Advertisement

ಪಾಲಿಕೆಯಲ್ಲಿ ಮತ್ತೆ ಪ್ರತಿಧ್ವನಿಸಿದ ನೀರಿನ ದರ ಸಮರ

10:25 PM Aug 27, 2021 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಇಳಿಕೆ ಮಾಡುವ ಸಂಬಂಧ ಕಳೆದ ವರ್ಷ ಮನಪಾ ಸಭೆಯಲ್ಲಿ ಕೈಗೊಂಡ ನಿರ್ಣಯ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

Advertisement

ಮೇಯರ್‌ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಾಲಿಕೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾ ವಿಸಿದ ಮನಪಾ ಸದಸ್ಯ ಅಬ್ದುಲ್‌ ರವೂಫ್‌, ಮನಪಾ ವ್ಯಾಪ್ತಿಯಲ್ಲಿ ನೀರಿನ ದರ ಕಡಿಮೆ ಮಾಡಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಇನ್ನೂ ಕಾರ್ಯಗತವಾಗಿಲ್ಲ. ಕೋವಿಡ್ ಕಾರಣದಿಂದ ಸಾರ್ವಜನಿಕರು ಹಲವಾರು ಸಮಸ್ಯೆ ಎದುರಿಸುತ್ತಿದ್ದು, ನೀರಿನ ದರ ಏರಿಕೆ ಹೊರೆಯಾಗುತ್ತಿದೆ. ಮೂರು ತಿಂಗಳುಗಳ ನೀರಿನ ಬಿಲ್‌ ಮನ್ನಾ ಮಾಡಿ ಎಂದು ವಿಪಕ್ಷದಿಂದಲೂ ಮನವಿ ಮಾಡಿದ್ದೇವೆ. ನೀರಿನ ದರ ಇಳಿಕೆಗೆ ನಿರ್ಣಯ ಕೈಗೊಂಡು ವರ್ಷ ಕಳೆದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದರು.

ಸದಸ್ಯ ವಿನಯರಾಜ್‌ ಮಾತನಾಡಿ, 240,00 ಲೀಟರ್‌ವರೆಗಿನ ಮಾಸಿಕ 65 ರೂ. ಗಳಿದ್ದ ದರವನ್ನು 2019ರಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ 8 ಸಾವಿರ ಲೀಟರ್‌ವರೆಗೆ ಪ್ರತಿ ಸಾವಿರ ಲೀಟರ್‌ ಬಳಕೆಗೆ 7 ರೂ., 8ರಿಂದ 15 ಸಾವಿರ ಲೀಟರ್‌ಗೆ 9 ರೂ., 15ರಿಂದ 25 ಸಾವಿರ ಲೀಟರ್‌ಗೆ 11 ರೂ. ಹಾಗೂ 25 ಲೀಟರ್‌ಗಿಂದ ಅಧಿಕ ಬಳಕೆಗೆ 13 ರೂ.ಗಳನ್ನು ನಿಗದಿಪಡಿಸಲಾಗಿತ್ತು. ಹಿಂದಿನ ಮೇಯರ್‌ ಅವರ ಅವಧಿಯಲ್ಲಿ ಮಾಸಿಕ ದರವನ್ನು 60 ರೂ.ಗಳಿಗೆ ನಿಗದಿಪಡಿಸಿ, 10 ಸಾವಿರ ಲೀಟರ್‌ವರೆಗೆ ಏರಿಕೆ ಮಾಡಿದ್ದು, ಪ್ರತಿ ಸಾವಿರ ಲೀಟರ್‌ಗೆ 6 ರೂ., 10ರಿಂದ 15 ಸಾವಿರ ಲೀಟರ್‌ಗೆ 7 ರೂ., 15 ಸಾವಿರದಿಂದ 20 ಸಾವಿರ ಲೀಟರ್‌ವರೆಗೆ 9 ರೂ., 20 ಸಾವಿರದಿಂದ 30 ಸಾವಿರ ಲೀಟರ್‌ವರೆಗೆ 11 ರೂ. ಹಾಗೂ 30,000 ಲೀಟರ್‌ಗಿಂತ ಮೇಲ್ಪಟ್ಟ ಬಳಕೆಗೆ 13 ರೂ.ನಂತೆ ನಿಗದಿಪಡಿಸಲಾಗಿತ್ತು. ಆದರೆ ಆ ದರವನ್ನು ಇನ್ನೂ ಅನುಷ್ಠಾನಗೊಳಿಸಲಾಗಿಲ್ಲ ಎಂದರು. ಹಿರಿಯ ಸದಸ್ಯ ಲ್ಯಾನ್ಸಿಲಾಟ್‌ ಪಿಂಟೋ ಧ್ವನಿಗೂಡಿಸಿದರು.

