Advertisement

ಮಹಾನಗರ ಪಾಲಿಕೆ: ವಾರ್ಡ್‌ ಕಮಿಟಿ ಅಸ್ತಿತ್ವಕ್ಕೆ: 60 ವಾರ್ಡ್‌ಗಳ ಮಹತ್ವದ ಸಭೆ

01:22 PM Mar 09, 2022 | Team Udayavani |

ಮಹಾನಗರ: ಬಿಬಿಎಂಪಿ ಹೊರತುಪಡಿಸಿ ಮಂಗಳೂರು ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ವಾರ್ಡ್‌ ಕಮಿಟಿ ರಚನೆಯಾಗಿದ್ದು, ಸಮಿತಿಯ ಮೊದಲ ಸಭೆ ಇದೇ ತಿಂಗಳಲ್ಲಿ ನಡೆಯಲಿದೆ.

Advertisement

ಸದ್ಯದ ಮಾಹಿತಿಯಂತೆ ಮಾರ್ಚ್‌ ಮೂರನೇ ವಾರದಲ್ಲಿ ವಾರ್ಡ್‌ ಕಮಿಟಿಯ ಮೊದಲ ಸಭೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ವಾರ್ಡ್‌ ಕಾರ್ಯದರ್ಶಿಗಳು ಈಗಾಗಲೇ ಸಭೆಗೆ ತಯಾರಿ ನಡೆಸುತ್ತಿದ್ದಾರೆ. ದಿನಾಂಕ ನಿಗದಿಪಡಿಸುವ ನಿಟ್ಟಿನಲ್ಲಿ ವಾರ್ಡ್‌ ಕಾರ್ಯದರ್ಶಿಯವರು ಕಮಿಟಿಯ ಅಧ್ಯಕ್ಷರೊಡನೆ ಚರ್ಚೆ ನಡೆಸಿ ಸೂಕ್ತ ದಿನ ನಿರ್ಧಾರಕ್ಕೆ ಬರಬೇಕಾಗಿದೆ. ಸಭೆಗೆ ಒಂದು ವಾರ ಮುಂಚಿತವಾಗಿ ಕಮಿಟಿ ಸದಸ್ಯರಿಗೆ ನೋಟಿಸ್‌ ನೀಡಿ, ಆ ಸಭೆಯಲ್ಲಿ ಚರ್ಚೆ ಮಾಡುವಂತಹ ಅಜೆಂಡಾವನ್ನು ಕಾರ್ಯದರ್ಶಿಗಳು ಕಳುಹಿಸಿಕೊಡಬೇಕಿದೆ.

“ವಾರ್ಡ್‌ ಕಮಿಟಿ ರಚನೆ ಮಾಡುತ್ತೇವೆ’ ಎಂದು ಮಹಾನಗರ ಪಾಲಿಕೆ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಆದರೆ ಬಳಿಕ ವಾರ್ಡ್‌ ಕಮಿಟಿ ರಚನೆ ಕುರಿತಂತೆ ಮುಂದುವರಿದ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿತ್ತು. ಕಮಿಟಿ ಸದಸ್ಯತ್ವಕ್ಕೆ ನಾಗರಿಕರಿಂದ 1,271ಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿತ್ತು. ಇದನ್ನು ಪರಿಶೀಲನೆ ಮಾಡಿ 600 ಮಂದಿ ನಿಗದಿಪಡಿಸಲು ಒಂದು ವರ್ಷಕ್ಕೂ ಹೆಚ್ಚಿನ ಕಾಲ ತಗಲಿತ್ತು. ಇದೀಗ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ.

