Advertisement

 ಮನಗೆದ್ದ ಹವಾಮಾನ ಆಧರಿತ ವಿಮೆ,ರಾಜ್ಯದಲ್ಲೇ ಅತ್ಯಧಿಕ ಅಡಿಕೆ ಬೆಳೆಗಾರರ ನೋಂದಣಿ

01:03 AM Oct 09, 2022 | Team Udayavani |

ಮಂಗಳೂರು: ಹವಾಮಾನ ಆಧರಿತ ವಿಮಾ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರ ನೆರವಿಗೆ ಬಂದಿದ್ದು, ಇಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲೇ ಗರಿಷ್ಠ ವಿಮಾ ಮೊತ್ತವೂ ದ.ಕ. ಜಿಲ್ಲೆಯಲ್ಲೇ ವಿತರಣೆಯಾಗುತ್ತಿದೆ.

Advertisement

ಜಿಲ್ಲೆಯಲ್ಲಿ 2020-21 ಸಾಲಿ ನಲ್ಲಿ 100 ಕೋ.ರೂ. ಮೊತ್ತ ವಿಮಾ ರೂಪದಲ್ಲಿ ವಿತರಣೆಯಾಗಿದೆ, 2021-22ರ ಸಾಲಿನ ಮೊತ್ತ ಇನ್ನೂ ವಿತರಣೆ ಆಗಿಲ್ಲ, ಆದರೆ ಈ ವರ್ಷದ ಮೊತ್ತ 150 ಕೋಟಿ ರೂ. ಮೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಅತಿವೃಷ್ಟಿ, ಕೊಳೆರೋಗ, ನಳ್ಳಿ (ಎಳೆ ಅಡಿಕೆ) ಉದುರುವುದು ಇತ್ಯಾದಿ ಸಮಸ್ಯೆಗಳು ಜಿಲ್ಲೆಯ ಅಡಿಕೆ ಕೃಷಿಕರನ್ನು ಬಾಧಿಸುತ್ತಿವೆ. ಬೇಸಗೆಯ ಕೊನೆಯಲ್ಲಿ ಬಿಸಿಲಿನ ಝಳಕ್ಕೆ ಎಳೆ ಅಡಿಕೆ ಉದು ರುವುದು, ಜೂನ್‌ -ಜುಲೈ ತಿಂಗಳ ಸತತ ತೀವ್ರ ಮಳೆಯಿಂದಾಗಿ ಕೊಳೆರೋಗ ಉಂಟಾಗುತ್ತದೆ.

2016-17ರಲ್ಲಿ ಈ ಯೋಜನೆ ಆರಂಭವಾದಾಗ ಜಿಲ್ಲೆಯ ರೈತರಿಗೆ ಅದರ ಪ್ರಯೋಜನದ ಅರಿವು ಅಷ್ಟಾಗಿ ಇರಲಿಲ್ಲ. ಬಳಿಕ ಮನದಟ್ಟಾಗತೊಡಗಿದ್ದು, ಮೂರು ವರ್ಷಗಳಿಂದ ನೋಂದಣಿ ಮಾಡಿಕೊಳ್ಳು ವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ಎನ್ನುತ್ತಾರೆ ಅಧಿಕಾರಿಗಳು.

ಮೂರು ಮಾನದಂಡ
ಹವಾಮಾನ ಆಧರಿತ ವಿಮೆ ವ್ಯವಸ್ಥಿತ, ವೈಜ್ಞಾನಿಕ ಯೋಜನೆ. ಇದರಲ್ಲಿ ಮಳೆಯ ತೀವ್ರತೆ, ಮುಂದು ವರಿದ ಮಳೆ ಮತ್ತು ತಾಪಮಾನ ಎಂಬ 3 ವಿಭಾಗ ಗಳಡಿ ನಷ್ಟ ಅಂದಾಜಿಸಲಾಗುತ್ತದೆ.

