Advertisement
ಅಮ್ಮ ಅನ್ನೋ ಪದವನ್ನೇ ವಿವರಿಸಲಾಗುತ್ತಿಲ್ಲವೆಂದರೆ ಇನ್ನು ನನ್ನ ತಾಯಿಯನ್ನು ಅದ್ಹೇಗೆ ವಿವರಿಸಲಿ? ಕಂದನೆಂದರೆ ಅದೆಷ್ಟು ಇಷ್ಟವಮ್ಮ ನಿನಗೆ? ಮಗುವಿಗಾಗಿ ಹಪಹಪಿಸುತ್ತಿರುವ ಸಂದರ್ಭ ನಿನ್ನ ಗರ್ಭದಲ್ಲಿ ಮಗುವಾಗಿ ನಾನು ಚಿಗುರಿದೆ. ಅದೆಷ್ಟು ಸಂಭ್ರಮಿಸಿದೆಯಲ್ಲ ನೀನು! ನೀನು ಸಂತೋಷದಲ್ಲಿ ಹಾರಾಡುತ್ತಿರುವಾಗ ನಿನ್ನ ಹಿಡಿಯುವವರೇ ಇರಲಿಲ್ಲ. ಆದರೆ ನಿನಗೆ ನಾ ನೀಡಿದ್ದು ಬರೇ ನೋವಲ್ಲವೇ ಅಮ್ಮ? ನೀನು ಗರ್ಭವತಿಯಾದಾಗ ಅದೇನೆಲ್ಲ ತಿಂದು ನನ್ನ ಬೆಳೆಸಬೇಕು ಎಂದು ಬಯಸಿದ್ದೆಯೋ, ಹೇಗೆ ನನ್ನ ಬೆಳವಣಿಗೆಗೆ ಪೋಷಿಸಿದ್ದೆಯೋ ನಾ ಅರಿಯೆನಮ್ಮ. ಆದರೆ ನನ್ನ ಬೆಳವಣಿಗೆಯ ಪರಿ ಸರಿ ಇಲ್ಲದ ಕಾರಣ ನೀನು ಅನಾರೋಗ್ಯದಿಂದ ನರಳಿ ಬರೀ ನೀರು ಗಂಜಿಯಲ್ಲೇ ನನ್ನ ಪೋಷಿಸಿದೆಯಲ್ಲ, ನಿನ್ನಿಂದ ಅದು ಹೇಗೆ ಸಾಧ್ಯವಾಯ್ತು ಅಮ್ಮ? ಇನ್ನೇನು ನಿನ್ನ ಗರ್ಭದಲ್ಲಿ ಒಂಬತ್ತು ತಿಂಗಳ ಪ್ರಯಾಣ ಮುಗಿಸಿ ಹೊಸಪ್ರಪಂಚಕ್ಕೆ ಬಂದು ಕಣ್ಣು ತೆರೆಯಬೇಕೆನ್ನುವಷ್ಟರಲ್ಲಿ ನಿನ್ನ ಜೀವಕ್ಕೆ ಕಂಠಕವಾದೆನಲ್ಲಮ್ಮ. ಡಾಕ್ಟರ್ ಕೋಣೆಯಿಂದ ಹೊರಬಂದು, “”ಮಗು ಅಡ್ಡವಾಗಿ ಮಲಗಿದೆ, ಅಲ್ಲದೇ ಮಗುವಿನ ಕೊರಳಿಗೆ ತಾಯಿಯ ಕರುಳು ಸುತ್ತಿಕೊಂಡಿದೆ. ಇದಕ್ಕೆ ಕೂಡಲೇ ಆಪರೇಶನ್ ಆಗಲೇಬೇಕು” ಎನ್ನುತ್ತಾ ಅಪ್ಪನಿಗೆ ಒಂದು ಹಾಳೆ ಕೊಟ್ಟು “”ನಾವು ತಾಯಿ-ಮಗುವಲ್ಲಿ ಒಬ್ಬರನ್ನು ಮಾತ್ರ ಉಳಿಸಬಲ್ಲೆವು ಸರ್, ಇದಕ್ಕೆ ನಿಮ್ಮ ಅನುಮತಿ ಇದೆ ಎಂದು ಸಹಿ ಹಾಕಿ” ಎಂದಾಗ ಮನೆಯವರೆಲ್ಲ ತಬ್ಬಿಬ್ಟಾದರೂ ಸಹ ನಿನ್ನ ಜೀವ ಲೆಕ್ಕಿಸದೇ, “”ಬದುಕುಳಿದರೆ ನನ್ನ ಮಗುವೇ ಉಳಿಯಬೇಕು” ಎಂದು ನೇರವಾಗಿ ಹೇಳಿ ಅಪ್ಪನಿಗೆ ಧೈರ್ಯ ತುಂಬಿ ಸಹಿ ಮಾಡಿಸಿ ಆಪರೇಶನ್ ಥಿಯೇಟರ್ ಒಳಗೆ ಹೋದೆಯಲ್ಲ, ನಿನ್ನ ಹೇಗೆ ಪೂಜಿಸಲಿ ಅಮ್ಮ. ಹಾಗೋ ಹೀಗೋ ನಿನ್ನ ಕರುಳಿನಲ್ಲಿ ಸುತ್ತಿಕೊಂಡ ಕೊರಳನ್ನು ಬಿಡಿಸಿ ಇಕ್ಕಳದಲ್ಲಿ ತೆಗೆಯುವಾಗ ಮರಳಿ ಜಾರಿ ನಿನ್ನ ಹೊಟ್ಟೆಯ ಮೇಲೆ ಬಿ¨ªೆನಲ್ಲ ನಿನಗೆ ಅದೆಷ್ಟು ನೋವಾಗಿರಬೇಕಮ್ಮ! ಅದು ಹೇಗೆ ಸಹಿಸಿಕೊಂಡೆಯಮ್ಮ, ಅದನ್ಯಾಕೆ ಕಲ್ಪಿಸಿಕೊಳ್ಳಲೂ ನನ್ನ ಮೈ ಕಂಪಿಸುತ್ತದೆ, ಹೇಳಮ್ಮ ಯಾವ ಋಣವಿತ್ತೋ ಏನೋ ನಮ್ಮಿಬ್ಬರ ಮಧ್ಯೆ. ಅಂತೂ ಇಬ್ಬರೂ ಬದುಕುಳಿದೆವು. ಆದರೆ ನಂತರವೂ ನಿನ್ನ ಎದೆಹಾಲು ಮುಟ್ಟದೇ ನಿನಗೆ ಎದೆನೋವು ಬರುವ ಹಾಗೆ ಮಾಡಿ ಆ ನೋವಿನಿಂದ ಈಗಲೂ ನರಳುತ್ತಿದ್ದರೂ ಅದ್ಯಾವುದನ್ನೂ ನನಗೆ ತೋರಗೊಡದೆ ಮೇಲ್ನೋಟಕ್ಕೆ ನಗುತ್ತಿರುವೆಯಲ್ಲ ನಿನಗಿಂತ ಮಿಗಿಲೇನಿದೆಯಮ್ಮ? ನಿನ್ನನ್ನು ಯಾವುದಕ್ಕೆ ಹೋಲಿಸಲಿ?
ಕಂಪ್ಯೂಟರ್ ಸಾಯನ್ಸ್ ವಿಭಾಗ
ಕಾಮತ್ ಪಾಲಿಟೆಕ್ನಿಕ್, ಹೊಂಬಾಡಿ-ಮಂಡಾಡಿ, ಕುಂದಾಪುರ