Advertisement
ಲೋಕಸಭೆ ಚುನಾವಣೆ ಆರಂಭದಿಂದಲೂ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾಗಿರುವ ಮಂಡ್ಯದ ಏಳು ಜನ ಕಾಂಗ್ರೆಸ್ ನಾಯಕರು ಮೈತ್ರಿ ಪಕ್ಷದ ಅಭ್ಯರ್ಥಿ ವಿಷಯದಲ್ಲಿ ತಟಸ್ಥ ಧೋರಣೆ ಅನುಸರಿಸುತ್ತಿದ್ದಾರೆ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮನವೊಲಿಕೆ ನಂತರವೂ ಮಂಡ್ಯ ಕಾಂಗ್ರೆಸ್ ಮುಖಂಡರು ಮಣಿದಿಲ್ಲ.
Related Articles
Advertisement
ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎನ್ನುವುದಕ್ಕೆ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಅಲ್ಲದೇ ಮೈತ್ರಿ ಅಭ್ಯರ್ಥಿ ನಿಖೀಲ್ ವಿರುದ್ಧವೂ ಎಲ್ಲಿಯೂ ಬಹಿರಂಗವಾಗಿ ಹೇಳಿಕೆಗಳನ್ನು ನೀಡದಿರುವುದರಿಂದ ಶಿಸ್ತ ಕ್ರಮಕ್ಕೆ ಮುಂದಾದರೆ, ಪರ್ಯಾಯ ರಾಜಕೀಯ ದಾರಿ ಹುಡುಕಿಕೊಳ್ಳಬಹುದು. ಬಿಜೆಪಿಯತ್ತಲೂ ಹೋಗಬಹುದು ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ.
ಮೈತ್ರಿ ಪಕ್ಷದ ಆಕ್ಷೇಪ ಹಾಗೂ ಪಕ್ಷದಲ್ಲಿ ಶಿಸ್ತು ಪಾಲನೆ ಮಾಡುವ ಸಂದೇಶ ರವಾನಿಸಲು ಬಂಡಾಯ ಹಾಗೂ ತಟಸ್ಥ ಧೋರಣೆ ಅನುಸರಿಸುತ್ತಿರುವ ನಾಯಕರಿಗೆ ಕಾರಣ ಕೇಳಿ ನೋಟಿಸ್ ನೀಡಿ ಪ್ರಹಸನಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಚುನಾವಣೆಯ ಆರಂಭದಲ್ಲಿಯೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮಗೆ ಯಾವ ಕಾಂಗ್ರೆಸ್ ನಾಯಕರ ಬೆಂಬಲವೂ ಬೇಕಿಲ್ಲ. ನಾನು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ಬೆನ್ನಿಗೆ ಚೂರಿ ಹಾಕುವ ನಾಯಕರ ಅಗತ್ಯವಿಲ್ಲ ಎಂದು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಅದೇ ಹೇಳಿಕೆಯನ್ನೇ ಅತೃಪ್ತ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಮುಖಂಡರ ಮುಂದಿಟ್ಟು, ಅವರು ಬೇಡವೆಂದರೂ, ಅವರ ಪರವಾಗಿ ಪ್ರಚಾರ ಮಾಡಿದರೆ, ನಮ್ಮನ್ನು ಏನೆಂದುಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಪಕ್ಷದ ಅಸ್ಥಿತ್ವ ಉಳಿಸಲು, ನಮ್ಮ ಸ್ವಾಭಿಮಾನ ಕಾಪಾಡಿಕೊಳ್ಳಲು ತಟಸ್ಥ ನಿಲುವು ತಾಳಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ಆದೇಶ ಉಲ್ಲಂಘಿಸಿ ಬಹಿರಂಗವಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಪ್ರಚಾರ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಏಳು ಜನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ವಜಾ ಮಾಡಿರುವುದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ಎಲ್ಲರನ್ನೂ ಪಕ್ಷದಿಂದ ತೆಗೆದು ಹಾಕಿದರೆ ಮುಂದೆ ಪಕ್ಷದ ಧ್ವಜ ಹಿಡಿಯಲು ಮುಖಂಡರು ಸಿಗುವುದಿಲ್ಲ ಎಂಬ ಆತಂಕ ಇದಕ್ಕೆ ಕಾರಣ ಎನ್ನಲಾಗಿದೆ.
ಈ ಮಧ್ಯೆ, ಮಂಡ್ಯದಲ್ಲಿ ರಾಜಕೀಯ ಅಸ್ಥಿತ್ವಕ್ಕಾಗಿ ಹರಸಾಹಸ ಪಡುತ್ತಿರುವ ಬಿಜೆಪಿ, ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ಬಂಡಾಯದಿಂದ ಶಕ್ತಿ ವೃದ್ಧಿಸಿಕೊಳ್ಳಲು ಕಸರತ್ತು ನಡೆಸಿದೆ. ಈಗ ಒಂದು ವೇಳೆ ಬಂಡಾಯ ನಾಯಕರ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಂಡರೆ, ಅವರಿಗೆ ಪರ್ಯಾಯವಾಗಿ ಬಿಜೆಪಿಗೆ ಸ್ವಾಗತಿಸಲು ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.
* ಶಂಕರ ಪಾಗೋಜಿ