ನವದೆಹಲಿ: ರೈತಹೋರಾಟದಲ್ಲಿ ಭಾಗಿಯಾಗಲು ತೆರಳುತ್ತಿದ್ದ 65 ವರ್ಷದ ವ್ಯಕ್ತಿಯೊಬ್ಬರು, ಕಾರಿಗೆ ಬೆಂಕಿ ತಗುಲಿದ್ದರಿಂದ ಸಜೀವ ದಹನರಾದ ಘಟನೆ ದೆಹಲಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಪಂಜಾಬ್ ನ ದನೌಲ ಮೂಲದ ಜನಕ್ ರಾಜ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ರೈತ ಹೋರಾಟದಲ್ಲಿ ಪಾಲ್ಗೊಳ್ಳಲೆಂದು ಟಿಕ್ರಿ ಗಡಿಗೆ ತೆರಳುತ್ತಿದ್ದ ವೇಳೆ, ಜನಕ್ ರಾಜ್ ಇದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಜನಕ್ ರಾಜ್ ನಿದ್ರಿಸುತ್ತಿದ್ದರು ಎನ್ನಲಾಗಿದೆ. ನಝಾಫರ್ ಗಢದ ಫ್ಲೈ ಓವರ್ ನಲ್ಲಿ ಪ್ರಯಾಣಿಸುತ್ತಿರುವಾಗ ಈ
ದುರ್ಘಟನೆ ನಡೆದಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಝಜ್ಜಾರ್ ಎಸ್ ಪಿ ರಾಜೇಶ್ ದುಗ್ಗಲ್, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹಲವು ರೈತರು ಬಹದ್ದೂರ್ ಗಢದಿಂದ ತೆರಳುತ್ತಿದ್ದರು. 11:30ರ ರಾತ್ರಿಯ ವೇಳೆ ರೈತರು ಪ್ರಯಾಣಿಸುತ್ತಿದ್ದ 1 ಟ್ರ್ಯಾಕ್ಟರ್ ರಿಪೇರಿಯಾಗಿದ್ದರಿಂದ, ಹಲವು ವಾಹನಗಳನ್ನು ಕೆಲಕಾಲ ಫ್ಲೈ ಓವರ್ ಮೇಲೆ ನಿಲ್ಲಿಸಲಾಗಿತ್ತು. ಈ ವೇಳೆ ಸ್ವಿಫ್ಟ್ ಕಾರಿನಲ್ಲಿ ಜನಕ್ ರಾಜ್ ನಿದ್ರಿಸುತ್ತಿದ್ದರು. ತಡ ರಾತ್ರಿ 1:30ರ ವೇಳೆಗೆ ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದರಿಂದ ಜನಕ್ ರಾಜ್ ಸಜೀವ ದಹನವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ಥಾನ ಸೇನಾ ನೆಲೆ ಗುರಿಯಾಗಿಸಿ ಕಾರ್ ಬಾಂಬ್ ಸ್ಪೋಟ; 31 ಸೈನಿಕರ ಸಾವು
ಈ ವೇಳೆ ಜನಕ್ ರಾಜ್ ಸ್ನೇಹಿತರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ.ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಸಹೋದರರ ಸವಾಲ್: ಸತೀಶ್ ಜಾರಕಿಹೊಳಿ ಬೆಂಬಲಿಗರು ಬಿಜೆಪಿ ಸೇರ್ಪಡೆ