Advertisement

ಸ್ವಚ್ಛತಾ ವ್ಯವಸ್ಥೆಗೆ ಮಂದಾರ್ತಿ ಜಾತ್ರೆ ಮಾದರಿ

06:10 AM Mar 10, 2018 | |

ಬ್ರಹ್ಮಾವರ: ಲಕ್ಷಾಂತರ ಭಕ್ತರು ಪಾಲ್ಗೊಂಡ ಮಂದಾರ್ತಿ ಶ್ರೀ ದುರ್ಗಾಪರ ಮೇಶ್ವರಿ ಜಾತ್ರೋತ್ಸವ ಇದೀಗ ಸ್ವಚ್ಛತಾ ವ್ಯವಸ್ಥೆಯಲ್ಲಿ ಮಾದರಿಯಾಗಿದೆ. ತ್ಯಾಜ್ಯ ವಿಲೇವಾರಿಗೆ ಇಲ್ಲಿ ಅನುಸರಿಸಲಾದ ವಿಧಾನ ಇತರ ದೇಗುಲಗಳಿಗೂ ಪ್ರೇರಣೆಯಾಗಿದೆ.  

Advertisement

ಜಾತ್ರೆ ವೇಳೆ ಉತ್ಪತ್ತಿಯಾಗುವ ಪ್ಲಾಸ್ಟಿಕ್‌, ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ ಹೆಗ್ಗುಂಜೆ ಪಂಚಾಯತ್‌ಗೆ ತಲೆನೋವು ಆಗಿತ್ತು. ಆದಾಯಕ್ಕಿಂತ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಹಣ ವ್ಯಯಿಸಬೇಕಿತ್ತು. ಈಗ ಇದಕ್ಕೆ ಉಪಾಯ ಮಾಡಲಾಗಿದ್ದು ಯಶಸ್ವಿಯಾಗಿದೆ.


ಮಾಡಿದ್ದೇನು…?
ತ್ಯಾಜ್ಯ ನಿರ್ವಹಣೆಗೆ ಪಂಚಾಯತ್‌ ವತಿಯಿಂದ ಸ್ವಚ್ಛ ಭಾರತ್‌ ಮಿಷನ್‌ನ ಘನ ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ(ಎಸ್‌.ಎಲ್‌.ಆರ್‌.ಎಂ.) ಕಾರ್ಯಕರ್ತರನ್ನು ವಿನಂತಿಸಲಾಯಿತು. ಉಡುಪಿ ಜಿಲ್ಲಾಡಳಿತವೂ ಪೂರಕವಾಗಿ ಸ್ಪಂದಿಸಿ ಜಿಲ್ಲಾ ಪಂಚಾಯತ್‌ ಎಸ್‌.ಎಲ್‌.ಆರ್‌.ಎಂ. ತಂಡದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲು ಕ್ರಿಯಾಯೋಜನೆ ರೂಪಿಸಿತು. ಹಸಿ ಹಾಗೂ ಒಣ ಕಸ ಪ್ರತ್ಯೇಕವಾಗಿ ಇಡುವಂತೆ ವರ್ತಕರಿಗೆ ಮನವೊಲಿಸಲಾಯಿತು. ಎಸ್‌.ಬಿ.ಎಂ. ತಂಡದ ಸಮನ್ವಯವೂ ಇದಕ್ಕಿತ್ತು. 

ವಿಂಗಡಣೆ
ಕಾರ್ಯಕರ್ತರು ಪ್ರತಿ ಅಂಗಡಿಗೆ ತೆರಳಿ ತ್ಯಾಜ್ಯ ಸಂಗ್ರಹ ಮಾಡಿ ಘಟಕಕ್ಕೆ ತಂದು ವೈಜ್ಞಾನಿಕವಾಗಿ ಅದನ್ನು ಬೇರ್ಪಡಿಸಿದರು. ಹೂವಿನ ಹಾರದ ರಾಶಿಯನ್ನು ರಂಗೋಲಿ ಪುಡಿಗೆ ಬಳಸಿದರೆ, ಕಿತ್ತಳೆ, ಲಿಂಬೆ, ಮೂಸಂಬಿ ಸಿಪ್ಪೆಯನ್ನು ಪಾತ್ರೆ ತೊಳೆಯುವ ಪೌಡರ್‌ ಹಾಗೂ ಸೋಪ್‌ ತಯಾರಿಕೆಗೆ ಕಳುಹಿಸಿಕೊಡಲಾಯಿತು. ಪ್ಲಾಸ್ಟಿಕ್‌, ಗಾಜು, ರಟ್ಟು, ಬಾಟಲಿ, ಮೊದಲಾದ ವಸ್ತುಗಳನ್ನು ಮುಂದಿನ ಹಂತ ವರ್ಗೀಕರಣಕ್ಕೆ ಮತ್ತು ಮಾರಾಟಕ್ಕೆ ಕಳುಹಿಸಲಾಯಿತು. ಈ ಮೂಲಕ ಸ್ವಚ್ಛ ಜಾತ್ರೆ ಜತೆಗೆ ಆದಾಯ ಗಳಿಸುವ ಉದ್ಯೋಗ ಸೃಜಿಸುವ ಕಾರ್ಯ ಮಾಡಲಾಗಿದೆ.  

