ಮಲ್ಪೆ: ವಾರಾಂತ್ಯ ಮತ್ತು ಸರಣಿ ರಜೆಯ ಹಿನ್ನೆಲೆಯಲ್ಲಿ ಮಲ್ಪೆ ಕಡಲತೀರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ರವಿವಾರ ಮಲ್ಪೆ ಬೀಚ್‌ನಲ್ಲಿ ಭಾರೀ ಜನಸಂದಣಿಯಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿತ್ತು.
ಬೆಂಗಳೂರಿನಿಂದ ಹೆಚ್ಚಿನ ಪ್ರವಾಸಿಗರು ಕಂಡು ಬಂದಿದ್ದು ಮೈಸೂರು, ಕೇರಳದಿಂದಲೂ ಆಗಮಿಸಿದ್ದರು. ಶನಿವಾರದಿಂದ ಸೋಮವಾರದವರೆಗೆ ರಜೆ ಇರುವುದರಿಂದ ತಿಂಗಳ ಹಿಂದೆಯೇ ಇಲ್ಲಿನ ವಸತಿ ಗೃಹಗಳು ಬುಕ್ ಆಗಿದ್ದವು. ಹೂಡೆಯಿಂದ ಪಡುಕರೆ ವರೆಗೆ ರೆಸಾರ್ಟ್ ಕಾಟೇಜ್‌ಗಳು ಭರ್ತಿಯಾಗಿದ್ದವು. ಬೀಚ್‌ನಲ್ಲಿ ಮಳೆಗಾಲದಲ್ಲಿ ಮುಚ್ಚಿದ್ದ ಎಲ್ಲ ಅಂಗಡಿಗಳು ತೆರೆದಿದ್ದವು.
ಕಡಲತೀರದಲ್ಲಿ ನೀರಿಗಿಳಿಯದಂತೆ ನೆಟ್ ಅಳವಡಿಸಿದ್ದರೂ ಕೆಲವರು ಸೆಲ್ಫಿ ತೆಗೆಯಲು ಸಮುದ್ರ ಬದಿ ಹೋಗುತ್ತಿರುವುದು ಕಂಡುಬಂದಿದೆ. ಸೋಮವಾರವೂ ರಜೆಯಾಗಿದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇರುವ ಕಾರಣ ಹೆಚ್ಚುವರಿಯಾಗಿ 10 ಮಂದಿ ಜೀವರಕ್ಷಕರನ್ನು ನಿಯೋಜಿಸಲಾಗಿದೆ. 4 ಮಂದಿ ಗೃಹರಕ್ಷಕರು ಸೇವೆಯಲ್ಲಿದ್ದಾರೆ ಎಂದು ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ. ಪ್ರವಾಸಿಗರ ಜತೆ ಸ್ಥಳೀಯರು ಆಗಮಿಸಿದ್ದರಿಂದ ಸಂಜೆ ವೇಳೆ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು.
ವಾಹನ ಪಾರ್ಕಿಂಗ್ ಸಮಸ್ಯೆ
ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಅಗಮಿಸುತ್ತಿದ್ದು, ಬೀಚ್‌ನ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗಿತ್ತು. ಇತ್ತ ಸೀವಾಕ್, ಪಾರ್ಕ್, ಪಡುಕರೆ ಬೀಚ್‌ನಲ್ಲೂ ಜನಸಂದಣಿ ಕಂಡು ಬಂದಿದೆ.