ಶ್ರೀರಂಗಪಟ್ಟಣ: “ಆತನಿಗೆ ಪರಿಸರ ಬಗ್ಗೆ ಎಲ್ಲಿಲ್ಲದ ಕಾಳಜಿ. ಬಿಡುವಿಲ್ಲದ ಕೆಲಸ ನಡುವೆಯೂ ಪರಿಸರ ಉಳಿವಿನ ಕಾಯಕದಲ್ಲಿ ತೊಡಗುತ್ತಾರೆ. ಅಲ್ಲದೇ, ಇತರರನ್ನೂ ಪ್ರೇರೇಪಿಸುತ್ತಿದ್ದಾರೆ. ಈ ಮೂಲಕ, ಕರೀಘಟ್ಟ ಬೆಟ್ಟದ ಹಸಿರೀಕರಣಕ್ಕೆ ಸದ್ದಿಲ್ಲದೆ ಮುಂದಾಗಿದ್ದಾರೆ. ಇವರೇ, ಶ್ರೀರಂಗಪಟ್ಟಣ ಪುರಸಭಾ ವ್ಯಾಪ್ತಿಯ ನಿವಾಸಿ ರಮೇಶ್.
ವೃತ್ತಿಯಲ್ಲಿ ಗೂಡ್ಸ್ ಆಟೋ ಇಟ್ಟುಕೊಂಡು ಪಟ್ಟಣದಲ್ಲಿ ಮನೆ ಮನೆಗೆ ಬಿಸ್ಲರಿ ನೀರು ಹಾಕುತ್ತಾರೆ. ಇಂತಹ ಶ್ರಮದ ಕೆಲಸದ ನಡುವೆಯೂ ಪರಿಸರದ ಸಂರಕ್ಷಣೆಗಾಗಿ ಸಮಯ ಮೀಸಲಿಟ್ಟು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪರಿಸರದ ಸೇವೆ ಮಾಡುತ್ತಿದ್ದಾರೆ.
ಹಸಿರಿನಿಂದ ನಳನಳಿಸುತ್ತದೆ: ಕರಿಘಟ್ಟದ ಬೆಟ್ಟದ ತಪ್ಪಲಿನಲ್ಲಿ ಇದುವರೆಗೂ ಸಾವಿರಾರು ಗಿಡನೆಟ್ಟು ಫೋಷಣೆ ಮಾಡುತ್ತಿದ್ದು ಪ್ರತಿದಿನ ಆ ಗಿಡಗಳಿಗೆ ನೀರುಣಿಸುತ್ತಾರೆ. ಇವರ ಈ ಪರಿಸರದ ಕಳಕಳಿಯಿಂದ ಮಳೆಗಾಲದಲ್ಲಿ ಈ ಬೆಟ್ಟ ಹಸಿರಿನಿಂದ ನಳನಳಿಸುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರೂ ಈ ಹಸಿರಿನಿಂದ ಕಂಗೊಳಿಸುವ ಬೆಟ್ಟದ ಸೌಂದರ್ಯಕ್ಕೆ ಮಾರು ಹೋಗುತ್ತಾರೆ.
ಬೆಂಕಿ ನಂದಿಸುತ್ತಾರೆ: ಇನ್ನು ಬೇಸಿಗೆಯಲ್ಲಿ ಪ್ರತಿ ವರ್ಷ ಈ ಬೆಟ್ಟಕ್ಕೆ ಬೆಂಕಿ ಬಿದ್ದು ಇಲ್ಲಿನ ಪರಿಸರ ಹಾಳಾಗುತ್ತಿದೆ. ಇಷ್ಟಾದರೂ ಪರಿಸರ ಉಳಿಸುವ ಕಾಳಜಿ ಮಾತ್ರ ನಿಂತಿಲ್ಲ. ಬೆಟ್ಟಕ್ಕೆ ಬೆಂಕಿ ಬಿದ್ದ ವೇಳೆ ಆಗಮಿಸಿ ಬೆಂಕಿ ನಂದಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.ಬೆಟ್ಟದ ಬುಡ ದಲ್ಲಿರುವ ಕಾಲುವೆಯಿಂದ ಆಟೋ ಮೂಲಕ ವಾಟರ್ ಕ್ಯಾನ್‌ನಲ್ಲಿ ಗಿಡಗಳಿಗೆ ನೀರುಣಿಸುತ್ತಾರೆ. ಸುಮಾರು 10 ವರ್ಷದಿಂದಲೂ ಸಸಿ ನೆಟ್ಟು ಪರಿಸರ ಕಾಳಜಿ ಮೆರೆಯುತ್ತಿರುವ ಇವರ ಸೇವೆಗೆ ಕೆಲ ಯುವಕರ ತಂಡವೂ ಕೈ ಜೋಡಿಸಿದೆ.
ತುಂತುರು ನೀರಾವರಿ: ಬೇಸಿಗೆಯಲ್ಲಿ ಗಿಡಗಳಿಗೆ ನೀರಿನ ಅಭಾವ ಹಿನ್ನೆಲೆ ತಮ್ಮದೆ ತಂತ್ರಜ್ಞಾನದ ಮೂಲಕ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್, ಆಸ್ಪತ್ರೆಯಲ್ಲಿ ಬಳಸಿ ಬಿಸಾಡಿದ ಗ್ಲೂಕೋಸ್ ಪೈಪ್ ಬಳಸಿ ಇಲ್ಲಿನ ಗಿಡಗಳಿಗೆ ಹನಿ ನೀರಾವರಿ ಅಳವಡಿಸಿದ್ದಾರೆ. ಇದರಿಂದ ಒಮ್ಮೆ ಈ ಬಾಟಲ್‌ಗೆ ನೀರು ತುಂಬಿಸಿದರೆ ಒಂದು ದಿನ ಪೂರ್ತಿ ಆ ಗಿಡಕ್ಕೆ ನೀರು ಪೂರೈಕೆಯಾಗುತ್ತದೆ. ಪರಿಸರ ಪ್ರೇಮಿ ರಮೇಶ್ ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ಇನ್ನಾದರೂ ಇಂತಹ ಪರಿಸರ ಪ್ರೇಮಿಗಳನ್ನು ಸರ್ಕಾರ ಗುರ್ತಿಸಿ ಪ್ರೋತ್ಸಾಹಿಸಬೇಕಿದೆ.
