ಮಂಗಳೂರು: ನಗರದ ಎಂಜಿ ರಸ್ತೆಯ ಬಹುಅಂತಸ್ತಿನ ಹೊಟೇಲ್‌ವೊಂದರಲ್ಲಿ ಶುಕ್ರವಾರ ಸಂಜೆ ಬೆಂಕಿ ಅವಘಡ ಸಂಭವಿಸಿದೆ.
9 ಅಂತಸ್ತುಗಳ ಈ ಹೊಟೇಲ್ ಕಟ್ಟಡದ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡು ಚಿಮಿಣಿಯ ಮೂಲಕ ಮೇಲಕ್ಕೆ ಪಸರಿಸಿದೆ.
ಹೊಗೆ ಕಾಣಿಸಿಕೊಂಡ ಕೂಡಲೇ ಅಡುಗೆ ಕೋಣೆಯಲ್ಲಿದ್ದ ಸಿಬಂದಿ ಹೊರಗೆ ಬಂದಿದ್ದಾರೆ. ಅನಂತರ ಪಾಂಡೇಶ್ವರ ಅಗ್ನಿಶಾಮಕ ದಳದವರು ಬಂದು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ದಟ್ಟ ಹೊಗೆ ಮತ್ತು ಬೆಂಕಿ ಕಟ್ಟಡದ ತುದಿಯಲ್ಲಿ ಕಾಣಿಸಿಕೊಂಡು ಅಕ್ಕಪಕ್ಕದ ಕಟ್ಟಡಗಳಲ್ಲಿದ್ದವರಲ್ಲಿಯೂ ಭೀತಿ ಮೂಡಿಸಿತು. ಆದರೆ ಅದೃಷ್ಟವಶಾತ್ ಬೆಂಕಿ ಪಕ್ಕದ ಕಟ್ಟಡಗಳಿಗೆ ವ್ಯಾಪಿಸಿಲ್ಲ. ಹೊಟೇಲ್‌ನಲ್ಲಿ ರೂಮ್‌ಗಳು ಕೂಡ ಇವೆ. ಬೆಂಕಿ ಚಿಮಿಣಿ ಪಕ್ಕದಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಇತರ ಕಡೆಗೆ ಪಸರಿಸಿಲ್ಲ. ಹಾಗಾಗಿ ಯಾರಿಗೂ ಅಪಾಯ ಉಂಟಾಗಿಲ್ಲ ಎಂದು ತಿಳಿದುಬಂದಿದೆ.