ಮುಂಬಯಿ : ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಗುಜರಾತಿ ನಾಮಫಲಕಗಳ ವಿರುದ್ಧ ಕಾರ್ಯಾಚರಣೆ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ನಗರದಾದ್ಯಂತದ ವ್ಯಾಪಾರಿಗಳು ತಮ್ಮ ಅಂಗಡಿ, ಮಳಿಗೆಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಎಂಎನ್‌ಎಸ್ ಕಾರ್ಯಕರ್ತರು ಗುಜರಾತಿ ನಾಮಫಲಕಗಳನ್ನು ಹೊಂದಿದ್ದ ನಗರದಲ್ಲಿನ ಜುವೆಲ್ಲರಿ ಶೋರೂಮ್ ಮತ್ತು ದಕ್ಷಿಣ ಭಾರತೀಯ ರೆಸ್ಟೋರೆಂಟ್ ಒಂದನ್ನು ಗುರಿಯಾಗಿಸಿ ದಾಳಿ ಮಾಡಿದ ಬೆನ್ನಲ್ಲೇ ಭದ್ರತೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಅಚ್ಚರಿಯ ವಿಚಾರ ಅಂದರೆ ಈ ಅಂಗಡಿಗಳ ನಾಮಫಲಕಗಳಲ್ಲಿ ಇಂಗ್ಲಿಷ್, ಮರಾಠಿಯೊಂದಿಗೆ ಗುಜರಾತಿ ಭಾಷೆಯನ್ನೂ ಬಳಸಲಾಗಿದ್ದರೂ ಈ ಮಳಿಗೆಗಳ ನಾಮಫಲಕಗಳು ಎಂಎನ್‌ಎಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದವು.
ಎಂಎನ್‌ಎಸ್ ಕಾರ್ಯಕರ್ತರು ನಗರದಲ್ಲಿ ನಡೆಸುತ್ತಿರುವ ಗೂಂಡಾಯಿಸಂನ ಕುರಿತಂತೆ ಚಿಲ್ಲರೆ ವ್ಯಾಪಾರಿಗಳ ಕಲ್ಯಾಣ ಸಂಘಟನೆಗಳ ಫೆಡರೇಶನ್ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತತ್‌ಕ್ಷಣವೇ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದೆ.
ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಎಂಎನ್‌ಎಸ್ ವ್ಯಾಪಾರಿಗಳ ಅಂಗಡಿ-ಮಳಿಗೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ನಗರದ ವಿಲೇ ಪಾರ್ಲೆಯಲ್ಲಿ ಎಂಎನ್‌ಎಸ್ ತನ್ನ ಪುಂಡಾಟಿಕೆಗೆ ಚಾಲನೆ ನೀಡುತ್ತಿದ್ದಂತೆಯೇ ಫೆಡರೇಶನ್ ಆಯುಕ್ತರಿಗೆ ಪತ್ರ ಅವರ ಗಮನಕ್ಕೆ ತಂದಿತ್ತು. ಇದೀಗ ಎಂಎನ್‌ಎಸ್ ಕಾರ್ಯಕರ್ತರ ಪುಂಡಾಟಿಕೆ ಮತ್ತಷ್ಟು ವಿಸ್ತರಣೆಯನ್ನು ಕಂಡಿದ್ದು ನಗರದ ಹಲವಾರು ಪ್ರದೇಶಗಳಿಗೆ ಹರಡಿದೆ.
ಎಂಎನ್‌ಎಸ್‌ನ ಈ ಪುಂಡಾಟಿಕೆಗೆ ಕಡಿವಾಣ ಹಾಕಲು ಪೊಲೀಸರು ವಿಫಲರಾದಲ್ಲಿ ವ್ಯಾಪಾರಿಗಳು ಮತ್ತೆ ಹೈಕೋರ್ಟ್‌ನ ಮೆಟ್ಟಿಲೇರಲಿರುವರು ಎಂದು ಫೆಡರೇಶನ್ ಇದೇ ವೇಳೆ ಎಚ್ಚರಿಕೆ ನೀಡಿದೆ.