ಮಲ್ಪೆ: ಈ ಹಿಂದಿನ ಕ್ರಮದಂತೆ ಸೆಪ್ಟಂಬರ್ 15ರಿಂದ ಪ್ರವಾಸಿಗರಿಗೆ ತೆರೆದುಕೊಳ್ಳಬೇಕಾಗಿದ್ದ ಮಲ್ಪೆ ಬೀಚ್ ಈ ವರ್ಷ ತೆರವಾಗದೆ ಇರುವುದರಿಂದ ಪ್ರವಾಸಿಗರು ನಿರಾಸೆಗೊಂಡಿದ್ದಾರೆ. ಮಳೆ-ಗಾಳಿಯ ಹಿನ್ನೆಲೆಯಲ್ಲಿ ಸಮುದ್ರ ಈಗಲೂ ಪ್ರಕ್ಷುಬ್ಧ ಇರುವುದರಿಂದ ಪ್ರವಾಸಿಗರಿಗೆ ನೀರಿಗಿಳಿಯಲು ಇರುವ ನಿರ್ಬಂಧವನ್ನು ಸೆ. 25ರ ವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಪ್ರತಿನಿತ್ಯ ಬೀಚ್‌ನಲ್ಲಿ ಜನ ಕಂಡು ಬರುತ್ತಿದ್ದಾರೆ. ವಾರಾಂತ್ಯದಲ್ಲಿ ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಈ ತಿಂಗಳಲ್ಲಿ ಸರಣಿ ರಜೆಗಳು ಬಂದಿದ್ದರಿಂದ ಕಡಲತೀರದಲ್ಲಿ ಹೆಚ್ಚು ಜನ ಕಂಡುಬಂದಿದ್ದಾರೆ. ಆದರೆ ನಿರ್ಬಂಧದ ಹಿನ್ನೆಲೆಯಲ್ಲಿ ಯಾವುದೇ ವಾಟರ್‌ನ್ಪೋರ್ಟ್ಸ್ ಆಗಲಿ, ಸೈಂಟ್‌ಮೇರಿಸ್ ದ್ವೀಪ ಯಾನವಾಗಲಿ ಆರಂಭವಾಗಿಲ್ಲ. ಕೆಲವರು ಸೀವಾಕ್ ನೋಡಿ ಮರಳುತ್ತಿದ್ದಾರೆ.
ಹಾರ್ಬರ್ ಕ್ರಾಫ್ಟ್ ನಿಯಮಗಳ ಅನ್ವಯ ಮಳೆಗಾಲದ ಹಿನ್ನೆಲೆಯಲ್ಲಿ ಮೇ 16ರಿಂದ ಸೆ. 15ರ ವರೆಗೆ ಬೀಚ್‌ನಲ್ಲಿ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಆದರೆ ಈ ಬಾರಿ ನಿಷೇಧದ ಅವಧಿಯನ್ನು ವಿಸ್ತರಿಸಲಾಗಿದೆ.
ಮಳೆಗಾಲದ ಆರಂಭದಲ್ಲಿ ವಿಧಿಸುವ 4 ತಿಂಗಳ ನಿಷೇಧವನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಸೆ. 25ರ ವರೆಗೆ ಮುಂದುವರಿಸಲಾಗಿದೆ. ಸಮುದ್ರದ ಪ್ರಕ್ಷುಬ್ಧ ಸ್ಥಿತಿ ಮುಂದುವರಿದಿರುವ ಕಾರಣ ಯಾರೂ ಕೂಡ ನೀರಿಗಿಳಿಯಂದಂತೆ ಎಚ್ಚರ ವಹಿಸಲಾಗಿದೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಪ್ರವೇಶಕ್ಕೆ ಅನುಮತಿ ನೀಡಲಾಗುವುದು.
– ರಾಯಪ್ಪ, ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ,
ಪೌರಾಯುಕ್ತರು, ನಗರಸಭೆ