ಬೆಳಗಾವಿ: ಗಡಿ ಮತ್ತು ಭಾಷಾ ವಿವಾದಗಳ ಮೂಲಕ ಸುದ್ದಿಯಲ್ಲಿರುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆ ಈಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈ ಬಾರಿ ಯಾವುದೇ ವಿವಾದಗಳು ಸುದ್ದಿಗೆ ಕಾರಣವಾಗಿಲ್ಲ. ಬದಲಾಗಿ ಅಧಿಕಾರಿಗಳೇ ಮಾಡಿರುವ ಯಡವಟ್ಟುಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸುದ್ದಿ ಮಾಡಿದೆ.
Advertisement
ಸರಕಾರದ ಮೇಲೆ ಅವಲಂಬನೆಯಾಗದೆ ತನ್ನ ಸಂಪನ್ಮೂಲಗಳಿಂದಲೇ ಹೇಗೆ ನಿರ್ವಹಣೆ ಮಾಡಬಹುದು ಎಂಬುದನ್ನು ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಮರೆತಿದ್ದಾರೆ. ಒಂದು ವೇಳೆ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಮೌನವಾಗಿದ್ದಾರೆಂಬ ಅಭಿಪ್ರಾಯಗಳು ಕೇಳಿ ಬರುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ ಇಡೀ ಪಾಲಿಕೆಯನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.
Related Articles
Advertisement
ಪಾಲಿಕೆಯ ಆದಾಯ ಮೂಲಗಳನ್ನು ಗುರುತಿಸಿ ಅದನ್ನು ಕಟ್ಟುನಿಟ್ಟಾಗಿ ಸಂಗ್ರಹ ಮಾಡಿದರೆ ಕನಿಷ್ಠ 200 ಕೋಟಿ ರೂ. ಆದಾಯ ಗಳಿಸಬಹುದು ಎಂಬುದು ಪಾಲಿಕೆಯ ನಿವೃತ್ತ ಅಧಿಕಾರಿಗಳ ಅಭಿಪ್ರಾಯ. ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದರೆ ಸರಕಾರದ ಮುಂದೆ ಪ್ರತಿವರ್ಷ ಅನುದಾನಕ್ಕಾಗಿ ಕೈ ಚಾಚುವುದು ತಪ್ಪುತ್ತದೆ. ಆದರೆ ಅಧಿಕಾರಿಗಳು, ಸದಸ್ಯರು, ಶಾಸಕರು ಇದರ ಬಗ್ಗೆ ಇಚ್ಛಾಶಕ್ತಿಯನ್ನೇ ಹೊಂದಿಲ್ಲ. ಇದು ಅವರಿಗೆ ಬೇಕಾಗಿಯೂ ಇಲ್ಲ.
ಕೋಟಿಗಟ್ಟಲೇ ಬಾಕಿಮೂಲಗಳ ಪ್ರಕಾರ ಮಹಾನಗರ ಪಾಲಿಕೆಗೆ ವಿವಿಧ ಸರಕಾರಿ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳಿಂದ 200 ಕೋಟಿಗೂ ಹೆಚ್ಚು ಬಾಕಿ ಬರಬೇಕಿದೆ. ಸರಕಾರದಿಂದಲೇ ಸುಮಾರು 40 ಕೋಟಿ ರೂ.ಬರಬೇಕಿದೆ. ಹೆಸ್ಕಾಂದಿಂದ ಅಂದಾಜು 17 ಕೋಟಿ ರೂ.ಬಾಕಿ ಇದೆ. ಜಲಮಂಡಳಿಯಿಂದ ಕೋಟ್ಯಂತರ ಬಾಕಿ ಇದೆ. ಈಗ ಅದನ್ನು ನಿರಂತರ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ಸರಿದೂಗಿಸಿಕೊಳ್ಳಲಾಗಿದೆ. ಕೇಬಲ್ ಕಂಪನಿಗಳಿಂದ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ, ಪ್ರಭಾವಿ ವ್ಯಕ್ತಿಗಳಿಂದ ಲಕ್ಷಾಂತರ ರೂ. ಬಾಕಿ ಬರಬೇಕಿದೆ. ಇದರ ವಸೂಲಾತಿಗೆ ಮಹಾನಗರ ಪಾಲಿಕೆಯ ಯಾವ ಅಧಿಕಾರಿಗಳು ಮತ್ತು ಆಡಳಿತ ಪಕ್ಷ ಧೈರ್ಯ ಮಾಡುತ್ತಿಲ್ಲ. ಇದು ಪಾಲಿಕೆಯ ಅಧೋಗತಿಗೆ ಮುಖ್ಯ ಕಾರಣವಾಗಿದೆ. ಇನ್ನೊಂದು ಕಡೆ ತೆರಿಗೆ ವಸೂಲಾತಿ ಸಹ ಶೋಚನೀಯವಾಗಿದೆ. ಅಧಿಕಾರಿಗಳು ಮತ್ತು ಸದಸ್ಯರೇ ಹೇಳುವಂತೆ ಪ್ರತಿಶತ 50 ರಿಂದ 60 ಮಾತ್ರ ತೆರಿಗೆ ವಸೂಲು ಆಗುತ್ತಿದೆ. ಹೀಗಾದರೆ ಪಾಲಿಕೆಯ ಹಣಕಾಸು ಸ್ಥಿತಿ ಸುಧಾರಿಸುವುದು ಯಾವಾಗ ಎಂಬುದು ಎಲ್ಲರ ಪ್ರಶ್ನೆ. ■ ಕೇಶವ ಆದಿ