Advertisement
ರಾಜ್ಯ ವಿಧಾನಸಭೆಯಲ್ಲಿ ಹಾಲಿ ಸದಸ್ಯ ಬಲದ ಆಧಾರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅನಾಯಾಸವಾಗಿ ಗೆಲುವು ಸಾಧಿಸಲು ಅವಕಾಶವಿದೆ. ಆದರೆ, 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವು ದರಿಂದ ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯುವುದಕ್ಕಿಂತಲೂ ಮುಂಚೆಯೇ ಉಪ ಚುನಾವಣೆಯ ಫಲಿತಾಂಶ ಬರುತ್ತದೆ. ಬಿಜೆಪಿ ಕನಿಷ್ಠ 5ಕ್ಕಿಂತ ಕಡಿಮೆ ಸ್ಥಾನ ಪಡೆದರೆ ರಾಜ್ಯಸಭೆ ಚುನಾವಣೆಯಲ್ಲೂ ಜೆಡಿಎಸ್ ಬೆಂಬಲದೊಂದಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬಹುದು ಎನ್ನುವ ಲೆಕ್ಕಾಚಾರವನ್ನು ಕಾಂಗ್ರೆಸ್ ಹಾಕುತ್ತಿದೆ ಎಂದು ತಿಳಿದು ಬಂದಿದೆ.
Related Articles
Advertisement
ಕಾಂಗ್ರೆಸ್ ಹಾಗೂ ಜೆಡಿಎಸ್ ಕನಿಷ್ಠ 10 ಸ್ಥಾನ ಗೆದ್ದು, ಇಬ್ಬರೂ ಪಕ್ಷೇತರ ಶಾಸಕರ ಬೆಂಬಲ ಪಡೆದರೆ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಅನುಕೂಲವಾಗುತ್ತದೆ ಎನ್ನುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಅದೇ ಕಾರಣಕ್ಕೆ ಖರ್ಗೆ ಅವರನ್ನು ಕಣಕ್ಕಿಳಿಸಿದರೆ, ಜೆಡಿಎಸ್ ವರಿಷ್ಠ ದೇವೇಗೌಡರು ಬೆಂಬಲ ನೀಡುವ ಸಾಧ್ಯತೆ ಇರುತ್ತದೆ. ಆ ಹಿನ್ನೆಲೆಯಲ್ಲಿ ಕೈ ಹೈಕಮಾಂಡ್ ಖರ್ಗೆಯವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಖರ್ಗೆ ಹಿಂದೇಟು: ಆದರೆ, ಪ್ರಸಕ್ತ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇಲ್ಲದಿರುವುದರಿಂದ ಹಾಗೂ ಜೆಡಿಎಸ್ ನಡೆ ಏನು ಎನ್ನುವುದು ಇನ್ನೂ ಸ್ಪಷ್ಟವಾಗದಿರುವುದರಿಂದ ಗೊಂದಲದ ಪರಿಸ್ಥಿತಿಯಲ್ಲಿ ಕಣಕ್ಕಿಳಿಯಲು ಖರ್ಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಜೆಡಿಎಸ್ ಬೆಂಬಲ ನೀಡಿದರೂ, ಡಿ.9ರ ಉಪ ಚುನಾವಣೆಯ ಫಲಿತಾಂಶದ ಮೇಲೆಯೇ ರಾಜ್ಯಸಭೆ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಸ್ಪಷ್ಟ ಚಿತ್ರಣ ಸಿಗುತ್ತದೆ.
ಫಲಿತಾಂಶ ನಂಬಿ ನಾಮಪತ್ರ ಸಲ್ಲಿಸಿ, ನಿರೀಕ್ಷಿಸಿದಷ್ಟು ಸ್ಥಾನಗಳು ಬರದೇ ಹೋದರೆ, ಮುಜುಗರ ಅನುಭವಿ ಸುವುದು ಬೇಡ ಎನ್ನುವ ಕಾರಣಕ್ಕೆ ಖರ್ಗೆ ಅಭ್ಯರ್ಥಿಯಾಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಖರ್ಗೆಯವರು ಸ್ಪರ್ಧೆಗೆ ಹಿಂದೇಟು ಹಾಕಿ ದರೆ ಪರ್ಯಾಯ ಅಭ್ಯರ್ಥಿಗಳಾಗಿ ಅಬ್ದುಲ್ ವಹಾಬ್ ಹಾಗೂ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಹೆಸರುಗಳು ಕೇಳಿ ಬರುತ್ತಿವೆ. ಆದರೆ, ಈ ಬಗ್ಗೆ ಅಧಿಕೃತ ಚರ್ಚೆಗಳು ನಡೆದಿಲ್ಲ ಎನ್ನಲಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಡಿ.2 ಕೊನೆಯ ದಿನವಾಗಿರುವುದರಿಂದ ಕಾಂಗ್ರೆಸ್ ನಡೆ ಕುತೂಹಲ ಮೂಡಿಸಿದೆ.
ಸಿದ್ದುಗೆ ಅನುಕೂಲ?: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹತ್ತಕ್ಕೂ ಹೆಚ್ಚು ಸ್ಥಾನ ಪಡೆದರೆ ರಾಜ್ಯದಲ್ಲಿ ಮತ್ತೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಒಂದು ವೇಳೆ, ಖರ್ಗೆಯವರು ರಾಜ್ಯದಲ್ಲಿಯೇ ಉಳಿದರೆ ಸಿದ್ದರಾಮಯ್ಯ ಅವರಿಗೆ ತೊಡಕಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ, ಖರ್ಗೆಯವರನ್ನು ರಾಜ್ಯಸಭೆಗೆ ಕಳುಹಿಸುವುದರಿಂದ ಸಿದ್ದರಾಮಯ್ಯಗೆ ರಾಜ್ಯ ಕಾಂಗ್ರೆಸ್ ಮೇಲಿನ ಹಿಡಿತವನ್ನು ತಮ್ಮ ಕೈಯಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.