ಈ ಕುರಿತಂತೆ ಮಂಗಳೂರು ಸಿವಿಕ್‌ ಗ್ರೂಪ್‌ನ ಸ್ಥಾಪಕ ನೈಜೆಲ್‌ ಅಲುºಕರ್ಕ್‌ ಈ ಬಗ್ಗೆ “ಉದಯವಾಣಿ ಸುದಿನ’ಕ್ಕೆ ಮಾಹಿತಿ ನೀಡಿ, “ಪಾರದರ್ಶಕ ಆಡಳಿತಕ್ಕೆ ವಾರ್ಡ್‌ ಕಮಿಟಿ ಅತೀ ಅಗತ್ಯ. ಕೇವಲ ವಾರ್ಡ್‌ ಕಮಿಟಿ ರಚನೆ ಮಾಡಿದರೆ ಸಾಲದು, ಪರಿಣಾ ಮಕಾರಿಯಾಗಿಯೂ ಕಾರ್ಯ ನಿರ್ವಹಿಸಬೇಕು. 60 ವಾರ್ಡ್‌ ಗಳಲ್ಲಿ ಈ ಕಮಿಟಿಯು ಪ್ರತೀ ತಿಂಗಳ ಮೂರನೇ ವಾರ ಸಭೆ ನಡೆಸಿ, ಅಭಿವೃದ್ಧಿಪರ ಕೆಲಸ ಆಗಬೇಕು. ಎರಡನೇ ಭಾಗವಾಗಿ ಏರಿಯಾ ಸಭಾವೂ ಅನುಷ್ಠಾನ ಆಗಬೇಕು’ ಎನ್ನುತ್ತಾರೆ.

ಇದನ್ನೂ ಓದಿ:ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ

Advertisement

ವಾರ್ಡ್‌ಗಳಲ್ಲಿ ಸದಸ್ಯರ ಕೊರತೆ
ವಾರ್ಡ್‌ ಕಮಿಟಿ ರಚನೆಗೆ ಸಂಬಂಧಪಟ್ಟಂತೆ ಪಾಲಿಕೆಯು ಕೆಲವು ತಿಂಗಳುಗಳ ಹಿಂದೆಯೇ ಅರ್ಜಿ ಆಹ್ವಾನ ಮಾಡಿತ್ತು. ಪ್ರತ್ಯೇಕ ಪಂಗಡದಂತೆ ಮೂರು ಮಂದಿ ಸಾಮಾನ್ಯ ವರ್ಗ, ಮೂರು ಮಂದಿ ಮಹಿಳೆಯರು, ಇಬ್ಬರು ಸಂಘ ಸಂಸ್ಥೆ ಪ್ರಮುಖರು, ತಲಾ ಒಬ್ಬರು ಎಸ್‌.ಸಿ. ಮತ್ತು ಎಸ್‌.ಟಿ. ಪಂಗಡ ಇರಬೇಕು. ಒಟ್ಟಾರೆ 10 ಮಂದಿ ಸದಸ್ಯರು, ಒಬ್ಬರು ವಾರ್ಡ್‌ ಕಾರ್ಯದರ್ಶಿ, ಒಬ್ಬರು ವಾರ್ಡ್‌ ಅಧ್ಯಕ್ಷರು (ಆಯಾ ವಾರ್ಡ್‌ ಮನಪಾ ಸದಸ್ಯರು) ಇರುತ್ತಾರೆ. ಆದರೆ, ಅರ್ಜಿ ಸಲ್ಲಿಕೆ ವೇಳೆ ಹೆಚ್ಚಿನ ಸಾರ್ವಜನಿಕರಿಗೆ ಮಾಹಿತಿ ಕೊರತೆ ಕಾರಣ, ಸುಮಾರು 40 ರಿಂದ 45 ವಾರ್ಡ್‌ಗಳಲ್ಲಿ ವಾರ್ಡ್‌ ಕಮಿಟಿ ಸದಸ್ಯರು 10 ಮಂದಿ ಇಲ್ಲ. ಇದೇ ಕಾರಣಕ್ಕೆ ಒಟ್ಟು 600 ಮಂದಿ ಸದಸ್ಯರ ಪೈಕಿ ಇನ್ನೂ 150ಕ್ಕೂ ಹೆಚ್ಚಿನ ಮಂದಿ ಸದಸ್ಯ ಸ್ಥಾನ ಖಾಲಿ ಇದೆ.

