Advertisement

ಸಸಿ ನೆಟ್ಟ ಬಳಿಕ ನಿರ್ವಹಣೆಗೆ ಸಹಕಾರ ಅಗತ್ಯ

03:22 PM Aug 15, 2021 | Team Udayavani |

ಬೆಂಗಳೂರು: ಸಸಿ ನೆಡುವುದು ನಮ್ಮ ಸಂಸ್ಕೃತಿ. ಸಸಿ ನೆಟ್ಟ ಬಳಿಕ ಅದರ ನಿರ್ವಹಣೆಗೆ ನಗರದ ಜನರ ಸಹಕಾರವೂ ಮುಖ್ಯವಗಿದೆ. ಸರ್ಕಾರವೊಂದೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹೇಳಿದರು.

Advertisement

ಸ್ವತಂತ್ರ್ಯ ಉದ್ಯಾನದಲ್ಲಿ  ಹಮ್ಮಿಕೊಂಡಿದ್ದ ಸಸಿ ನೆಡುವ ಅಭಿಯಾನ ಹಾಗೂ ಇಂಗು ಗುಂಡಿ ನಿರ್ಮಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪಾಲಿಕೆಯ ಅರಣ್ಯ ವಿಭಾಗ, ತೋಟಗಾರಿಕಾ ಹಾಗೂ ಕೆರೆಗಳ ವಿಭಾಗ ಹಾಗೂ ಯುನೈಟೆಡ್‌ ವೇ ಆಫ್ ಬೆಂಗಳೂರು ಸಹಯೋಗದೊಂದಿಗೆ ಪಾಲಿಕೆಯ ವ್ಯಾಪ್ತಿಯ ಉದ್ಯಾನವನಗಳು, ಕೆರೆಗಳ ಸುತ್ತಮುತ್ತಲಿನ ಖಾಲಿ ಸ್ಥಳದಲ್ಲಿ 75 ಸಾವಿರ ಸಸಿನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಜತೆಗೆ, ನಗರದ ಉದ್ಯಾನವನಗಳಲ್ಲಿ ಮಳೆ ನೀರು ವ್ಯರ್ಥವಾಗದೆ ಅಲ್ಲೇ ಸಂಗ್ರಹಿಸುವ ನಿಟ್ಟಿನಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವ
ಕಾರ್ಯಕ್ರಮ ರೂಪಿಸಲಾಗಿದೆ. ಆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಅಧಿಕಾರಿಗಳು ನಗರ ಪ್ರದಕ್ಷಿಣೆ ನಡೆಸಿ ಸಮಸ್ಯೆ ಆಲಿಸಲು ಸೂಚನೆ

Advertisement

ಐದು ಸಾವಿರ ಇಂಗು ಗುಂಡಿ ನಿರ್ಮಾಣ: ಪಾಲಿಕೆ ವ್ಯಾಪ್ತಿಯಲ್ಲಿ 1,300 ಉದ್ಯಾನವನಗಳಿವೆ. ಈ ಎಲ್ಲ ಉದ್ಯಾನವನಗಳಲ್ಲಿ ಬೀಳುವ ಮಳೆ ನೀರನ್ನು ಅಲ್ಲೇ ಇಂಗುವ ಹಾಗೆ ಮಾಡುವ ನಿಟ್ಟಿನಲ್ಲಿ ಯುನೈಟೆಡ್‌ ವೇ ಆಫ್ ಬೆಂಗಳೂರು ಸಹಯೋದಲ್ಲಿ ವೈಜ್ಞಾನಿಕವಾಗಿ ಐದು ಸಾವಿರ ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತಿದೆ.

ಸ್ವತಂತ್ರ್ಯ ಉದ್ಯಾನದಲ್ಲಿ ಈಗಾಗಲೇ 24 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಆರು ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತದೆ. ಎಲ್ಲ ಇಂಗುಗುಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದ್ದು, ಪ್ರತಿ ಇಂಗು ಗುಂಡಿಯೂ 12 ಅಡಿ ಆಳ ಹಾಗು 4 ಅಡಿ ಸುತ್ತಳತೆ ಹೊಂದಿದೆ ಎಂದರು.

