Advertisement

ಮಲ್ಪೆ- ತೀರ್ಥಹಳ್ಳಿ ರಸ್ತೆ ಕಾಮಗಾರಿಗೆ ಶೀಘ್ರ ಚಾಲನೆ: ಸಂಸದೆ ಶೋಭಾ

03:50 AM Jul 04, 2018 | Team Udayavani |

ಕಾರ್ಕಳ: ಮಲ್ಪೆ- ತೀರ್ಥಹಳ್ಳಿ ರಸ್ತೆ ಚತುಷ್ಪಥ ಅಭಿವೃದ್ಧಿಗೆ ಸಂಬಂಧಿಸಿ ಉಡುಪಿಯ ಕರಾವಳಿ ಜಂಕ್ಷನ್‌ ನಿಂದ ಪರ್ಕಳದವರೆಗಿನ ರಸ್ತೆಗೆ 93 ಕೋ. ರೂ. ಬಿಡುಗಡೆಗೊಂಡಿದ್ದು, ಟೆಂಡರ್‌ ಆಗಿದೆ. ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಕಾರ್ಕಳದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈಗಾಗಲೇ ಗುರುತಿಸಿದ ಎಲ್ಲ ಹೈವೇಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆದಿದೆ. ಹಿಂದಿನ ರಾಜ್ಯ ಸರಕಾರ ಭೂಸ್ವಾಧೀನ ಪ್ರಕ್ರಿಯೆಗೆ ಮೀನಮೇಷ ಎಣಿಸಿದ್ದರಿಂದ ವಿಳಂಬವಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಜಿಲ್ಲಾಧಿಕಾರಿ ಮೂಲಕವೇ ನಡೆಯಬೇಕಾಗಿದೆ. ಕರಾವಳಿ ಜಂಕ್ಷನ್‌ -ಪರ್ಕಳ, ಪರ್ಕಳ- ಹಿರಿಯಡ್ಕ, ಹಿರಿಯಡ್ಕ-ಸೀತಾನದಿ, ಸೀತಾನದಿ – ಆಗುಂಬೆ ಹೀಗೆ ನಾಲ್ಕು ಹಂತಗಳಲ್ಲಿ ಈ ರಸ್ತೆಯ ಕಾಮಗಾರಿ ನಡೆಯಲಿದೆ ಎಂದರು.

Advertisement

ಕೇಂದ್ರ ಸರಕಾರದಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗಾಗಿ ದೊಡ್ಡ ಪ್ರಮಾಣದ ಅನುದಾನ ತರಲಾಗಿದೆ. ಸದ್ಯ CRFನಲ್ಲಿ 93 ಕೋ.ರೂ. ಮೊತ್ತದ ಕೆಲಸ ನಡೆಯುತ್ತಿದೆ. 46 ಕೋ.ರೂ. ಟೆಂಡರ್‌ ಆಗಬೇಕಿದೆ. ಜಿಲ್ಲೆಯಲ್ಲಿ 1,95,355 ಜನಧನ ಖಾತೆ ತೆರೆಯಲಾಗಿದ್ದು, ಸಕ್ರಿಯವಾಗಿವೆ. ಖಾತೆದಾರರಿಗೆ ಇನ್ಶೂರೆನ್ಸ್‌ ಕೂಡ ದೊರೆಯುತ್ತಿದೆ ಎಂದರು.

ಹನಿನೀರಾವರಿಗೆ ಆದ್ಯತೆ
ಕೃಷಿ ಸಿಂಚನ ಯೋಜನೆ ಜಾರಿ ತರಲಾಗಿದ್ದು, ಹನಿ ನೀರಾವರಿಗೆ ಶೇ.90 ಸಹಾಯಧನ ನೀಡಲಾಗುತ್ತಿದೆ. ಉಜ್ವಲ ಯೋಜನೆಯಡಿ ಅರ್ಹ ಕುಟುಂಬಗಳಿಗೆ ಉಚಿತವಾಗಿ ಸಂಪರ್ಕ ಕಲ್ಪಿಸುವ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಶೇ.90 ಸಂಪರ್ಕ ಕಲ್ಪಿಸಲಾಗಿದ್ದು, ಬಾಕಿ ಇರುವವ‌ರಿಗೆ ಪರಿಶೀಲಿಸಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 28,500 ಶೌಚಾಲಯ ನಿರ್ಮಾಣ
ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಾಣಕ್ಕೆ ಪ. ಜಾತಿ ಮತ್ತು ಪ. ಪಂಗಡದ ಕುಟುಂಬಗಳಿಗೆ 15 ಸಾವಿರ ರೂ. ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೆ 12 ಸಾವಿರ ರೂ. ನೀಡಲಾಗಿದೆ. ಜಿಲ್ಲೆಯಲ್ಲಿ 28,500 ಶೌಚಾಲಯಗಳು ನಿರ್ಮಾಣವಾಗಿವೆ. ಮುದ್ರ ಲೋನ್‌ ನಲ್ಲಿ ಜಿಲ್ಲೆಯಲ್ಲಿ 286 ಕೋ.ರೂ. ವಿತರಣೆ ಮಾಡಲಾಗಿದೆ ಎಂದರು.