ಇದನ್ನೂ ಓದಿ:ಕಾಮುಕರನ್ನ ಬಂಧಿಸುವ ಕಾನೂನು ಮತ್ತಷ್ಟು ಗಟ್ಟಿಯಾಬೇಕು : ನಟಿ ಶ್ರುತಿ

ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಮಾತನಾಡಿ, ಈ ಹಿಂದೆ ಪಾಲಿಕೆ ಸಭೆಯಲ್ಲಿ ಆದ ನಿರ್ಣಯವನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ. ಮೇ ತಿಂಗಳಿನಲ್ಲಿ ಪತ್ರ ಬಂದಿದ್ದು, ಆದೇಶವನ್ನು ಬದಲು ಮಾಡಲು ಆಗುವುದಿಲ್ಲ ಎಂಬ ಉತ್ತರ ಕಳುಹಿಸಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿನಯರಾಜ್‌, ಸರಕಾರದಿಂದ ಉತ್ತರ ಬಂದು 4 ತಿಂಗಳು ಕಳೆದರೂ ಇಲ್ಲಿನ ಶಾಸಕರು, ಮೇಯರ್‌, ಉಸ್ತುವಾರಿ ಸಚಿವರ ಮುಖೇನ ರಾಜ್ಯ ಸರಕಾರಕ್ಕೆ ಏಕೆ ಒತ್ತಡ ಹಾಕುತ್ತಿಲ್ಲ ಎಂದರು.

Advertisement

ಸದಸ್ಯ ಪ್ರವೀಣ್‌ ಚಂದ್ರ ಆಳ್ವ ಮಾತನಾಡಿ, ಕೆಲವೆಡೆ ಮೂರ್‍ನಾಲ್ಕು ತಿಂಗಳುಗಳಿಂದ ನೀರಿನ ಬಿಲ್‌ ಬಂದಿಲ್ಲ. ಇದರಿಂದಾಗಿ ಪಾಲಿಕೆ ಆದಾಯಕ್ಕೂ ಕೊರತೆ ಉಂಟಾಗುತ್ತಿದೆ ಎಂದರು. ಮೇಯರ್‌ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯಿಸಿ, ನೀರಿನ ದರ ಕಡಿಮೆ ಮಾಡಬೇಕು ಎಂಬ ನಿರ್ಧಾಕ್ಕೆ ನಮ್ಮ ಸಹಮತ ಇದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ರಾಜ್ಯ ಸರಕಾರಕ್ಕೂ ಮನವಿ ಮಾಡುತ್ತೇವೆ ಎಂದರು.

ಇದೇ ವೇಳೆ ಕಾರ್ಯಸೂಚಿ ಕುರಿತ ಚರ್ಚೆಯ ವೇಳೆ ನೀರಿನ ಬಿಲ್ಲಿನಲ್ಲಿ ದಂಡನಾ ಶುಲ್ಕವನ್ನು ಕೈಬಿಡುವ ಬಗ್ಗೆಯೂ ನಿರ್ಣಯಿಸಲಾಯಿತು.
ಗೋರಿಗುಡ್ಡ ಬಳಿಯ ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ನೆಹರೂ ರೋಡ್‌ ಸರ್ವಿಸ್‌ ರಸ್ತೆ ಕಳೆದ ಒಂದು ವರ್ಷದಿಂದ ಸಂಪರ್ಕ ಕಡಿತಗೊಂಡಿದೆ ಎಂದು ಜೆಸಿಂತಾ ವಿಜಯ ಆಲ್ಫೆ†ಡ್‌ ಪ್ರಸ್ತಾವಿಸಿದರು. ಪ್ರವೀಣ್‌ ಚಂದ್ರ ಆಳ್ವ ಕೂಡ ಈ ಭಾಗದ ರಸ್ತೆಗಳ ಸಮಸ್ಯೆಯ ಬಗ್ಗೆ ಗಮನಸೆಳೆದರು. ಆಯುಕ್ತರು ಪ್ರತಿಕ್ರಿಯಿಸಿ, ರಾಷ್ಟ್ರೀಯ ಹೆದ್ದಾರಿಯ ಅನೇಕ ಸಮಸ್ಯೆಗಳಿದ್ದು, ಕೆಲವೊಂದು ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು ಎಂದರು.