ವಾರ್ಡ್‌ ಸಮಿತಿ ಎಂದರೇನು?
ನಗರಾಡಳಿತವನ್ನು ವಿಕೇಂದ್ರೀಕರಿಸಿ ವಾರ್ಡ್‌ ಮಟ್ಟದಲ್ಲಿ ನಾಗರಿಕರ ಸಹಭಾಗಿತ್ವದೊಂದಿಗೆ ಆಯಾ ವಾರ್ಡ್‌ನಲ್ಲಿ ಪಾರದರ್ಶಕ ಆಡಳಿತ, ಗುಣಮಟ್ಟದ ಕೆಲಸ ಸಹಿತ ವಾರ್ಡ್‌ನ ಅಭಿವೃದ್ಧಿಗೆ ರಚನೆಯಾದ ಸಮಿತಿಯೇ ವಾರ್ಡ್‌ ಕಮಿಟಿಯಾಗಿದೆ. ಪಾಲಿಕೆ ವ್ಯಾಪ್ತಿ ಒಟ್ಟು 60 ವಾರ್ಡ್‌ಗಳಿವೆ. ಪ್ರತೀ ವಾರ್ಡ್‌ಗೆ 10 ಮಂದಿಯಂತೆ ಸದಸ್ಯರು, ಒಬ್ಬರು ವಾರ್ಡ್‌ ಕಾರ್ಯದರ್ಶಿ ಮತ್ತು ಒಬ್ಬರು ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ಪಾಲಿಕೆ, ಸಾರ್ವಜನಿಕರ ಕೊಂಡಿಯಾಗಿ ಈ ಕಮಿಟಿ ಕಾರ್ಯ ನಿರ್ವಹಿಸುತ್ತದೆ. ಪಾಲಿಕೆ ವ್ಯಾಪ್ತಿಯನ್ನು ವಾರ್ಡ್‌ ಮಟ್ಟದಲ್ಲಿಯೇ ಬಲಪಡಿಸುವುದು ಇದರ ಕೆಲಸ. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಪ್ರಾಥಮಿಕ ಮಟ್ಟ ದಿಂದಲೇ ಯೋಜನೆ, ಬಜೆಟ್‌ಅನ್ನು ಅನುಷ್ಠಾನಗೊಳಿಸಲು ಸಹಕಾರ ನೀಡುವುದು ಇದರ ಕೆಲಸವಾಗಿದೆ. ಪ್ರತೀ ತಿಂಗಳು ವಾರ್ಡ್‌ ಮಟ್ಟದಲ್ಲಿ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ವಾರ್ಡ್‌ನ ನಾಗರಿಕರು ಅವರವರ ಪರಿಸರದಲ್ಲಿರುವ ಸಮಸ್ಯೆಗಳ ಬಗ್ಗೆ ಬರೆಹ ರೂಪದಲ್ಲಿ ವಾರ್ಡ್‌ ಸಮಿತಿ ಸದಸ್ಯರಿಗೆ ತಲುಪಿಸಬೇಕು. ವಾರ್ಡ್‌ ಸದಸ್ಯರು ಅರ್ಜಿ ಸ್ವೀಕರಿಸಿ, ವಾರ್ಡ್‌ ಕಾರ್ಯದರ್ಶಿ ಜತೆ ಮಾತನಾಡಿ ಸಭೆಯ ಅಜೆಂಡಾದಲ್ಲಿ ಹಾಕಬೇಕು. ಸಭೆಯ ಮುಖೇನ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು.

ಸದ್ಯದಲ್ಲೇ ಸಭೆ
ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ ಕಮಿಟಿ ಈಗಾಗಲೇ ರಚನೆ ಮಾಡಿದ್ದು, ಮಾರ್ಚ್‌ ತಿಂಗಳಿನಲ್ಲಿ ಮೊದಲ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ಕೆಲವೊಂದು ವಾರ್ಡ್‌
ಗಳಲ್ಲಿ ಕಮಿಟಿಗೆ ನಿಗದಿತ 10 ಮಂದಿ ಸದಸ್ಯರು ಇಲ್ಲ. ಈ ಕುರಿತಂತೆ ಭರ್ತಿ ಮಾಡುವ ನಿಟ್ಟಿನಲ್ಲಿ ವಾರ್ಡ್‌ ಕಮಿಟಿ ಕಾರ್ಯದರ್ಶಿಗಳು ಗಮನಹರಿಸಲಿದ್ದಾರೆ.
-ಅಕ್ಷಯ್‌ ಶ್ರೀಧರ್‌,
ಮನಪಾ ಸದಸ್ಯ

 

Advertisement

Udayavani is now on Telegram. Click here to join our channel and stay updated with the latest news.

Next