Advertisement

Malpe : ನಿರ್ವಹಣೆ ಇಲದೆ ಸೊರಗಿದ ಮಲ್ಪೆ ಸೈಂಟ್‌ ಮೇರೀಸ್‌ ದ್ವೀಪ

05:05 PM Dec 09, 2023 | Team Udayavani |

ಮಲ್ಪೆ: ದೇಶ ವಿದೇಶಗಳ ಪ್ರವಾಸಿಗರ ಆಕರ್ಷಣೀಯ ತಾಣದಲ್ಲೊಂದಾದ ಮಲ್ಪೆ ಸೈಂಟ್‌ ಮೇರೀಸ್‌ ಐಲ್ಯಾಂಡ್‌ ನಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಸೊರಗಿ ಹೋಗಿದ್ದು, ಆಡಳಿತದ ನಿರ್ಲಕ್ಷéದಿಂದಾಗಿ ತನ್ನ ಹಿಂದಿನ ವೈಭವವನ್ನು ಕಳೆದುಕೊಳ್ಳುವಂತಿದೆ. ಅಲ್ಲಲ್ಲಿ ತೆರವುಗೊಳ್ಳದ ತ್ಯಾಜ್ಯ, ಕಸಕಡ್ಡಿಗಳು, ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಾಟಲಿಗಳ ರಾಶಿ, ಅಶುಚಿತ್ವ, ಅಲ್ಲೇ ಮಲಮೂತ್ರ ವಿಸರ್ಜನೆ ಪ್ರವಾಸಿಗರ ನೆಮ್ಮದಿ ಕೆಡಿಸಿದೆ.

Advertisement

ಈ ಹಿಂದೆ ನಿರ್ವಹಣೆ ಮಾಡುತ್ತಿದ್ದ ಸಂಸ್ಥೆಯ ಟೆಂಡರ್‌ ಅವಧಿ ಅಕ್ಟೋಬರ್‌ ತಿಂಗಳಲ್ಲಿ ಮುಗಿದಿದ್ದು, ಹೊಸ ಟೆಂಡರ್‌ ಪ್ರಕ್ರಿಯೆ
ಗಳು ನಡೆಯುತ್ತಿವೆ. ಹಾಗಾಗಿ ಯಾವುದೇ ನಿರ್ವಹಣೆಯ ಕೆಲಸಗಳು ನಡೆಯುತ್ತಿಲ್ಲ ಎನ್ನಲಾಗುತ್ತಿದೆ. ನಿಷೇಧ ತೆರವುಗೊಂಡ
ಬಳಿಕ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ವೀಕೆಂಡ್‌ಗಳಲ್ಲಿ ಪ್ರವಾಸ ಕೈಗೊಂಡ ಶಾಲಾ ಮಕ್ಕಳು ಸೇರಿದಂತೆ ಹೊರ ಜಿಲ್ಲೆ ಮತ್ತು ರಾಜ್ಯದ ಪ್ರವಾಸಿಗರು ಪ್ರವಾಹದಂತೆ ಹರಿದು ಬರುತ್ತಿದ್ದು ಇದೀಗ ಕಳೆದ 15ದಿನಗಳಿಂದ ತುಸು ಕಡಿಮೆಯಾಗಿದೆ ಎನ್ನಲಾಗಿದೆ.

ಸಮುದ್ರದ ಅಲೆಗಳೊಂದಿಗೆ ಬಂದ ತ್ಯಾಜ್ಯ, ಕಸಗಳು ಉದ್ದಕ್ಕೂ ಹರಡಿಕೊಂಡಿದ್ದು ಕಸವನ್ನು ತೆರವುಗೊಳಿಸುವ ಕೆಲಸ ಕಾರ್ಯಗಳೂ ನಡೆದಿಲ್ಲ. ಅಲ್ಲಲ್ಲಿ ಗಿಡಗಂಟಿಗಳು ಬೆಳೆದು ನಿಂತಿದೆ. ಪ್ರವಾಸಿಗರಿಗಿರುವ ಶೌಚಾಲಯ ಸುಸ್ಥಿತಿಯಲ್ಲಿ ಇಲ್ಲ. ಕುಡಿಯುವ ನೀರು, ಬಿಸಿಲಿನಿಂದ ರಕ್ಷಣೆ ಪಡೆಯಲು ನಿರ್ಮಿಸಿದ್ದ ಹಟ್‌ಗಳು, ಗ್ರೀನ್‌ ಶೀಟ್‌ ಸಂಪೂರ್ಣ ಹಾನಿಗೊಂಡಿದೆ.

ಇದೀಗ ಐಲ್ಯಾಂಡಿಗೆ ತಿಂಡಿ ತಿನಸುಗಳನ್ನು ಒಯ್ಯಲು ಅವಕಾಶ ನೀಡಿದ್ದರಿಂದ ಪ್ರವಾಸಿಗರು ಪ್ಲಾಸ್ಟಿಕ್‌ ನೀರಿನ ಬಾಟಲ್‌, ತಟ್ಟೆಗಳು, ಮದ್ಯದ ಬಾಟಲುಗಳನ್ನು ಎಸೆಯುತ್ತಿದ್ದಾರೆ. ತಿಂದು ಕುಡಿದು ಉಳಿದ ವಸ್ತುಗಳನ್ನು ಅಲ್ಲೇ ಎಸೆಯದೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕೆಂಬ ಕನಿಷ್ಠ ಜ್ಞಾನವೂ ಹೆಚ್ಚಿನವರಿಗೆ ಇಲ್ಲ. ಒಟ್ಟಿನಲ್ಲಿ ಸುಂದರ ನಾಡಾದ ಸೈಂಟ್‌ಮೇರೀಸ್‌ ಐಲ್ಯಾಂಡ್‌ ಇದೀಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಮತ್ತೆ ಅಭಿವೃದ್ಧಿ ಕಾಣಬಹುದೇ ಎಂಬ ನಿರೀಕ್ಷೆಯಲ್ಲಿ ಇದ್ದಾರೆ ಪ್ರಜ್ಞಾವಂತ ನಾಗರಿಕರು.

