Advertisement
ಐದಾರು ದಶಕಗಳ ಹಿಂದಿನ ಕಟ್ಟಡದಲ್ಲಿ ಈ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಹೊಸ ಕಟ್ಟಡ ನಿರ್ಮಾಣವಾಗಬೇಕು ಎನ್ನುವುದು ಇಲ್ಲಿನ ಸ್ಥಳೀಯರ ಹಲವು ದಶಕಗಳ ಬೇಡಿಕೆಯಾಗಿದೆ. ಆದರೆ ಇದಕ್ಕೆ ಇನ್ನೂ ಕಾಲಕೂಡಿ ಬಂದಿಲ್ಲ. ಕಟ್ಟಡದ ಒಂದು ಭಾಗ ಮಳೆಗಾಲದಲ್ಲಿ ಸಂಪೂರ್ಣವಾಗಿ ಸೋರಿ ಕಡತ ಒದ್ದೆಯಾಗುತ್ತಿತ್ತು. ಈ ಬಗ್ಗೆ ಎಷ್ಟೇ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿರಲಿಲ್ಲ. ಕೆಲವು ತಿಂಗಳ ಹಿಂದೆ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆಯವರು ಸಾಲಿಗ್ರಾಮ ಪ.ಪಂ. ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ತಗಡಿನ ಶೀಟ್ ಅಳವಡಿಸಿದ್ದು ಇದರಿಂದ ಸೋರುವ ಸಮಸ್ಯೆಗೆ ಸ್ವಲ್ಪ ಮಟ್ಟಿಗಿನ ಮುಕ್ತಿ ಸಿಕ್ಕಿದೆ. ಆದರೂ ಕಟ್ಟಡ ಹಳೆಯದಾದ್ದರಿಂದ ಮಳೆ ನೀರು, ಗೆದ್ದಲು ಸಮಸ್ಯೆ ಆಗಾಗ ಕಾಡುತ್ತದೆ. ಸಮಸ್ಯೆಗೆ ಶಾಶ್ವತ ಪರಿಹಾರವಾಗಬೇಕಾದರೆ ಹೊಸ ಕಟ್ಟಡ ನಿರ್ಮಾಣಗೊಂಡರೆ ಉತ್ತಮ ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.
ಸಾಲಿಗ್ರಾಮ ಗ್ರಾಮ ಆಡಳಿತಾಧಿಕಾರಿಗಳ ಕಚೇರಿ ಗುಂಡ್ಮಿ, ಚಿತ್ರಪಾಡಿ, ಪಾರಂಪಳ್ಳಿ, ಕಾರ್ಕಡ ಗ್ರಾಮಗಳನ್ನೊಳಗೊಂಡಿದೆ. ಪ್ರತಿ ನಿತ್ಯ ನೂರಾರು ಮಂದಿ ಗ್ರಾಮಸ್ಥರು ತಮ್ಮ ಕೆಲಸಗಳಿಗಾಗಿ ಇಲ್ಲಿಗೆ ಬರುತ್ತಾರೆ. ಕಡತಗಳ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಇರುತ್ತದೆ. ಕಚೇರಿಗೆ ಬರುವ ಗ್ರಾಮಸ್ಥರಿಗೆ ಸರಿಯಾಗಿ ಕುಳಿತುಕೊಳ್ಳಲು ಬಿಡಿ ನಿಂತುಕೊಳ್ಳಲೂ ಇಲ್ಲಿ ವ್ಯವಸ್ಥೆ ಇಲ್ಲ. ಹಲವು ಬಾರಿ ಮನವಿ
ಸಾಲಿಗ್ರಾಮ ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ಕಟ್ಟಡದ ದುಃಸ್ಥಿತಿ ಬಗ್ಗೆ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕಾಗಿ ನಾಲ್ಕೈದು ವರ್ಷದಿಂದ ಮನವಿ ನೀಡಲಾಗುತ್ತಿದೆ. ಆದರೆ ಇದುವರೆಗೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಕೈಗೊಳ್ಳಬೇಕು.
-ನಾಗರಾಜ್ ಗಾಣಿಗ ಸಾಲಿಗ್ರಾಮ, ಸ್ಥಳೀಯರು
Related Articles
ಮಳೆ ಬಂದಾಗ ಕಟ್ಟಡ ಸೋರಿಕೆಯಾಗಿ ಕಡತ ಒದ್ದೆಯಾಗುವ ಕುರಿತು ದೂರುಗಳಿತ್ತು. ಹೀಗಾಗಿ ಒಂದು ಭಾಗದಲ್ಲಿ ಹಂಚಿನ ಮೇಲ್ಛಾವಣೆಯನ್ನು ತೆಗೆದು ಶೀಟ್ ಅಳವಡಿಸುವ ಮೂಲಕ ತಾತ್ಕಾಲಿಕ ದುರಸ್ತಿ ಮಾಡಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಸರಕಾರಿ ಜಾಗ ಲಭ್ಯವಿಲ್ಲ. ಈ ಬಗ್ಗೆ ಮುಂದಿನ ಹಂತದಲ್ಲಿ ಪರಿಶೀಲನೆ ನಡೆಸಲಾಗುವುದು.
-ಶ್ರೀಕಾಂತ್ ಹೆಗ್ಡೆ, ತಹಶೀಲ್ದಾರರು, ಬ್ರಹ್ಮಾವರ
Advertisement
ಯೋಜನೆ ನನೆಗುದಿಗೆಬಹುತೇಕ ಗ್ರಾಮ ಆಡಳಿತಾಧಿಕಾರಿಗಳ ಕಚೇರಿಗಳು ಗ್ರಾ.ಪಂ., ಪ.ಪಂ. ಬಾಡಿಗೆ ಕಟ್ಟಡವನ್ನೇ ಅವಲಂಬಿಸಿದೆ. ಸಾಲಿಗ್ರಾಮದ ಕಚೇರಿ ಕಟ್ಟಡ ಕೂಡ ಪ.ಪಂ.ಗೆ ಸೇರಿದೆ. ಈ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಕುರಿತು ಈ ಹಿಂದೆ ಪ.ಪಂ. ಸಾಮಾನ್ಯಸಭೆಯಲ್ಲಿ ಚರ್ಚೆಯಾಗಿ ಯೋಜನೆ ರೂಪಿಸಿ ಅನುಮೋದನೆ ಪಡೆಯಲಾಗಿತ್ತು. ಆದರೆ ಆ ಪ್ರಸ್ತಾವನೆ ಕಡತದಲ್ಲೇ ಬಾಕಿ ಉಳಿಯಿತು. ಇದಲ್ಲದೆ ಕಾರ್ಕಡ ರಸ್ತೆಯಲ್ಲಿರುವ ಹಳೇ ಗ್ಯಾಸ್ ಗೋಡೌನ್ ಕಟ್ಟಡ ಪ್ರಸ್ತುತ ಕಂದಾಯ ಇಲಾಖೆಯ ಹೆಸರಿನಲ್ಲಿರುವುದರಿಂದ ಈ ಕಟ್ಟಡವನ್ನು ಬಾಡಿಗೆಗೆ ಪಡೆದು ಕಚೇರಿ ಆರಂಭಿಸುವ ಕುರಿತು ಚರ್ಚೆಯಾಗಿತ್ತು. ಆದರೆ ಅದೂ ಕೂಡ ಅನುಷ್ಠಾನವಾಗಿಲ್ಲ. -ರಾಜೇಶ್ ಗಾಣಿಗ ಅಚ್ಲಾಡಿ