ಮತ್ತೆ ಟೈಗರ್‌ ಕಾರ್ಯಾಚರಣೆ
ಮನಪಾ ಸದಸ್ಯ ಜಯಾನಂದ ಅಂಚನ್‌ ಮಾತನಾಡಿ, ನಗರದ ಹಲವು ರಸ್ತೆಗಳನ್ನು ವಿಸ್ತರಿಸಿದ್ದರೂ ಅದು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಅಲ್ಲಲ್ಲಿ ಅನಧಿಕೃತವಾಗಿ ಬೀದಿ ಬದಿ ವ್ಯಾಪಾರಸ್ಥರು ರಸ್ತೆ ಆಕ್ರಮಿಸು ತ್ತಿದ್ದಾರೆ ಎಂದರು. ಈ ಸಂದರ್ಭ ಪಕ್ಷಾತೀತವಾಗಿ ಸದಸ್ಯರು ಪೂರಕವಾಗಿ ಪ್ರತಿಕ್ರಿಯಿಸಿ, ಫ‌ುಟ್‌ಪಾತ್‌, ಬೀದಿ ಬದಿಗಳಲ್ಲಿ ಅನಧಿಕೃತವಾಗಿ ಗೂಡಂಗಡಿ, ಬೀದಿ ಬದಿ ವ್ಯಾಪಾರ, ಅನಧಿಕೃತ ಪಾರ್ಕಿಂಗ್‌ನಿಂದ ಸಮಸ್ಯೆಯಾಗುತ್ತಿದೆ ಎಂದರು.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೇಯರ್‌ ಪ್ರೇಮಾನಂದ ಶೆಟ್ಟಿ, ಟೈಗರ್‌ ಕಾರ್ಯಾಚರಣೆ ನಡೆಸುವಂತೆ ಕಳೆದ ಬಾರಿಯ ಸಭೆಯಲ್ಲೇ ನಿರ್ದೇಶನ ನೀಡಲಾಗಿದೆ. ಆದರೆ ಈಗ ಯಾಕೆ ನಿಲ್ಲಿಸಿದ್ದೀರಿ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ತೆರವು ಕಾರ್ಯಾ ಚರಣೆಗೆ ಸಾಮಗ್ರಿಗಳ ಕೊರತೆಯಿದೆ ಎಂದರು. ಈ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ ಯಾಕೆ ಎಂದು ಮೇಯರ್‌ ಪ್ರಶ್ನಿಸಿದಾಗ, ಆಯುಕ್ತರು ಪ್ರತಿಕ್ರಿಯಿಸಿ, ಎಲ್ಲವೂ ಇದೆ ಕಾರ್ಯಾಚರಣೆ ಆರಂಭಿಸುವುದಾಗಿ ಹೇಳಿದರು. ಸೋಮವಾರದಿಂದ ಕಾರ್ಯಾ ಚರಣೆ ನಡೆಯಬೇಕು ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಲ್ಟಿಲೆವಲ್‌ ಕಾರು ಪಾರ್ಕಿಂಗ್‌; ಯೋಜನೆ ತಡೆಗೆ ಸೂಚನೆ
ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಾಳಂಭಟ್‌ ಸಭಾಂಗಣದ ಎದುರು ಹೈಡ್ರೋಲಿಕ್‌ ಕಾರು ಪಾರ್ಕಿಂಗ್‌ ನಿರ್ಮಾಣವಾಗುತ್ತಿದೆ. ಆದರೆ ಇದು ಮನಪಾ ಗಮನಕ್ಕೆ ಬಂದಿಲ್ಲ. ಮೇಯರ್‌ ಅವರಲ್ಲಿ ಕೇಳಿದರೆ ಅವರಿಗೂ ಮಾಹಿತಿಯಿಲ್ಲ ಎಂದು ಸದಸ್ಯ ಅಬ್ದುಲ್‌ ಲತೀಫ್ ತಿಳಿಸಿದರು. ಸ್ಮಾರ್ಟ್‌ ಸಿಟಿ ಅಧಿಕಾರಿ ಪ್ರತಿಕ್ರಿಯಿಸಿ, ಮನಪಾದಿಂದ ಎರಡು ಬಾರಿ ಅನುಮತಿ ಪಡೆದು ಅಲ್ಲಿದ್ದ ಬಿಲ್ಡಿಂಗ್‌ ಕೆಡವಿ ಸೊತ್ತನ್ನು ಮಾರಾಟ ಮಾಡಿ ಟೆಂಡರ್‌ ಕರೆಯಲಾಗಿದೆ. ಇದು ಸ್ಮಾರ್ಟ್‌ ಸಿಟಿ ಯೋಜನೆಯಡಿ ಪಿಪಿಪಿ ಮಾದರಿಯಲ್ಲಿ ಆಗುತ್ತಿರುವ ಯೋಜನೆಯಾದ್ದರಿಂದ ಸ್ಮಾರ್ಟ್‌ ಸಿಟಿಯ ಆಡಳಿತ ನಿರ್ದೇಶಕರೇ ಅನುಮತಿ ನೀಡಬಹುದು ಎಂದರು. ಮುಖ್ಯ ಸಚೇತಕ ಸುಧೀರ್‌ ಶೆಟ್ಟಿ ಕಣ್ಣೂರು ಪ್ರತಿಕ್ರಿಯಿಸಿ, ಇದು ಪಿಪಿಪಿ ಮಾದರಿಯಲ್ಲಿ ಆಗುತ್ತಿರುವ ಯೋಜನೆ. ಇದಕ್ಕೆ ಸ್ಮಾರ್ಟ್‌ ಸಿಟಿ ಹಣ ಬಳಕೆ ಮಾಡಲಾಗುತ್ತಿಲ್ಲ ಎಂದರು. ಈ ಸಂದರ್ಭ ಕೆಲಹೊತ್ತು ಸದನದಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮೇಯುರ್‌ ಪ್ರತಿಕ್ರಿಯಿಸಿ, ಈ ಯೋಜನೆಗೆ ಮನಪಾ ಸದಸ್ಯರ ಸಹಮತ ಅಗತ್ಯವಿದೆ. ಸದನದಲ್ಲಿ ಯೋಜನೆಯನ್ನು ಮಂಡಿಸಿ ಮಂಜೂರಾತಿ ಪಡೆಯಬೇಕು. ಹಾಗಾಗಿ ಸದ್ಯ ಕಾಮಗಾರಿಯನ್ನು ತಡೆಯುವಂತೆ ಸೂಚಿಸಿದರು. ಉಪ ಮೇಯರ್‌ ಸುಮಂಗಲಾ ರಾವ್‌, ಸ್ಥಾಯೀ ಸಮಿತಿ ಅಧ್ಯಕ್ಷರಾದ ಲೋಕೇಶ್‌ ಬೊಳ್ಳಾಜೆ, ಸಂದೀಪ್‌, ಸೋಭಾ ರಾಜೇಶ್‌, ಲೀಲಾವತಿ ಉಪಸ್ಥಿತರಿದ್ದರು.