Advertisement

ಮಳೆ ಪ್ರಮಾಣ ದಿನಕ್ಕೆ 100 ಮಿ.ಮೀ.ಗಿಂತ ಹೆಚ್ಚಾದರೆ ಜಿಲ್ಲೆಯಲ್ಲಿ ನಷ್ಟದ ಲೆಕ್ಕಾಚಾರ ಆರಂಭವಾಗುತ್ತದೆ, ಮಳೆ ಹೆಚ್ಚಿದಷ್ಟೂ ನಷ್ಟದ ಪ್ರಮಾಣ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಮಳೆ ನಿರಂತರವಾಗಿ ಎಷ್ಟು ದಿನ ಸುರಿದಿದೆ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮಳೆ ಮುಂದುವರಿದರೆ ರೋಗ ಬಾಧೆಗೆ ಪೂರಕ ಪರಿಸ್ಥಿತಿ (ಕಂಜೀನಿಯಲ್‌ ಕಂಡೀಶನ್ಸ್‌) ಉಂಟಾಗುತ್ತದೆ ಎನ್ನುವ ಲೆಕ್ಕಾಚಾರವೂ ಇದರಲ್ಲಿದೆ. ಮೂರನೇ ಮಾನದಂಡವೆಂದರೆ ತಾಪಮಾನ. ಮುಖ್ಯವಾಗಿ ಎಪ್ರಿಲ್‌ -ಮೇ ತಿಂಗಳಲ್ಲಿ ಅಧಿಕ ತಾಪಮಾನದಿಂದಾಗಿ ಎಳೆಯ ಅಡಿಕೆ ಬಾಡಿ ಬೀಳುತ್ತದೆ.

20 ವರ್ಷಗಳ ಡೇಟಾವನ್ನು ಆಧಾರವಾಗಿ ಇರಿಸಿಕೊಂಡು ಮಾನದಂಡಗಳನ್ನು ಜಿಲ್ಲಾ ಮಟ್ಟದಲ್ಲೇ ಅಂತಿಮಗೊಳಿಸಲಾಗಿದೆ. ಗ್ರಾ.ಪಂ.ಗಳಲ್ಲಿ ಮಳೆ ಮಾಪನ ಕೇಂದ್ರಇದೆ. ಅಲ್ಲಿಂದ ಸಂಗ್ರಹವಾದ ದತ್ತಾಂಶ ಕೆಎಸ್‌ಎನ್‌ಎಂಡಿಸಿಗೆ ಹೋಗುತ್ತದೆ. ಗ್ರಾ.ಪಂ.ವಾರು ಮಾಹಿತಿಯನ್ನು ಅಲ್ಲಿ ಕ್ರೋಡೀಕರಿಸಲಾಗುತ್ತದೆ. ಹವಾಮಾನ ಆಧರಿತ ಬೆಳೆವಿಮೆಗೆ ಗ್ರಾ.ಪಂ. ಒಂದು ಘಟಕ. ಎಲ್ಲ ಮಾಹಿತಿ ಸಂಗ್ರಹಿಸಿ ಕೇಂದ್ರ ಸರಕಾರದ ಇ-ಆಫೀಸ್‌ನಲ್ಲಿ ಆಯಾ ರೈತರಿಗೆ ಎಷ್ಟು ವಿಮೆ ಕೊಡಬೇಕು ಎನ್ನುವುದನ್ನು ನಿಗದಿ ಪಡಿಸಿ ಖಾತೆಗೆ ನೇರವಾಗಿ ಪಾವತಿ ಮಾಡಲಾಗುತ್ತದೆ.

ಡಿಸಿಸಿ ಬ್ಯಾಂಕ್‌ ಸಹಕಾರ
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನೆರವಿನಿಂದ ದೊಡ್ಡ ಮಟ್ಟದಲ್ಲಿ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರನ್ನು ಈ ವಿಮೆಗೆ ನೋಂದಣಿ ಮಾಡಲಾಗಿದೆ. 2016-17ರಲ್ಲಿ ಬೆಳೆಗಾರರಿಗೆ ಇದರಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಬಳಿಕ ನಾನು ಈ ಯೋಜನೆಯ ಪ್ರಯೋಜನಗಳನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ|ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ ಮನದಟ್ಟು ಮಾಡಿದೆ. ಅವರು ತತ್‌ಕ್ಷಣ ತಮ್ಮ ಶಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದರು. ಪ್ರಾ. ಕೃ.ಪ.ಸ. ಸಂಘ ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್‌ಗಳಲ್ಲೇ ಅಡಿಕೆ ಬೆಳೆಗಾರರು ಹೆಚ್ಚಿನ ಖಾತೆ ಹೊಂದಿದ್ದಾರೆ. ಹಾಗಾಗಿ ಡಾ| ರಾಜೇಂದ್ರ ಕುಮಾರ್‌ ಅವರ ನೆರವಿನಿಂದಾಗಿ ಅತ್ಯಧಿಕ ಸಂಖ್ಯೆಯಲ್ಲಿ ನೋಂದಣಿಯಾಗಿದೆ.
– ಎಚ್‌.ಆರ್‌. ನಾೖಕ್‌
ಉಪನಿರ್ದೇಶಕರು, ಜಿಲ್ಲಾ ತೋಟಗಾರಿಕಾ ಇಲಾಖೆ

- ವೇಣುವಿನೋದ್‌ ಕೆ.ಎಸ್‌.

 

Advertisement

Udayavani is now on Telegram. Click here to join our channel and stay updated with the latest news.

Next