Advertisement

ಮಲ್ಯಗೆ ಹೈಕೋರ್ಟ್‌ ಮತ್ತೂಂದು ಶಾಕ್‌

03:45 AM Feb 08, 2017 | Team Udayavani |

ಬೆಂಗಳೂರು: ಉದ್ಯಮಿ ವಿಜಯ್‌ ಮಲ್ಯ ಅವರು ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಕಂಪೆನಿಗೆ ಪಡೆದಿದ್ದ 6,203 ಕೋಟಿ ರೂ. ಸಾಲವನ್ನು
ವಾರ್ಷಿಕ ಶೇ. 11.5ರ ಬಡ್ಡಿದರದಲ್ಲಿ ವಸೂಲಿ ಮಾಡುವಂತೆ ನಗರದ ಸಾಲ ವಸೂಲಾತಿ ನ್ಯಾಯಾಧೀಕರಣ (ಡಿಆರ್‌ಟಿ) ಇತ್ತೀಚೆಗೆ
ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ನೇತೃತ್ವದ 14 ಬ್ಯಾಂಕ್‌ಗಳ ಒಕ್ಕೂಟಕ್ಕೆ ಆದೇಶಿಸಿರುವ ಬೆನ್ನಲ್ಲೇ, ಇದೀಗ ಹೈಕೋರ್ಟ್‌
ಮಲ್ಯಗೆ ಮತ್ತೂಂದು ಶಾಕ್‌ ನೀಡಿದೆ. ಮಲ್ಯ ಒಡೆತನದ ಯುನೈಟೆಡ್‌ ಬ್ರೇವರೀಸ್‌ ಹೋಲ್ಡಿಂಗ್‌ (ಯುಬಿಎಚ್‌ ಎಲ್‌) ಕಂಪನಿ ಮುಚ್ಚುವಂತೆ ತೀರ್ಪು ನೀಡಿದೆ. 

Advertisement

ಕಿಂಗ್‌ಫಿಷರ್‌ ಏರ್‌ಲೈನ್ಸ್… ಕಂಪೆನಿಗೆ ಪಡೆದ ಸಾಲ ಹಿಂದಿರುಗಿಸದ ಹಿನ್ನೆಲೆಯಲ್ಲಿ ಮಲ್ಯ ಮಾಲೀಕತ್ವದ ಯುಬಿಎಚ್‌ಎಲ್‌
ಕಂಪೆನಿಯನ್ನು ಮುಚ್ಚಲು ಅನುಮತಿ ನೀಡುವಂತೆ ಕೋರಿ ಅಮೆರಿಕ ಮೂಲದ ಐಎಎಇ ಅಂತಾರಾಷ್ಟ್ರೀಯ ಏರೋ ಎಂಜಿನ್ಸ್‌
ಎಜಿ ಮತ್ತು ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ನೇತೃತ್ವದ 14 ಬ್ಯಾಂಕ್‌ ಒಕ್ಕೂಟ ಸಲ್ಲಿಸಿದ್ದ ಪ್ರತ್ಯೇಕ ಹತ್ತು ಅರ್ಜಿಗಳ
ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ.ವಿನೀತ್‌ ಕೋಠಾರಿ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ಧಾರವಾಡ ಪೀಠದಿಂದ
ವಿಡಿಯೋ ಕಾನ್ಫರೆನ್ಸ್‌ ಮೂಲಕ ತೀರ್ಪು ಪ್ರಕಟಿಸಿತು.

ಇಂಗ್ಲೆಂಡ್‌ ಮೂಲದ ವಿಮಾನದ ಬಿಡಿಭಾಗಗಳನ್ನು ಪೂರೈಸುವ ಏರೋಟ್ರಾನ್‌ ಲಿಮಿಟೆಡ್‌ ಕಂಪೆನಿಗೆ ಆರು ಮಿಲಿಯನ್‌
ಡಾಲರ್‌ಗಿಂತ ಹೆಚ್ಚು ಹಣ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಮಲ್ಯ ಒಡೆತನದ ಕಿಂಗ್‌ಫಿಷರ್‌ ಏರೈಲೈನ್ಸ್‌ ಲಿಮಿಟೆಡ್‌ ಕಂಪೆನಿ ಮುಚ್ಚಲು ನ್ಯಾ.ವಿನೀತ್‌ ಕೊಠಾರಿ ಅವರ ಪೀಠವೇ 2016ರ ನ.18ರಂದು ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಕರಣದ ಸತ್ಯಾಂಶಗಳನ್ನು ಸಂಪೂರ್ಣವಾಗಿ ಪರಿಶೀಲಿ ಸಿದಾಗ ವಿಜಯ್‌ ಮಲ್ಯ, ಅರ್ಜಿದಾರ ಕಂಪೆನಿಗಳಿಂದ ಪಡೆದಿರುವ ಸಾಲ ಮರು ಪಾವತಿಸಲು ವಿಫ‌ಲವಾಗಿರುವುದು ಖಚಿತವಾಗುತ್ತದೆ. ಹೀಗಾಗಿ, ಯುಬಿಎಚ್‌ಎಲ್‌ ಮುಚ್ಚುವುದು ಸೂಕ್ತ. ಆದ್ದರಿಂದ ಕೂಡಲೇ ಅಧಿಕೃತ ಬರಖಸ್ತುದಾರರನ್ನು ನೇಮಿಸಬೇಕು. ಯುಬಿಎಚ್‌ಎಲ್‌ನ ಎಲ್ಲ ಸ್ವತ್ತುಗಳನ್ನು ವಶಕ್ಕೆ ಪಡೆದು ಆ ಬರಖಸ್ತುದಾರರ ಅಧೀನಕ್ಕೆ
ಒಪ್ಪಿಸಬೇಕು. ತದನಂತರ ಕಾನೂನು ಪ್ರಕಾರ ಬರಖಸ್ತುದಾರರು ಯುಬಿಎಚ್‌ ಎಲ್‌ ಕಂಪೆನಿ ಮುಚ್ಚುವ ಪ್ರಕ್ರಿಯೆ
ಮುಂದುವರಿಸಬೇಕು ಎಂದು ಹೈಕೋರ್ಟ್‌ ಆದೇಶ ಮಾಡಿದೆ.