“ಸುದಿನ’ ವರದಿ ಪ್ರಸ್ತಾವ
ನಗರದ ವಿವಿಧ ಕಡೆಗಳಲ್ಲಿ ವಿದ್ಯುತ್‌ ಕಂಬಗಳಲ್ಲಿ ನೆಟ್‌ವರ್ಕ್‌ ಕೇಬಲ್‌ ಅಳವಡಿಸಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂಬ ಆ. 27ರ “ಉದಯವಾಣಿ ಸುದಿನ’ ವರದಿ ಮನಪಾ ಸಾಮಾನ್ಯ ಸಭೆಯಲ್ಲಿಯೂ ಪ್ರಸ್ತಾವವಾಯಿತು. ಮನಪಾ ಮುಖ್ಯಸಚೇತಕ ಸುಧೀರ್‌ ಶೆಟ್ಟಿ ಕಣ್ಣೂರು ಮಾತನಾಡಿ, ನಗರದ ವಿದ್ಯುತ್‌ ಕಂಬಗಳಲ್ಲಿ ನೆಟ್‌ವರ್ಕ್‌ ಕೇಬಲ್‌ ಅಳವಡಿಸಿದ್ದು, ತೆರವುಗೊಳಿಸುವಂತೆ ಹಲವು ಬಾರಿ ಹೇಳಿದರೂ ಸಮಸ್ಯೆ ಬಗೆಹರಿದಿಲ್ಲ. ಕೆಲವೆಡೆ ಅನಧಿಕೃತವಾಗಿಯೂ ಕೇಬಲ್‌ ಅಳವಡಿಸಲಾಗಿದ್ದು, ಕೂಡಲೇ ತೆರವು ಮಾಡಬೇಕು. ವಿದ್ಯುತ್‌ ಕಂಬ ಮನಪಾ ವ್ಯಾಪ್ತಿಯಲ್ಲಿದ್ದರೂ ಇದರ ಆದಾಯ ಮೆಸ್ಕಾಂನವರು ಪಡೆಯುತ್ತಾರೆ ಎಂದರು. ಈ ಸಮಸ್ಯೆಯ ಬಗ್ಗೆ ಮಾಜಿ ಮೇಯರ್‌ ದಿವಾಕರ್‌ ಪಾಂಡೇಶ್ವರ, ಸದಸ್ಯರಾದ ಮನೋಜ್‌ ಕುಮಾರ್‌, ವಿನಯರಾಜ್‌, ಅಬ್ದುಲ್‌ ರವೂಫ್‌ ಮಾತನಾಡಿದರು. ಮೆಸ್ಕಾಂ ಅಧಿಕಾರಿಗಳು ಪ್ರತಿಕ್ರಿಯಿಸಿ, ವಿದ್ಯುತ್‌ ಕಂಬಗಳಲ್ಲಿ ನೆಟ್‌ವರ್ಕ್‌ ಕೇಬಲ್‌ ಅಳವಡಿಕೆಗೆ ಮನಪಾ ನಿರಾಕ್ಷೇಪಣ ಪತ್ರ ಕಡ್ಡಾಯ ಮಾಡಿದ್ದೇವೆ ಎಂದರು. ಸದಸ್ಯೆ ಸಂಗೀತಾ ನಾಯಕ್‌ ಮಾತನಾಡಿ, ವಿವಿಧ ಕಾಮಗಾರಿ ನಡೆಸುವ ವೇಳೆ ವಿದ್ಯುತ್‌ ಕಂಬ ಸ್ಥಳಾಂತರಿಸುವ ಜವಾಬ್ದಾರಿ ಮೆಸ್ಕಾಂ ಹೊರುತ್ತಿಲ್ಲ ಎಂದರು. ಮೇಯರ್‌ ಮಾತನಾಡಿ, ಮೆಸ್ಕಾಂಗೆ ಸಂಬಂಧಪಟ್ಟಂತೆ ಅನೇಕ ಸಮಸ್ಯೆಗಳು ಬರುತ್ತಿದೆ. ಈ ಕುರಿತು ಸದ್ಯದಲ್ಲೇ ಮೆಸ್ಕಾಂ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು ಎಂದರು.

