ಮಂಗಳೂರು: ಎಸ್ ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳಿಗೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳು ಸೇರಿ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಇನೋಳಿ ನಿವಾಸಿಗಳಾದ ನೌಷಾದ್ (28), ಹೈದರಾಲಿ (27) ಬಂಧಿತ ಆರೋಪಿಗಳು. ಆರೋಪಿಗಳಿಗೆ ಆಶ್ರಯ ನೀಡಿದ ಮಂಗಳೂರು ಪಾಂಡೇಶ್ವರ ನಿವಾಸಿ ಮೊಹಮ್ಮದ್ ಸಯ್ಯದ್ ಅಫ್ರೀದ್ (23), ಕೋಣಾಜೆ ನಿವಾಸಿ ಬಶೀರ್ (40), ಮಂಗಳೂರು ಇನೋಳಿ ನಿವಾಸಿ ಬುಬೇರ್ (32), ಪುತ್ತೂರಿನ ಜಲೀಲ್ (25) ಹಾಗೂ ಪೊಲೀಸರ ತನಿಖೆಗೆ ಅಡ್ಡಿ ಪಡಿಸಿದ್ದ ವಿಟ್ಲ ನಿವಾಸಿ ಮೊಹಮ್ಮದ್ ಯಾಸೀನ್ (25), ಅಫ್ರೀದ್ ಸಾಗ್ (19), ಮಂಗಳೂರಿನ ಶಿವಭಾಗ್ ನಿವಾಸಿ ಮೊಹಮ್ಮದ್ ತುಫೇಲ್ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಗಿದ್ದೇನು?: ಎಸ್‌ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿದ್ದ, ಆರೋಪಿಗಳ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳವಾರ ಆರೋಪಿಗಳನ್ನು ಮತ್ತು ಅವರಿಗೆ ಆಶ್ರಯ ನೀಡಿದವರನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ, ಪ್ರಮುಖ ಆರೋಪಿತರಾದ ನೌಷಾದ್ ಮತ್ತು ಹೈದರಾಲಿ, ಇತ್ತೀಚೆಗೆ ಕೇರಳದ ಅಲಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರಿಗೆ ಬೈಯ್ಯುವ ವಾಟ್ಸಾಪ್ ವೈರಲ್ ವೀಡಿಯೋಗಳನ್ನು ನೋಡಿ ಪ್ರಭಾವಿತರಾಗಿದ್ದರು. ಮಂಗಳೂರಿನ ಕಾರ್ಯಕ್ರಮದ ಸಂದರ್ಭದಲ್ಲಿ ಸ್ಥಳೀಯ ಎಸ್.ಡಿ.ಪಿ.ಐ. ನಾಯಕರು ಮತ್ತು ಕಾರ್ಯಕ್ರಮದ ಆಯೋಜಕರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಮತ್ತು ಅದಕ್ಕಾಗಿ ದಾರಿಯುದ್ದಕ್ಕೂ ತಮ್ಮ ವಿರೋಧಿ ಸಂಘಟನೆಗಳ ವಿರುದ್ಧ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಬೇಕು ಎಂದು ಹೇಳಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಅಲ್ಲದೇ ನಿಮಗೆ ಏನಾದರೂ ತೊಂದರೆಯಾದಲ್ಲಿ ಎಲ್ಲಾ ರೀತಿಯ ಬೆಂಬಲವನ್ನು ನೀಡಿ, ನಿಮ್ಮನ್ನು ರಕ್ಷಿಸುವ ಜವಾಬ್ದಾರಿ ನಮ್ಮದು ಎಂದು ತಮ್ಮನ್ನು ಹುರಿದುಂಬಿಸಿರುವುದಾಗಿ ಪೊಲೀಸರ ಎದುರು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಇದನ್ನೂ ಓದಿ:ಮುಂಬಯಿ: ಕೌಟುಂಬಿಕ ಕಲಹ-ಆರು ಮಕ್ಕಳನ್ನು ಬಾವಿಗೆ ಎಸೆದು ಹತ್ಯೆಗೈದ ತಾಯಿ
ಅಲ್ಲದೇ ತಾವು ಕಾರ್ಯಕ್ರಮ ಮುಗಿದ ಕೂಡಲೇ ಮೈಸೂರು ಮತ್ತು ಬೆಂಗಳೂರಿಗೆ ಹೋಗಿ ಪೊಲೀಸರ ಕಣ್ತಪ್ಪಿಸಿ ಅಡಗಿ ಕುಳಿತು ಅಲ್ಲಿಂದ ಮುಂದೆ ಕೇರಳ, ಕಾಸರಗೋಡು ಪರಿಸರದಲ್ಲಿ ಆಶ್ರಯ ಪಡೆದು ಪೊಲೀಸರಿಗೆ ಸಿಗದಂತೆ ಯೋಜನೆ ರೂಪಿಸಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.
ಆರೋಪಿಗಳಿಗೆ ಆಶ್ರಯ ನೀಡಿದ 4 ಜನರನ್ನು ಹಾಗೂ ತನಿಖೆಗೆ ಅಡ್ಡಿ ಪಡಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.