Advertisement

ಮರಳಿ ಮನೆ ಮನೆಗೆ ಕಾಂಗ್ರೆಸ್‌

06:00 AM Nov 20, 2017 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯ ವಿಸ್ತಾರಕ ಯೋಜನೆಗೆ ಪ್ರತಿಯಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಮನೆ ಮನೆಗೆ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಪಂದನೆ ಸಿಗದಿರುವುದರಿಂದ 2ನೇ ಹಂತದ “ಮರಳಿ ಮನೆ ಮನೆಗೆ’ ಕಾಂಗ್ರೆಸ್‌ ಕಾರ್ಯಕ್ರಮ ಆರಂಭಿಸಲು ನಿರ್ಧರಿಸಿದೆ.

Advertisement

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ಉದ್ದೆªàಶದಿಂದ ಬರುವ ಜನವರಿಯಲ್ಲಿ ಈ ಕಾರ್ಯಕ್ರಮ ನಡೆಸಲಿದೆ. ವಿಸ್ತಾರಕ ಯೋಜನೆಯ ಮೂಲಕ ಬಿಜೆಪಿಯವರು ರಾಜ್ಯದ ಎಲ್ಲಾ ಮನೆಗೂ ತಲುಪುವ ಪ್ರಯತ್ನ ಮಾಡಿದ್ದರು. ಇದರ ಪರಿಣಾಮ ರಾಜ್ಯದ 55,400 ಬೂತ್‌ಗಳ ಪೈಕಿ ಸುಮಾರು 54 ಸಾವಿರ ಬೂತ್‌ಗಳನ್ನು ತಲುಪಿದ್ದ ಬಿಜೆಪಿ, ಬೂತ್‌ ಸಮಿತಿಯನ್ನು ರಚಿಸಿತ್ತು. ಅಲ್ಲದೇ, ಪ್ರತಿ ಬೂತ್‌ನಲ್ಲೂ ಕನಿಷ್ಠ 50 ಮನೆಗಳನ್ನು ತಲುಪುವ ಕಾರ್ಯದಲ್ಲೂ ಯಶ ಕಂಡಿತ್ತು.

ಈ ಹಿಂದೆ ಹಮ್ಮಿಕೊಂಡಿದ್ದ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದ್ದರೂ, ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದ ಉದ್ದೇಶ ತಲುಪಿಸಲು ಸಚಿವರು, ಹಾಲಿ ಶಾಸಕರು ಅಷ್ಟೇನೂ ಆಸಕ್ತಿ ತೋರಿಸಿರಲಿಲ್ಲ. ಬೆಂಗಳೂರಿನಲ್ಲಿ ಅತಿಯಾದ ಮಳೆಯಿಂದ ರಸ್ತೆಗುಂಡಿ ಬಿದ್ದಿದ್ದರಿಂದ ಜನರ ಆಕ್ರೊಶ ಎದುರಿಸಲಾಗದೆ, ಕಾರ್ಯಕ್ರಮವನ್ನೇ ಮುಂದೂಡಿಸಿದ್ದರು.

ಜನವರಿಯಲ್ಲಿ ಎರಡನೇ ಹಂತ:
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ 100ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಮನೆಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಯಶಸ್ವಿಯಾಗಿದೆ. ರಾಜ್ಯದ ಪ್ರತಿ ಮನೆಗೂ ಪ್ರತಿ ಕ್ಷೇತ್ರದ ಶಾಸಕ ಹಾಗೂ ಶಾಸಕ ಅಭ್ಯರ್ಥಿ ತಲುಪಬೇಕೆಂಬ ಉದ್ದೇಶದಿಂದ ಜನವರಿಯಲ್ಲಿ ಮರಳಿ ಮನೆಮನೆಗೆ ಕಾಂಗ್ರೆಸ್‌  ಕಾರ್ಯಕ್ರಮ ಆರಂಭಿಸಲಿದ್ದೇವೆ ಎಂದು ಘೋಷಿಸಿದರು.

