ವಿಟ್ಲ: ರಂಗಭೂಮಿಯಲ್ಲಿ ಅಧ್ಯಯನ, ಆವಿಷ್ಕಾರ ನಿರಂತರ ಪ್ರಕ್ರಿಯೆ. ಕ್ರಿಯಾಶೀಲತೆ, ಹೊಸತನ ಮತ್ತು ಗುಣವೈವಿಧ್ಯಗಳಿಂದ ಜನಪ್ರಿಯತೆ ಗಳಿಸಲಾಗುತ್ತದೆ ಎಂದು ಬೆಂಗಳೂರು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು ಹೇಳಿದರು.
ಅವರು ವಿಟ್ಲ ವಿಟ್ಠಲ ಪ.ಪೂ. ಕಾಲೇಜಿನಲ್ಲಿ ಮಂಚಿ-ಕುಕ್ಕಾಜೆ ಬಿ.ವಿ. ಕಾರಂತ ರಂಗಭೂಮಿಕೆ ಟ್ರಸ್ಟ್ ವತಿಯಿಂದ ರಂಗಭೂಮಿಕೆ ಟ್ರಸ್ಟ್‌ನ ದಶಮಾನದ ಸಂಭ್ರಮದ ಅಂಗವಾಗಿ ಬಿ.ವಿ. ಕಾರಂತರ ನೆನಪಿನ ಅಂತರ ಕಾಲೇಜು ನಾಟಕ ಸ್ಪರ್ಧೆ ‘ರಂಗಭೂಮಿಕಾ-2017’ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಂಸ್ಕೃತಿಕ ವಾತಾವರಣವಿರುವ ಮನೆಯಲ್ಲಿ ಹುಟ್ಟುವವರು ಅಪರಾಧಿಗಳಾಗುವುದಿಲ್ಲ. ಮಕ್ಕಳಿಗೆ ಯೋಚನೆ ಮಾಡುವುದಕ್ಕೆ ಅವರನ್ನು ಪ್ರೇರೇಪಿಸಬೇಕು. ಆಗ ಮಕ್ಕಳು ಯೋಗ್ಯತೆ ಗಳಿಸುತ್ತಾರೆ ಎಂದವರು ತಿಳಿಸಿದರು.
ಬಿ.ವಿ. ಕಾರಂತರ ಬಾಲ್ಯದ ಒಡನಾಡಿ ಡಾ| ಕಜೆ ಮಹಾಬಲ ಭಟ್ ಮಾತನಾಡಿ ತಾನು ಮತ್ತು ಕಾರಂತರು ಶಾಲಾ ದಿನದಿಂದ ಜತೆಯಾಗಿ ರಂಗಕ್ಕೇರಿದವರು. ಕಾರಂತರು ಹಿಂದಿ, ಸಂಸ್ಕೃತ, ಕನ್ನಡ, ಆಂಗ್ಲ ಭಾಷೆಯಲ್ಲಿ ನಾಟಕ ಮಾಡಿದವರು. ಅವರ ಹೆಸರು ಶಾಶ್ವತವಾಗಿ ಉಳಿಯಬೇಕು. ಇದಕ್ಕಾಗಿ ಟ್ರಸ್ಟ್ ಸಾಂಸ್ಕೃತಿಕ ಕೇಂದ್ರ ನಿರ್ಮಾಣ ಮಾಡಲು ಮುಂದಾಗಿದೆ ಎಂದು ತಿಳಿಸಿದರು.
ತೀರ್ಪುಗಾರ, ರಂಗವಿಮರ್ಶಕ ಪ್ರಭಾಕರ ತುಮರಿ ಮಾತನಾಡಿ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ ಎರಡು ತಂಡಗಳು ನಿರೀಕ್ಷಿತ ಗುಣಮಟ್ಟದಲ್ಲಿ ಇರಲಿಲ್ಲ. ಕಾಲೇಜಿನಿಂದಲೇ ತಂಡಗಳನ್ನು ಪರಿಶೀಲಿಸಿ, ಕಳುಹಿಸುವಂತಾಗಬೇಕು ಎಂದರು.
ವಿಟ್ಲ ವಿಟ್ಠಲ ವಿದ್ಯಾ ಸಂಘದ ಸಂಚಾಲಕ ಎಲ್.ಎನ್. ಕೂಡೂರು, ರಂಗಭೂಮಿಕಾ ಸಂಚಾಲಕ ಎಂ. ಅನಂತಕೃಷ್ಣ ಹೆಬ್ಟಾರ್ ವಿಟ್ಲ, ಬಿ.ವಿ.ಕಾರಂತ ರಂಗಭೂಮಿಕೆ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್, ವಿಟ್ಲ ರೋಟರಿ ಅಧ್ಯಕ್ಷ ಎಂ. ಸಂಜೀವ ಪೂಜಾರಿ, ವಿಟ್ಲ ಜೇಸಿಐ ಅಧ್ಯಕ್ಷ ಸೋಮಶೇಖರ್, ಶ್ರವಣ್ ಜುವೆಲ್ಲರ್ ಮಾಲಕ ಸದಾಶಿವ ಆಚಾರ್ಯ ಕೆ., ಹಸನ್ ವಿಟ್ಲ, ವಿಟ್ಠಲ ಪ.ಪೂ. ಕಾಲೇಜಿನ ಪ್ರಾಂಶುಪಾಲ ಆದರ್ಶ ಎ.ಎಸ್. ಚೊಕ್ಕಾಡಿ, ಉಪಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ ಮತ್ತಿತರರು ಉಪಸ್ಥಿತರಿದ್ದರು. ಉದ್ಯಮಿ ಸುಬ್ರಾಯ ಪೈ ಸ್ವಾಗತಿಸಿದರು. ಅರವಿಂದ ಕುಡ್ಲ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು ಪದುವಾ ಕಾಲೇಜು ಪ್ರಥಮ
ಮಂಗಳೂರು ಪದುವಾ ಕಾಲೇಜು ವಿದ್ಯಾರ್ಥಿಗಳ ‘ಮದರ್ ಕರೇಜ್’ ನಾಟಕ ಪ್ರಥಮ ಬಹುಮಾನ ಗಳಿಸಿತು. ಉಜಿರೆ
ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳ ‘ಮಾರಿಕಾಡು’ ದ್ವಿತೀಯ ಸ್ಥಾನ, ಮಂಗಳೂರು ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳ ‘ಅಗ್ನಿವರ್ಣ’ ನಾಟಕ ತೃತೀಯ ಸ್ಥಾನ ಗಳಿಸಿತು.
ನಾಟಕದ ವಸ್ತು, ಸಂದೇಶ ಸ್ಪಷ್ಟವಾಗಿರಲಿ
ಹೊಸ ಅರ್ಥಗಳನ್ನು ಪ್ರೇಕ್ಷಕರು ಗ್ರಹಿಸುವಂತೆ ನಾಟಕ ಮಾಡಬೇಕು. ಇದರ ವಸ್ತು ಹಾಗೂ ಸಂದೇಶ ಸ್ಪಷ್ಟ ದಿಕ್ಕುಗಳನ್ನು ನೀಡುವ ಆವಶ್ಯಕತೆಯಿದೆ. ರಂಗವೇದಿಕೆ ಶೈಕ್ಷಣಿಕ ಸಾಧನೆಗೆ ಕಾರಣವಾಗಬೇಕು.
–
ಪ್ರಭಾಕರ ತುಮರಿ,
ರಂಗ ವಿಮರ್ಶಕ