ಬೆಂಗಳೂರು: ವಿವಾಹ ಸಂಬಂಧಿತ ವೆಬ್‌ಸೈಟ್ ಮೂಲಕ ಪರಿಚಯವಾದ ದೆಹಲಿ ಮೂಲದ ಯುವಕನೊಬ್ಬ ಮದುವೆ ಮಾಡಿಕೊಳ್ಳುವುದಾಗಿ ನಗರದ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯಿಂದ ಲಕ್ಷಾಂತರ ರೂ. ಪಡೆದುಕೊಂಡಿದಲ್ಲದೆ, ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿ ನಗ-ನಾಣ್ಯ ಸಮೇತ ಪರಾರಿಯಾಗಿರುವ ಘಟನೆ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಕನ್ನಮಂಗಲದ ನೀತು (ಹೆಸರು ಬದಲಿಸಲಾಗಿದೆ) (32)ಎಂಬವರು ದೆಹಲಿ ಮೂಲದ ರೂಪಂ ಕುಮಾರ್ ದಾಸ್ ಎಂಬಾತನ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಉತ್ತರ ಭಾರತ ಮೂಲದ ನೀತು ಕಳೆದ ಮಾರ್ಚ್‌ನಿಂದ ಕನ್ನ ಮಂಗಲದ ಅಪಾರ್ಟ್‌ಮೆಂಟ್ ವೊಂದರಲ್ಲಿ ಸಹೋದರಿ, ನೀತು ಜತೆ ವಾಸವಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಸಹೋದರಿಯರು ಜಂಟಿಯಾಗಿ ವಿವಾಹ ಸಂಬಂಧಿದ ವೆಬ್‌ಸೈಟ್‌ನಲ್ಲಿ ಖಾತೆ ತೆರೆದಿದ್ದಾರೆ.
ಈ ವೇಳೆ ದೆಹಲಿ ಮೂಲದ ದಿಲೀಪ್ ಕುಮಾರ್ ದಾಸ್ ಎಂಬವರು ನೀತು ಅವರ ವಿವರ ಕಂಡು ಪುತ್ರನಿಗೆ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಇಟ್ಟಿದ್ದಾರೆ. ಅಲ್ಲದೆ, ಪುತ್ರ ರೂಪಂಕುಮಾರ್ ದಾಸ್ ಕೂಡ ತನ್ನ ಫೋಟೋ ನೋಡಿ ಒಪ್ಪಿಕೊಂಡಿದ್ದಾನೆ ಎಂದು ಆತನ ಮೊಬೈಲ್ ನಂಬರ್ ನೀಡಿದ್ದಾರೆ. ಬಳಿಕ ರೂಪಂ ಕುಮಾರ್ ದಾಸ್ ಹಾಗೂ ನೀತು ಇಬ್ಬರು ಪರಸ್ಪರ ವಾಟ್ಸ್‌ಆ್ಯಪ್ ಚಾಟ್ ಮತ್ತು ವಿಡಿಯೋ ಕಾಲ್ ಮಾಡುತ್ತಿದ್ದರು. ಈ ವೇಳೆ ಆರೋಪಿ, ಭಾವಿ ಪತ್ನಿಯಿಂದ ತನ್ನ ಖಾತೆಗೆ 1.22 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಬಳಿಕ ತಾಯಿ ಮೃತಪಟ್ಟಿದ್ದಾರೆ ಎಂದು 20 ಸಾವಿರ ರೂ. ಪಡೆದುಕೊಂಡಿದ್ದಾನೆ. ಲಾಕ್‌ಡೌನ್ ಮುಗಿದ ಬಳಿಕ ಸೆಪ್ಟೆಂಬರ್‌ನಲ್ಲಿ ಗುವಾಹಟಿಯಲ್ಲಿ ನೀತುರನ್ನು ಭೇಟಿಯಾದ ಆರೋಪಿ ಆಗಲೂ 23 ಸಾವಿರ ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಬೀಗ ಹಾಕಿಕೊಂಡು ಪರಾರಿ : ನ.20ರಂದು ತನ್ನ ಸಂಬಂಧಿಕರ ಮನೆಯಲ್ಲಿ ಶಿವ ಪೂಜೆ ಇದ್ದು, ಅಲ್ಲಿಗೆ ಒಟ್ಟಿಗೆ ಹೋಗಬೇಕಿದೆ ಎಂದು ತನ್ನ ಮನೆಯಲ್ಲಿ ಆತನನ್ನು ಇರಿಸಿಕೊಂಡಿದ್ದಾರೆ. ಆದರೆ, ಆರೋಪಿ ತಡರಾತ್ರಿ ಮನೆಯಲ್ಲಿದ್ದ 7.90 ಲಕ್ಷ ರೂ. ನಗದು, ಒಂದು ಲ್ಯಾಪ್ ಟಾಪ್, ಮೊಬೈಲ್, 2 ವಾಚ್, ಬ್ಲೂಟೂತ್, ಕ್ಯಾಮೆರಾ ಬ್ಯಾಗ್, ಡಿಎಸ್‌ಎಲ್ ಆರ್ ಕ್ಯಾಮೆರಾ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ಕಳವು ಮಾಡಿ ಮನೆಗೆಬೀಗಹಾಕಿಪರಾರಿಯಾಗಿದ್ದಾನೆ.ಬಳಿಕ ಸ್ಥಳೀಯರ ನೆರವಿನಿಂದಬಾಗಿಲು ತೆರೆಸಿಕೊಂಡಿದ್ದಾರೆ. ಆರೋಪಿಗಾಗಿ ಶೋಧ ಮುಂದುವರಿದಿದೆ ಎಂದು ಕಾಡುಗೋಡಿ ಪೊಲೀಸರು ಹೇಳಿದರು.