ಪರಿಸರ ಕಾಳಜಿಗೆ ಮದುವೆಯಾಗದೇ ಉಳಿದ ಸಾಲುಮರದ ನಾಗರಾಜು :
ಮಂಡ್ಯ: ಕಳೆದ 25 ವರ್ಷಗಳಿಂದ ಪರಿಸರ ಸೇವೆಯಲ್ಲಿ ತೊಡಗಿರುವ ಹಾಗೂ ಸಾಲು ಮರದ ನಾಗರಾಜು ಎಂದೇ ಹೆಸರು ಪಡೆದಿರುವ ಮಳವಳ್ಳಿ ಪಟ್ಟಣದ ಪೇಟೆಬೀದಿಯ ನಾಗರಾಜು, ಇಂದಿಗೂ ಯಾವುದೇ ಪ್ರಚಾರ ಸದ್ದಿಲ್ಲದೆ ಗಿಡ ಮರಗಳ ಪೋಷಣೆ ಮಾಡುತ್ತಿದ್ದಾರೆ.
8ನೇ ತರಗತಿಯಿಂದಲೂ ಮರಗಿಡ ಬೆಳೆಸುವ ಹವ್ಯಾಸ ಮಾಡಿಕೊಂಡ ಅವರು, ಪರಿಸರಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಇದುವರೆಗೂ ಸುಮಾರು 15 ಸಾವಿರಕ್ಕೂ ಹೆಚ್ಚು ಮರಗಿಡ ನೆಟ್ಟು ಬೆಳೆಸಿದ್ದಾರೆ.
ಪರಿಸರ ಸೇವೆ: ಶಾಲಾ-ಕಾಲೇಜು ಆವರಣ, ಕ್ರೀಡಾಂಗಣ, ರಸ್ತೆ ಬದಿ, ಸ್ಮಶಾನಗಳಲ್ಲಿ ಗಿಡ ನೆಡುವ ಅವರು ಯಾರಿಂದಲೂ ಯಾವುದೇ ಅಪೇಕ್ಷೆ ಪಡದೆ ತಮ್ಮ ಸ್ವಂತ ಖರ್ಚಿನಲ್ಲಿ ಗಿಡಗಳಿಗೆ ಇರುವ ಒಂದು ಸೈಕಲ್‌ನಲ್ಲಿ 2 ಬಿಂದಿಗೆ ಕಟ್ಟಿಕೊಂಡು ನೀರು ಹಾಯಿಸುತ್ತಾರೆ. ಇವರ ಪರಿಸರ ಸೇವೆಗೆ ಸಂಸಾರ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಮದುವೆಯೂ ಆಗಿಲ್ಲ. ಇರುವ ತಾಯಿಯನ್ನು ಪೋಷಣೆ ಮಾಡುತ್ತಾ, ಪರಿಸರ ಸೇವೆಯಲ್ಲಿ ತೊಡಗಿದ್ದಾರೆ.
ಇರುವ-ನೆಟ್ಟಿರುವ ಮರಗಿಡ ಪಟ್ಟಣದ ರಸ್ತೆ ಬದಿ, ಶಾಲಾ-ಕಾಲೇಜು ಆವರಣಗಳಲ್ಲಿ ದೊಡ್ಡ ಮರಗಳಾಗಿ ಬೆಳೆದು ನಿಂತಿವೆ. ಅಲ್ಲದೆ, ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ ಹಲವು ಮರಗಳನ್ನು ಕತ್ತರಿಸಲಾಗಿದೆ. ಇದರಿಂದ ದುಖಃವಾದರೂ ಕಡಿದ ಅಷ್ಟೇ ಮರಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ.
ಉಚಿತವಾಗಿ ವಿತರಣೆ: ತಮ್ಮದೇ ಆದ ನರ್ಸರಿ ಯಲ್ಲಿ ಗಿಡಗಳನ್ನು ಪೋಷಣೆ ಮಾಡುವ ಮೂಲಕ ಉಚಿತವಾಗಿ ಗಿಡ ವಿತರಿಸುತ್ತಿದ್ದಾರೆ. ಹುಟ್ಟುಹಬ್ಬ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಗಿಡ ಹಂಚಲು ಉಚಿತವಾಗಿ ಆಯೋಜಕರಿಗೆ ನೀಡುತ್ತಿದ್ದಾರೆ. ಯಾವುದೇ ಪ್ರಚಾರ, ಪ್ರಶಸ್ತಿಗಳ ಆಪೇಕ್ಷೆ ಪಡೆದ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಇವರ ಸೇವೆ ಗುರುತಿಸಿರುವ ಕೆಲವು ಸಂಘ- ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಮರಗಿಡ ಬೆಳೆಸುವ ಮೂಲಕ ಪರಿಸರಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಲು ಮುಂದಾಗಬೇಕು ಎಂದು ಸಾಲುಮರದ ನಾಗರಾಜು ಮನವಿ ಮಾಡಿದ್ದಾರೆ.
-ಗಂಜಾಂ ಮಂಜು