ಅಧಿಕೃತ ಬರಖಸ್ತುದಾರರು ಯುಬಿಎಚ್‌ ಎಲ್‌ ಕಂಪನಿಯನ್ನು ಮುಚ್ಚುವ ಪ್ರಕ್ರಿಯೆ ಕುರಿತು 4 ವಾರಗಳಲ್ಲಿ ನ್ಯಾಯಾಲಯಕ್ಕೆ ಪ್ರಗತಿ ವರದಿ ಸಲ್ಲಿಸಬೇಕು. ಹಾಗೆಯೇ, ಹೈಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲ ಯಗಳಲ್ಲಿರುವ ವಿಚಾರಣೆಗೆ ಬಾಕಿಯಿರುವ 
ಯುಬಿಎಚ್‌ಎಲ್‌ ಕಂಪೆನಿಯ ವ್ಯಾಜ್ಯಗಳ ಕುರಿತು ಮಾಹಿತಿ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

Advertisement

ಯುಬಿಎಚ್‌ಎಲ್‌ ಕಂಪೆನಿಯನ್ನು ಮುಚ್ಚಲು ನ್ಯಾಯಾಲಯ ಮಾಡಿರುವ ಆದೇಶದ ಬಗ್ಗೆ ಇಂಗ್ಲೀಷ್‌ ದೈನಿಕ “ಹಿಂದು’ ಮತ್ತು “ಉದಯವಾಣಿ’ ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕು. ನ್ಯಾಯಾಲ ಯದ ಈ ಆದೇಶದ ಪ್ರತಿಯನ್ನು ಅಧಿಕೃತ ಬರಖಸ್ತುದಾರರು, ಕರ್ನಾಟಕ ಸಹಕಾರ ಸಂಸ್ಥೆಗಳ ಪ್ರಾದೇಶಿಕ ನಿರ್ದೇಶಕರು ಮತ್ತು ಯುಬಿಎಚ್‌ಎಲ್‌ ಕಂಪೆನಿಗಳಿಗೆ ಕಳುಹಿಸಿಕೊಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಪ್ರಕರಣವೇನು?
ಮಲ್ಯ ಅವರು ಕಿಂಗ್‌ಫಿಷರ್‌ ಏರಲೈನ್‌ ಸಂಸ್ಥೆಗಾಗಿ ಭಾರತೀಯ  ಸ್ಟೇಟ್‌ ಬ್ಯಾಂಕ್‌ ಸೇರಿದಂತೆ ಸುಮಾರು 14 ಬ್ಯಾಂಕುಗಳು ಸಾಲ 
ಮತ್ತು ದೇಶ ಹಾಗೂ ವಿದೇಶ ಕಂಪೆನಿಗಳಿಂದ ಸಾಲ ಪಡೆದಿದ್ದರು. ಸಾಲದ ಮೊತ್ತ 6 ಸಾವಿರ ಕೋಟಿ ರೂ.ಗೂ ಹೆಚ್ಚಿತ್ತು. ಮೊದಲು ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಕಂಪೆನಿ ಒಡೆತನ ವನ್ನು ಯುಬಿಎಚ್‌ಏಲ್‌ ಕಂಪೆನಿ ಹೊಂದಿತ್ತು. ನಂತರ 2 ಕಂಪೆನಿಯ ಷೇರುಗಳನ್ನು ಪ್ರತ್ಯೇಕಿಸಲಾಗಿತ್ತು. ಆದರೆ, ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕುಗಳ ಯುಬಿಎಚ್‌ಎಲ್‌ ಹಾಗೂ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಕಂಪೆನಿ ಗಳನ್ನು ಮುಚ್ಚಲು ಅನುಮತಿ ನೀಡುವಂತೆ ಕೋರಿ ಹೈಕೋರ್ಟ್‌ ಹಾಗೂ ಸಾಲ ವಸೂಲಿ ನ್ಯಾಯಾಧೀಕರಣದಲ್ಲಿ 2012ರಿಂದಲೂ ನಿರಂತರವಾಗಿ ಕಾನೂನು ಹೋರಾಟ ನಡೆಸುತ್ತಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next