ರಾಜ್ಯ ಸರ್ಕಾರದ ಸಾಧನೆ, ಕಾಂಗ್ರೆಸ್‌ ಪಕ್ಷದ ಇತಿಹಾಸವನ್ನು ಕರಪತ್ರದ ಮೂಲಕ ರಾಜ್ಯದ ಪ್ರತಿ ಮನೆಗೂ ಹಾಲಿ ಶಾಸಕ, ಶಾಸಕ ಅಭ್ಯರ್ಥಿಗಳ ಮೂಲಕವೇ ತಲುಪಿಸಲಿದ್ದೇವೆ. ಜನ ಪ್ರತಿನಿಧಿಗಳು ಜನರೊಂದಿಗೆ ಗುರುತಿಸಿಕೊಂಡಾಗ ಮಾತ್ರ ಜಯ ಸಾಧಿಸಲು ಸಾಧ್ಯ. ಹೀಗಾಗಿ ಮನೆ ಮನೆಗೆ ಕಾರ್ಯಕ್ರಮವನ್ನು ಹೊಸ ರೂಪದಲ್ಲಿ ಮರಳಿ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ನಡೆಸಲಿದ್ದೇವೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ 100 ದೀಪಗಳನ್ನು ಹಚ್ಚಿ ಇಂದಿರಾ ದೀಪ ನಮನ ಜನ್ಮಶತಮಾನೋತ್ಸವ ಆಚರಿಸಲಾಗಿದೆ. ಮನೆಮನೆಗೆ ಕಾಂಗ್ರೆಸ್‌, ಇಂದಿರಾ ನಮನ ಕಾರ್ಯಕ್ರಮ ಪ್ರತಿ ಬೂತ್‌ನಲ್ಲೂ ನಡೆಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು.

Advertisement

ಸಿಎಂ ಗುಣಗಾನ:
ಇಂದಿರಾ ಗಾಂಧಿಯವರ ರೋಟಿ, ಕಪಡಾ ಔರ್‌ ಮಕಾನ್‌ ಆಲೋಚನೆಯಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ನಡೆಯುತ್ತಿದೆ. ಇಂದಿರಾ ಗಾಂಧಿಯವರ ಹಸಿವುಮುಕ್ತ ಭಾರತದ ಕನಸನ್ನು ಮುಖ್ಯಮಂತ್ರಿ ನನಸು ಮಾಡುತ್ತಿದ್ದಾರೆ. ಸದನದಲ್ಲಿ ವಿಪಕ್ಷಗಳಿಗೆ ಉತ್ತರಸುತ್ತಾ, ಸದನ ಹೊರಗೆ ಪಕ್ಷದ ಕಾರ್ಯಗಳನ್ನು ನಡೆಸುವಲ್ಲಿ ಸಿಎಂ ಬಿಜಿಯಾಗಿದ್ದಾರೆ. ಚುನಾವಣೆ ಹತ್ತಿರ ಬಂದಂತೆ ಸಿಎಂ ಇನ್ನಷ್ಟು ಚುರುಕಾಗಿದ್ದಾರೆ. ನನಗಿಂತ ಮೊದಲೇ ಕೆಪಿಸಿಸಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಲೇಟಾಗುತ್ತೆ ಎನ್ನೋ ಸಂಪ್ರದಾಯವನ್ನು ಮುರಿದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪರಮೇಶ್ವರ್‌ ಬಣ್ಣಿಸಿದರು.

ದೇಶದಲ್ಲಿ ಕಾಂಗ್ರೆಸ್‌ ಸಂಕಷ್ಟದಲ್ಲಿರುವುದು ನಿಜ. ಆದರೆ, ಯಾರೂ ಆತಂಕ ಪಡಬೇಕಾಗಿಲ್ಲ. ಸಂಘಟನೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಈಗ ರಾಹುಲ್‌ ಗಾಂಧಿ ಪಕ್ಷ ಸಂಘಟನೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಗುಜರಾತ್‌, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲೂ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ.
-ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next