ಎರಡು ಕೋಟಿ ಲೀಟರ್‌ ನೀರು ಸಂಗ್ರಹ:
ಇಂಗು ಗುಂಡಿಯಲ್ಲಿ ಸುಮಾರು 4000 ಲೀಟರ್‌ ಮಳೆನೀರನ್ನು ಸಂಗ್ರಹಿಸಿ ಇಂಗಿಸಬಹುದಾಗಿದೆ. ಒಟ್ಟಾರೆ 5 ಸಾವಿರ ಗುಂಡಿಗಳಲ್ಲಿ ಎರಡು ಕೋಟಿ ಲೀಟರ್‌ನಷ್ಟು ನೀರನ್ನು ಸಂಗ್ರಹಿಸಿ ಇಂಗಿಸಬಹುದಾಗಿದೆ. ಮಳೆ ನೀರಿನಲ್ಲಿ ಮಣ್ಣು ಇಂಗು ಗುಂಡಿಗೆ ಹೋಗದಂತೆ ಸುತ್ತಲು ತಳಭಾಗದವರೆಗೆ ಜೆಲ್ಲಿ ಕಲ್ಲುಗಳನ್ನು ಅಳವಡಿಸಲಾಗಿರುತ್ತದೆ ಹಾಗೂ ಮೇಲ್ಭಾಗವನ್ನು ಮುಚ್ಚಲಾಗಿರುತ್ತದೆ. ಒಂದು ಇಂಗು ಗುಂಡಿಗೆ ಸುಮಾರು 32 ಸಾವಿರ ರೂ. ವೆಚ್ಚವಾಗಲಿದ್ದು, ಅದನ್ನು ಯುನೈಟೆಡ್‌ ವೇ ಆಫ್ ಬೆಂಗಳೂರು ವತಿಯಿಂದಲೆ ಭರಿಸಲಾಗುತ್ತದೆ. ಪಾಲಿಕೆಯಿಂದ ಇಂಗು ಗುಂಡಿ ನಿರ್ಮಿಸಲು ಸ್ಥಳಾವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ಶೇ.90ರಷ್ಟು ಬದುಕುವ ಗಿಡ: ಪಾಲಿಕೆ ವಿಶೇಷ ಆಯುಕ್ತ(ಅರಣ್ಯ ಇಲಾಖೆ) ರೆಡ್ಡಿಶಂಕರ ಬಾಬು ಮಾತನಾಡಿ, ಅರಣ್ಯ ವಿಭಾಗದ ನರ್ಸರಿಯಲ್ಲಿ ಶೇ.90ರಷ್ಟು ಬದುಕುವ ಗಿಡಗಳನ್ನೇ ಬೆಳೆಸಲಾಗಿದೆ. ಜನ ಕಿತ್ತು ಹಾಕಿದರೆ ಮಾತ್ರ ಬದುಕುಳಿಯುವುದಿಲ್ಲ. ಪಾಲಿಕೆ ಜತೆಗೆ ಎನ್‌ಜಿಒಗಳು, ಸ್ವಯಂ ಸೇವಕರು ಸೇರಿ ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಬಾರಿ ಪಾರ್ಕ್‌, ಕೆರೆಗಳು, ಶಾಲೆಗಳ ಆವರಣದೊಳಗೆ 75
ಸಾವಿರ ಗಿಡ ನೆಡುವ ಅಭಿಯಾನಕ್ಕೆ ಮುಂದಾಗಿದ್ದೇವೆ. ದಾನಿಗಳು ಮುಂದೆ ಬಂದರೆ ಮಾತ್ರ ಟ್ರೀ ಗಾರ್ಡ್‌ ಹಾಕಲಾಗುವುದು ಎಂದು ತಿಳಿಸಿದರು.

ಪಾಲಿಕೆ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ಪಶ್ಚಿಮ ವಲಯದ ಜಂಟಿ ಆಯುಕ್ತ ಬಿ.ಶಿವಸ್ವಾಮಿ, ಕೆರೆಗಳ ವಿಭಾಗ ಮುಖ್ಯ ಇಂಜಿನಿಯರ್‌ ಮೋಹನ್‌ ಕೃಷ್ಣ ಹಾಗೂ ಇನ್ನಿತರೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

ನೀರು ಸಂಗ್ರಹಿಸಿ ಇಂಗಿಸುವುದರಿಂದ ಅಂತರ್ಜಲ ಮಟ್ಟವು ಏರಿಕೆಯಾಗುತ್ತದೆ. ಉದ್ಯಾನವನಗಳಲ್ಲಿರುವ ಸಸ್ಯ ಪ್ರಭೇದಗಳಿಗೆ ನೀರಿನ
ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತದೆ. ಮಳೆ ನೀರನ್ನುಅಲ್ಲಿಯೇ
ಸಂಗ್ರಹಿಸಬಹುದು.
-ಗೌರವ್‌ ಗುಪ್ತ,
ಬಿಬಿಎಂಪಿ ಮುಖ್ಯ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next