ಇದನ್ನೂ ಓದಿ:ವಿಮಾನ ಚಲಿಸುತ್ತಿರುವಾಗಲೇ ಪೈಲಟ್‌ಗೆ ಹೃದಯಾಘಾತ; ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ

ಇತರ ಚರ್ಚಿತ ವಿಷಯ
– ನಗರದ ಕೆಲವೆಡೆ ನೀರಿನ ಮೀಟರ್‌ ಹಾಳಾಗಿದ್ದು ಸರಿಪಡಿಸಬೇಕು.
– ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಕುರಿತು ಸದ್ಯದಲ್ಲೇ ಸಭೆ.
– ಮೆಸ್ಕಾಂನವರು ಮರದ ಗೆಲ್ಲು ಕಡಿದ ಬಳಿಕ ತೆರವು ಮಾಡುತ್ತಿಲ್ಲ.
– ನೆಟ್‌ವರ್ಕ್‌ ಕಂಪೆನಿಯೊಂದು ರಸ್ತೆಯಲ್ಲಿ ಅಳವಡಿಸಿದ ಕಂಬ ತೆರವುಗೊಳಿಸಬೇಕು.
– ಪ್ರಮುಖ ರಸ್ತೆ ಹೊರತುಪಡಿಸಿಯೂ ಟೈಗರ್‌ ಕಾರ್ಯಾಚರಣೆ ನಡೆಯಲಿ.

ಮೀನುಗಾರಿಕೆ ಕಾಲೇಜಿಗೆ ವಿವಿ ಸ್ಥಾನಮಾನ: ಸರಕಾರಕ್ಕೆ ಪ್ರಸ್ತಾವ
ಮಂಗಳೂರಿನ ಮೀನುಗಾರಿಕೆ ಕಾಲೇಜಿಗೆ ವಿಶ್ವವಿದ್ಯಾನಿಲಯದ ಸ್ಥಾನಮಾನ ನೀಡ ಬೇಕೆಂಬ ಸದಸ್ಯ ಭರತ್‌ ಕುಮಾರ್‌ ಅವರ ಬೇಡಿಕೆಯನ್ನು ಪರಿಷತ್‌ನ ಕಾರ್ಯಸೂಚಿಯಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ಮನಪಾ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next