ಇಡೀ ಮಂದಾರ್ತಿ ಸ್ವಚ್ಛ
ಮೂರು ದಿನ ಜಾತ್ರೆ ನಡೆದು, ಮರುದಿನ ಮಂದಾರ್ತಿಯಲ್ಲಿ ಜಾತ್ರೆ ನಡೆದಿದೆ ಎಂಬ ಕುರುಹೂ ಇಲ್ಲದಂತೆ ಸ್ವಚ್ಛವಾಗಿತ್ತು. ಸ್ಥಳೀಯರಲ್ಲದೆ, ಹೊರನಾಡಿನಿಂದ ಬಂದ ಜನರೂ ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತ್ಯಾಜ್ಯ ನಿರ್ವಹಣೆಗೆ ಆಡಳಿತ ಸುಮಾರು 1 ಲಕ್ಷ ರೂ. ಖರ್ಚು ಮಾಡಿದ್ದರೆ, ಅಷ್ಟೇ ಮೊತ್ತವನ್ನು ಘನ ತ್ಯಾಜ್ಯದ ಆದಾಯದಲ್ಲಿ ಸಂಪಾದಿಸಿದೆ. 

15 ಕ್ವಿಂಟಾಲ್‌ ತ್ಯಾಜ್ಯ ಸಂಗ್ರಹ
ಪ್ರತಿನಿತ್ಯ ಸರಾಸರಿ ಮೂರು ಕ್ವಿಂಟಾಲಿನಂತೆ 5 ದಿನಗಳಲ್ಲಿ   ಹದಿನೈದು ಕ್ವಿಂಟಾಲ್‌ಗ‌ೂ ಜಾಸ್ತಿ  ತ್ಯಾಜ್ಯ ಸಂಗ್ರಹವಾಗುತ್ತಿದ್ದು ; ಅನಂತರ ಮೌಲ್ಯವರ್ಧನೆ ಮಾಡುತ್ತಾರೆ.

Advertisement

ಎಲ್ಲ ಜಾತ್ರೆ ಉತ್ಸವಗಳಿಗೆ ಮಾದರಿ
ಮಂದಾರ್ತಿ ಜಾತ್ರೆಯ ಸಂದರ್ಭ ದಲ್ಲಿ ಸ್ವಚ್ಛತೆಯ ನಿರ್ವಹಣೆಗೆ ಕೈಗೊಳ್ಳಲಾದ ಕ್ರಮಗಳು ಮಾದರಿ. ಎಸ್‌.ಎಲ್‌.ಆರ್‌.ಎಂ. ಕಾರ್ಯಕರ್ತರು ಹಾಗೂ ಸ್ಥಳೀಯಾಡಳಿತ ಶ್ರಮ ಅಭಿನಂದನೀಯ. ಜಿಲ್ಲೆಯ ಎಲ್ಲಾ ಜಾತ್ರೆ ಉತ್ಸವಗಳಲ್ಲಿ ಸ್ವಚ್ಛತೆಯ ನಿರ್ವಹಣೆಗೆ ಈ ಮಾದರಿ ಅನುಸರಿಸಲು ತಿಳಿಸಲಾಗಿದೆ.

– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಜಿಲ್ಲಾಧಿಕಾರಿ, ಉಡುಪಿ

ಯಶಸ್ವಿ ಪ್ರಯೋಗ
ಜಾತ್ರೆಯ ವೇಳೆ ಎಸ್‌ಎಲ್‌ಆರ್‌ಎಂ ಸಹ ಯೋಗದೊಂದಿಗೆ ಕೈಗೊಂಡ ಈ ಪ್ರಥಮ ಪ್ರಯೋಗ ಯಶಸ್ವಿಯಾಗಿದೆ. ಭಕ್ತಾದಿಗಳು ಹಾಗೂ ವರ್ತಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿದೆ.
 
– ಗಣೇಶ್‌ ಶೆಟ್ಟಿ ಅಧ್ಯಕ್ಷರು, ಹೆಗ್ಗುಂಜೆ ಗ್ರಾ.ಪಂ.

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next