ಕೇಂದ್ರೀಯ ವಿದ್ಯಾಲಯವನ್ನು ಉಡುಪಿಗೆ ತರಲಾಗಿದೆ. ಸದ್ಯ ಇದು ತಾತ್ಕಾಲಿಕವಾಗಿ ಮಲ್ಪೆಯಲ್ಲಿ ನಡೆಯುತ್ತಿದ್ದು, ಅಲೆವೂರಿನಲ್ಲಿ ಶಾಶ್ವತ ಕಟ್ಟಡ ನಿರ್ಮಾಣ ಆಗುತ್ತದೆ. ಮೊದಲಬಾರಿಗೆ ಉಡುಪಿಯಲ್ಲಿ ಜೆಮ್ಸ್‌ ಆ್ಯಂಡ್‌ ಜುವೆಲ್ಸ್‌ ಸರ್ಟಿಫಿಕೇಶನ್‌ ಶಾಲೆ ತೆರೆಯಲಾಗಿದೆ. ಬ್ರಹ್ಮಾವರದಲ್ಲಿ ಪಾಸ್‌ ಪೋರ್ಟ್‌ ಕಚೇರಿ, ಜನೌಷಧ ಕೇಂದ್ರಗಳು, ಸಖೀ ಒನ್‌ ಸ್ಟಾಪ್‌ ಸೆಂಟರ್‌ ತರಲಾಗಿದೆ. 6,000 ಸಾವಿರ ಮನೆಗಳಿಗೆ ಪಂ| ದೀನ್‌ ದಯಾಳ್‌ ಉಪಾಧ್ಯಾಯ ವಿದ್ಯುದೀಕರಣ ಯೋಜನೆಯಲ್ಲಿ ವಿದ್ಯುತ್‌ ಕಲ್ಪಿಸಲಾಗಿದೆ ಎಂದರು. ಯೋಜನೆಗಳಲ್ಲಿ ಕಾರ್ಕಳದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. CRFನಲ್ಲಿ ಅತೀ ಹೆಚ್ಚು 87 ಕೋ.ರೂ. ಕಾರ್ಕಳಕ್ಕೆ ನೀಡಲಾಗಿದೆ ಎಂದರು.

Advertisement

ಸುರಂಗ ಮಾರ್ಗ ಸೂಕ್ತವಲ್ಲ
ಆಗುಂಬೆಯಲ್ಲಿ ಸುರಂಗ ಮಾರ್ಗ ನಿರ್ಮಾಣ ಸೂಕ್ತವಲ್ಲ ಎಂದು ಕೇಂದ್ರದ ತಜ್ಞರ ತಂಡ ತಿಳಿಸಿದೆ. ಸುರಂಗ ಮಾರ್ಗಕ್ಕೆ ನನ್ನ ಒತ್ತಾಯ ಇದೆ. ಆದರೆ ಅದರಿಂದ ಅಲ್ಲಿರುವ ಜೀವವೈವಿಧ್ಯಕ್ಕೆ ಸಮಸ್ಯೆಯಾಗುತ್ತದೆ. ಹೀಗಾಗಿ ಘಾಟಿ ರಸ್ತೆಯನ್ನು ಸ್ವಲ್ಪ ಅಗಲ ಮಾಡಲು ಮಾತ್ರ ಸಾಧ್ಯವಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು. ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಜಿಲ್ಲಾ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ, ಕ್ಷೇತ್ರ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಎಂ.ಕೆ. ಸುವೃತ್‌ ಕುಮಾರ್‌ ಉಪಸ್ಥಿತರಿದ್ದರು.

ಕ್ಷೇತ್ರ ಮರೆತಿದ್ದರೆ ಇಷ್ಟು ಕೆಲಸ ಹೇಗೆ ಸಾಧ್ಯ: ಶೋಭಾ ಪ್ರಶ್ನೆ
ಕಾರ್ಕಳ:
ತನ್ನ ಕ್ಷೇತ್ರವನ್ನು ಮರೆತಿದ್ದರೆ ಇಷ್ಟು ಅಭಿವೃದ್ಧಿ ಕಾರ್ಯಗಳನ್ನು ನಿಭಾಯಿಸಲು ಕೆಲಸ ಹೇಗೆ ಸಾಧ್ಯವಾಯಿತು? 28 ಸಂಸದರ ಪೈಕಿ ಬೇರೆ ಯಾವ ಸಂಸದರ ಕ್ಷೇತ್ರದಲ್ಲಿ ಇಷ್ಟು CRF ನಿಧಿ ಬಂದಿದೆ, ಯಾವ ಸಂಸದರು ದಿಲ್ಲಿಯಲ್ಲಿ ಸಚಿವರ ಜತೆಗೆ ಮಾತನಾಡುತ್ತಾರೆ ಎಂದು ಸರ್ವೆ ಮಾಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲೆಸೆದರು.

ಮಾಧ್ಯಮದ ಪ್ರಶ್ನೆಗೆ ಪ್ರಕ್ರಿಯಿಸಿದ ಅವರು, ಬಿಜೆಪಿ ಹೇಳಿದಂತೆ ನಾನು ನಡೆದುಕೊಳ್ಳುತ್ತಿದ್ದೇನೆ ಎಂದರು. ಲೋಕಸಭಾ ಚುನಾವಣೆಯ ಅಭ್ಯರ್ಥಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪಕ್ಷ ಯಾರನ್ನು ಘೋಷಿಸುತ್ತದೆಯೋ ಅವರೇ ಅಭ್ಯರ್ಥಿಯಾಗಲಿದ್ದಾರೆ. ಪಕ್ಷ ಬೇಕು ಎಂದರೆ ಸ್ಪರ್ಧಿಸುತ್ತೇನೆ, ಬೇಡ ಅಂದರೆ ಸ್ಪರ್ಧಿಸುವುದಿಲ್ಲ. ನಾನು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. ಕಾರ್ಯಕರ್ತರಿಗೆ ತಮ್ಮ ಅಭಿಪ್ರಾಯ ಹೇಳುವ ಅವಕಾಶವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next