Advertisement

ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ?

10:43 AM May 12, 2017 | |

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಸ್ಥಾನದಿಂದ ಬದಲಾಯಿಸಿ, ಪಕ್ಷದಲ್ಲಿ ಮಹತ್ವದ ಹುದ್ದೆ ನೀಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಪಕ್ಷದ ಸಂಸದೀಯ ನಾಯಕನ ಸ್ಥಾನವನ್ನು ಮಧ್ಯಪ್ರದೇಶದ ಯುವ ನಾಯಕ ಜೋತಿರಾದಿತ್ಯ ಸಿಂಧಿಯಾ ಅವರಿಗೆ ವಹಿಸಿಕೊಡಲು ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.ಖರ್ಗೆ ಅವರನ್ನು ಬದಲಾಯಿಸಿ ರಾಜ್ಯ ರಾಜಕಾರಣಕ್ಕೆ ಮರಳಿ ಕಳುಹಿಸುತ್ತಾರೆಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿವೆ.

Advertisement

ಆದರೆ, ಈಗಾಗಲೇ ಕಾಂಗ್ರೆಸ್‌ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಖರ್ಗೆ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸುವುದರಿಂದ
ಅವರಿಗೆ ಹಿಂಬಡ್ತಿ ನೀಡಿದಂತಾಗುತ್ತದೆ. ಹೀಗಾಗಿ ಎಐಸಿಸಿಯಲ್ಲಿ ಮಹತ್ವದ ಸ್ಥಾನ ನೀಡಲು ಸೋನಿಯಾ ಹಾಗೂ ರಾಹುಲ್‌ ಗಾಂಧಿ ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. ದೇಶಾದ್ಯಂತ ಪಕ್ಷದ ಚಟುವಟಿಕೆ ಗಳನ್ನು ನೋಡಿಕೊಂಡು ಹೋಗಲು ಸಮರ್ಥ ನಾಯಕನ ಅಗತ್ಯ ವಿದೆ ಎಂದು ಮನಗಂಡಿರುವ ಹೈಕಮಾಂಡ್‌ ಖರ್ಗೆ ಅವರಿಗೆ ಮಹತ್ವದ ಹುದ್ದೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪಕ್ಷದ ಇನ್ನೋರ್ವ ಹಿರಿಯ ನಾಯಕ ಕಮಲ್‌ನಾಥ್‌ ಅವರು ವಿದೇಶ ಪ್ರವಾಸದಲ್ಲಿದ್ದು, ಮೇ 21 ರಂದು ಭಾರತಕ್ಕೆ ವಾಪಸ್‌ ಆದ ನಂತರ ಖರ್ಗೆ ಅವರಿಗೆ ಅಧಿಕೃತ ಜವಾಬ್ದಾರಿ ನೀಡುವ ಕುರಿತು ಸೋನಿಯಾ ಹಾಗೂ ರಾಹುಲ್‌ ಪ್ರಕಟಿಸುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಅತ್ಯಂತ ಮಹತ್ವದ್ದಾಗಿರುವುದರಿಂದ ಮಹತ್ವದ ನಿರ್ಣಯ
ತೆಗೆದುಕೊಳ್ಳುವ ಪ್ರಮುಖ ಜವಾಬ್ದಾರಿ ಖರ್ಗೆಯವರಿಗೆ ನೀಡಬೇಕೆಂಬ ಇಚ್ಛೆ ಸೋನಿಯಾ ಹೊಂದಿದ್ದಾರೆನ್ನಲಾಗಿದೆ. ಹೀಗಾಗಿ ರಾಷ್ಟ್ರ ