Advertisement

Udupi; ಐತಿಹಾಸಿಕ ಕಟ್ಟಡದ ಯುಗಾಂತ್ಯ

06:04 PM Aug 30, 2024 | Team Udayavani |

ಉಡುಪಿ: ನಗರದ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾದ, ಸ್ವಾತಂತ್ರ್ಯ ಪೂರ್ವದಲ್ಲಿ ಸಬ್‌ ಜೈಲ್‌ ಆಗಿದ್ದ, ಹಳೆ ತಾಲೂಕು ಕಚೇರಿ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬ್ರಿಟಿಷರ ಆಳ್ವಿಕೆ ಇದ್ದ 1906ರಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡ ಮಾನ್ಯತೆಯೊಂದಿಗೆ ಉಳಿಸಲು ನಡೆಸಿದ ಪ್ರಯತ್ನಗಳು ವಿಫ‌ಲವಾಗಿವೆ. ಇದೀಗ ಕಟ್ಟಡವನ್ನು ನೆಲಸಮಗೊಳಿಸುವ ನಿಟ್ಟಿನಲ್ಲಿ ಅದರ ಹೆಂಚುಗಳನ್ನು ತೆಗೆಯುವ ಕಾರ್ಯ ಆರಂಭಗೊಂಡಿದೆ. ಈ ಜಾಗದಲ್ಲಿ ಇನ್ನು ನಗರಸಭೆಯ ಹೊಸ ಕಟ್ಟಡ ನಿರ್ಮಾಣವಾಗಲಿದೆ.

Advertisement

ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ಉಡುಪಿ ನಗರದಲ್ಲಿರುವ ವಿರಳ ಪಾರಂಪರಿಕ ಕಟ್ಟಡಗಳಲ್ಲಿ ಇದೂ ಒಂದು. ಸಣ್ಣ ಕೆಂಪು ಇಟ್ಟಿಗೆಗಳನ್ನು ಬಳಸಿ ಮದ್ರಾಸ್‌ ರೂಫಿಂಗ್‌ ಮಾದರಿಯಲ್ಲಿ ನಿರ್ಮಿಸಿದ ಕಟ್ಟಡ ಇದು. ನಿರ್ಮಾಣದ ಆರಂಭದಲ್ಲಿ ಈ ಕಟ್ಟಡದಲ್ಲಿ ಕೋರ್ಟ್‌ ಕಲಾಪಗಳು ನಡೆಯುತ್ತಿದ್ದವು ಮತ್ತು ಜೈಲು ಕೂಡಾ ಇಲ್ಲೇ ಇತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಹಲವರು ಇಲ್ಲೇ ಜೈಲುವಾಸ ಅನುಭವಿಸಿದ್ದರು.

ಈ ಕಟ್ಟಡದ ಮೇಲಂತಸ್ತಿನಲ್ಲಿ 12 ಮತ್ತು ಕೆಳ ಅಂತಸ್ತಿನಲ್ಲಿ 12 ಸೆಲ್‌ಗಳಿವೆ. ಉಡುಪಿಯಲ್ಲಿ ಹೊಸ ಜೈಲು ನಿರ್ಮಾಣವಾಗುವವರೆಗೂ ಇದೇ ಜೈಲಿನಲ್ಲಿ ಕೈದಿಗಳನ್ನು ಇಡಲಾಗುತ್ತಿತ್ತು. ಸುಮಾರು 10 ವರ್ಷದಿಂದ ಈ ಕಟ್ಟಡ ಪಾಳುಬಿದ್ದಿದೆ.

ಆದರೆ ಕಟ್ಟಡ ಕೆಡವದೆ ಸಂರಕ್ಷಿಸಬೇಕು ಎಂಬ ನಿಟ್ಟಿನಲ್ಲಿ ಕಲಾವಿದರು, ಕಟ್ಟಡ ವಿನ್ಯಾಸಕರು ದೊಡ್ಡ ಆಂದೋಲನ ಮಾಡಿದ್ದರು. ಆದರೆ ಅಂತಿಮವಾಗಿ ನಗರಸಭೆಯ ಹೊಸ ಕಟ್ಟಡವನ್ನು ಈ ಜಾಗದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಸುಮಾರು 10 ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಕೆಡವಲು 12 ಲಕ್ಷ ರೂ.ಗಳಿಗೆ ಟೆಂಡರ್‌ ಆಗಿದ್ದು, ಈಗ ಹೆಂಚು ತೆಗೆಯುವ ಕೆಲಸ ಆರಂಭವಾಗಿ ದೆ. ಈ ನಡುವೆ ಸಬ್‌ಜೈಲಿನ ಭಾಗವನ್ನು ಉಳಿಸಿ ಉಳಿದ ಕೆಲಸವನ್ನು ಮುಂದುವರಿಸುವಂತೆ ಡಿಸಿ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

ನಗರಸಭೆ ಹೊಸ ಕಟ್ಟಡಕ್ಕೆ ಬೇಡಿಕೆ

Advertisement

ಕವಿ ಮುದ್ದಣ ಮಾರ್ಗದಲ್ಲಿರುವ ಈಗಿನ ನಗರ ಸಭಾ ಕಚೇರಿ ಇಕ್ಕಟ್ಟಿನಿಂದ ಕೂಡಿದ್ದು, ಹೊರಗೂ ವಾಹನ ಪಾರ್ಕಿಂಗ್‌ ಅವಕಾಶವಿಲ್ಲ. ಇಲ್ಲಿ ಸಭೆಗಳು ನಡೆದಾಗ ರಸ್ತೆಯಲ್ಲೇ ವಾಹನಗಳು ನಿಂತು ಬ್ಲಾಕ್‌ ಆಗುತ್ತವೆ. ಸಾರ್ವಜನಿಕರು ಎಲ್ಲೋ ದೂರದಲ್ಲಿ ವಾಹನ ನಿಲ್ಲಿಸಿ ಬರಬೇಕು. ಹೀಗಾಗಿ ಹೊಸ ಕಟ್ಟಡ ನಿರ್ಮಾಣದ ಬೇಡಿಕೆ ಜೋರಾಗಿತ್ತು. ಆದರೆ, ಕಳೆದ ನಾಲ್ಕೈದು ವರ್ಷಗಳಿಂದಲೂ ನಿರ್ಮಾಣ ಯೋಜನೆ ನನೆಗುದಿಯಲ್ಲೇ ಇತ್ತು.

ಇದೀಗ ಹಳೆ ತಾಲೂಕು ಕಚೇರಿ ಜಾಗದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ನಗರಸಭೆಗೆ ಆದಾಯ ಬರುವಂತೆ ವಾಣಿಜ್ಯ ಸಂಕೀರ್ಣ ಮಾದರಿಯಲ್ಲಿ ಹೊಸ ಕಟ್ಟಡ ರೂಪಿಸುವ ನೆಲೆಯಲ್ಲಿ ಯೋಜನೆ ಸಿದ್ದಪಡಿಸಲಾಗಿದೆ. ಇಲ್ಲಿ ಪಾರ್ಕಿಂಗ್‌ಗೆ ಸಮರ್ಪಕ ವ್ಯವಸ್ಥೆ ಮಾಡಬೇಕು ಎಂಬುದು ಜನರ ಬೇಡಿಕೆಯಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯೂ ಶಿಫ್ಟ್ ?
ನಗರಸಭೆ ಮತ್ತು ಪ್ರಾಧಿಕಾರ ಕಚೇರಿ ಒಟ್ಟಿಗೆ ಇದ್ದಲ್ಲಿ ಸಾರ್ವಜನಿಕ ಕೆಲಸ ಕಾರ್ಯ ಸುಲಲಿತವಾಗಿ ನೆರವೇರಲಿದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಪ್ರಾಧಿಕಾರದ ಕಚೇರಿಯನ್ನೂ ನಗರಸಭೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸುವ ನಿರ್ಧಾರದ ಬಗ್ಗೆ ಜನಪ್ರತಿನಿಧಿಗಳು ಯೋಚಿಸಬೇಕು ಎಂಬ ಬೇಡಿಕೆ ಇದೆ.

ವ್ಯವಸ್ಥಿತ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನಗರಸಭೆ ಹೊಸ ಕಟ್ಟಡ ನಿರ್ಮಾಣ ಸಂಬಂಧ ಹಳೆ ಕಟ್ಟಡ ತೆರವು ಕಾರ್ಯ ಈಗಾಗಲೇ ಆರಂಭಗೊಂಡಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ನಿತ್ಯದ ಕೆಲಸ ಕಾರ್ಯಕ್ಕೆ ಬರುವ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಪಾರ್ಕಿಂಗ್‌ ವ್ಯವಸ್ಥೆ ರೂಪಿಸಲಾಗುವುದು. ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಇದರಲ್ಲಿಯೇ ಇರುವಂತೆ ಯೋಜನೆ ರೂಪಿಸಲಾಗುವುದು. – ಪ್ರಭಾಕರ್‌ ಪೂಜಾರಿ, ಅಧ್ಯಕ್ಷರು, ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next