ತರಬೇತಿ ಪಡೆದ ಜೀವರಕ್ಷಕ ಸಿಬಂದಿ ಪ್ರವಾಸಿಗರ ಸುರಕ್ಷೆ, ಭದ್ರತೆಗೆ ಹೆಚ್ಚು ಒತ್ತು ನೀಡುವ ದೃಷ್ಟಿಯಲ್ಲಿ ಪ್ರವಾಸಿ ಕೇಂದ್ರಗಳಲ್ಲಿ ಹೆಚ್ಚು ಜೀವರಕ್ಷರನ್ನು ನೇಮಿಸಲಾಗುತ್ತದೆ. ಈಗಾಗಲೇ ಜಿಲ್ಲಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಜೀವರಕ್ಷಕ ಸಿಬಂದಿಗೆ ಪ್ರವಾಸೋದ್ಯಮ ಇಲಾಖೆಯಿಂದ ತರಬೇತಿ ನಡೆಸಲು ಮುಂದಾಗಿದ್ದಾರೆ.

Advertisement

ಮುಂದೆ ಬೀಚ್‌ ಮತ್ತು ಸೈಂಟ್‌ಮೇರೀಸ್‌ ಐಲ್ಯಾಂಡ್‌ನ‌ಲ್ಲಿ ಸುಮಾರು 10 ಮಂದಿ ತರಬೇತಿ ಪಡೆದ ಸಿಬಂದಿಯನ್ನು ನಿಯೋಜನೆ ಮಾಡಲಾಗುವುದು. ಮಳೆಗಾಲದ ಆನಂತರ ಐಲ್ಯಾಂಡಿನಲ್ಲಿ ಎಲ್ಲ ಅಸ್ತವ್ಯಸ್ತವಾಗಿದೆ. ಈ ಹಿಂದೆ ಗುತ್ತಿಗೆ ವಹಿಸಿಕೊಂಡಿರುವವರು ಐಲ್ಯಾಂಡ್‌ನ‌ ಎಲ್ಲ ನಿರ್ವಹಣೆಯನ್ನು ಮಾಡುತ್ತಿದ್ದು ಪ್ರಸ್ತುತ ಟೆಂಡರ್‌ ಮುಗಿದಿದ್ದು ಹೊಸ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಫುಡ್‌ಕೋರ್ಟ್‌ಗೆ ಟೆಂಡರ್‌ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಬೇಕಾದ ಮೂಲ ಸೌಕರ್ಯಗಳು
*ಸಸ್ಯಾಹಾರಿ, ಮಾಂಸಾಹಾರಿ ಫುಡ್‌ ಕೋರ್ಟ್‌
*ವಿಶಾಂತ್ರಿಗಾಗಿ ಹಟ್‌ಗಳು
* ಶೌಚಾಲಯ, ಬಟ್ಟೆ ಬದಲಾಯಿಸುವ ಕೋಣೆ
*ಶುದ್ಧ ಕುಡಿಯುವ ನೀರು
*ಪ್ರವಾಸಿಗರಿಗೆ ವೈಟಿಂಗ್‌ಲಾಂಚ್‌
* ಪ್ರಥಮ ಚಿಕಿತ್ಸಾ ಸೌಲಭ್ಯ
* ಜೀವರಕ್ಷಕರು ಮತ್ತು ಜೀವರಕ್ಷಣ ಪರಿಕರ
*ನೆರಳಿನಲ್ಲಿ ಕುಳಿತುಕೊಳ್ಳಲು ನೈಸರ್ಗಿಕ ವ್ಯವಸ್ಥೆ
* ಮಾಹಿತಿ ಕೇಂದ್ರ
*ಲಗೇಜ್‌ ರೂಮ್‌

ಭದ್ರತಾ ಕ್ರಮ
ಈಗಾಗಲೇ ಮೂರು ದಿನಗಳಿಂದ ಸ್ವಚ್ಛತ ಕಾರ್ಯ ನಡೆಯುತ್ತಿದೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮಲ್ಪೆ ಅಭಿವೃದ್ಧಿ
ಸಮಿತಿಯಿಂದ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಬರುವ ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆಗಳು
ಉಂಟಾಗದಂತೆ ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜ. 15ರೊಳಗೆ ಎಲ್ಲ ವ್ಯವಸ್ಥೆಗಳು ಪೂರ್ಣಗೊಳ್ಳಲಿದೆ.
ರಾಯಪ್ಪ, ಕಾಯದರ್ಶಿ, ಮಲ್ಪೆ ಅಭಿವೃದ್ಧಿ
ಸಮಿತಿ, ಪೌರಾಯುಕ್ತರು, ನಗರಸಭೆ

ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next