ವ್ಯವಸ್ಥೆ, ನಿರ್ಮಾಣ ಹಂತದಲ್ಲಿ ಯಾವುದೇ ಬದಲಾವಣೆಗೆ ಅವಕಾಶಗಳು ಇತ್ಯಾದಿ ಅಂಶಗಳ ಬಗ್ಗೆ ಬೈಲಾದಲ್ಲಿ ಉಲ್ಲೇಖವಾಗಲಿದೆ ಎಂದು ಮೂಲಗಳು ತಿಳಿಸಿವೆ.

ನಗರಾಭಿವೃದ್ಧಿ ಇಲಾಖೆಯ ಸೂತ್ರದಲ್ಲಿ ದೊರೆಯಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ. ಅಧಿಸೂಚನೆಯಂತೆ ಕಟ್ಟಡ
ಉಪವಿಧಿಯನ್ನು ಮಂಗಳೂರು ಮಹಾನಗರಪಾಲಿಕೆಯಲ್ಲಿ ಅನುಷ್ಠಾನಗೊಳಿಸುವ ಕುರಿತು ಪರಿಷತ್ತಿನ ತೀರ್ಮಾನಕ್ಕಾಗಿ ಕಾರ್ಯಸೂಚಿಯನ್ನು ಮಂಡಿಸಲಾಗುತ್ತದೆ. ಪರಿಷತ್ತಿನಲ್ಲಿ ಈ ಕುರಿತಂತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡಲಾಗುತ್ತದೆ.
*ಸುಧೀರ್‌ ಶೆಟ್ಟಿ ಕಣ್ಣೂರು
ಮೇಯರ್‌, ಮಂಗಳೂರು

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next