ಮಂಡ್ಯ: ಜನಪರ ಅಧಿಕಾರಿ ಎಂದೇ ಹೆಸರು ಪಡೆದಿರುವ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ| ಎಚ್.ಎಲ್. ನಾಗರಾಜು ಅವರು ಸನ್ಯಾಸತ್ವ ಸ್ವೀಕರಿಸಲಿದ್ದಾರೆಂಬ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದ್ದು, ಎಲ್ಲ ಕಡೆ ಹರಿದಾಡುತ್ತಿದೆ. ಹಲವು ವರ್ಷಗಳಿಂದಲೂ ಅವರು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರ ನಾಥ ಸ್ವಾಮೀಜಿ ಹಾಗೂ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದ ಮೀಜಿಯವರೊಂದಿಗೂ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.
2011ರಲ್ಲಿ ಪಾಂಡವಪುರ ತಹಶೀಲ್ದಾರ್ ಆಗಿದ್ದ ಸಂದರ್ಭ ಬಾಲಗಂಗಾಧರನಾಥ ಸ್ವಾಮೀಜಿ ಸಮ್ಮುಖ ಸನ್ಯಾಸತ್ವ ದಿಧೀಕ್ಷೆ ಪಡೆದಿದ್ದರು. ಆಗ ನಿಶ್ಚಲಾನಂದನಾಥ ಸ್ವಾಮೀಜಿಯಾಗಿ ಬದಲಾಗಿದ್ದರು. ಆದರೆ ಅವರ ಹಿತೈಷಿಗಳು, ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಮತ್ತೆ ಅಧಿಕಾರ ವಹಿಸಿಕೊಂಡಿದ್ದರು.
ದೀಕ್ಷೆ ಪಡೆಯುವ ಸಂದರ್ಭದಲ್ಲಿ ಸುಮಾರು 5 ದಿನಗಳ ಕಾಲ ಪಟ್ಟಾಭಿಷೇಕದ ಕಾರ್ಯಕ್ರಮಗಳು ನಡೆಯಲಿವೆ ಎಂಬ ಮಾತುಗಳು ಹರಿದಾಡುತ್ತಿವೆ. ಈ ಬಗ್ಗೆ ಮಾಹಿತಿ ಪಡೆಯಲು ಡಾ| ಎಚ್.ಎಲ್.ನಾಗರಾಜು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ಕರೆ ಸ್ವೀಕರಿಸಲಿಲ್ಲ.
ಡಾ| ಎಚ್.ಎಲ್. ನಾಗರಾಜು ಸನ್ಯಾಸತ್ವ ದೀಕ್ಷೆ ಪಡೆಯಲಿದ್ದಾರೆ ಎಂಬ ಮಾಹಿತಿ ನನಗೂ ಬಂದಿದೆ. ಅದು ವೈಯಕ್ತಿಕ ವಿಚಾರ. ಆ ಹಿನ್ನೆಲೆಯಲ್ಲಿ ರಜೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಸರಕಾರಿ ಕೆಲಸದಿಂದ ಸ್ವಯಂ ನಿವೃತ್ತಿ ಪಡೆಯಬಹುದು.
– ಚಲುವರಾಯಸ್ವಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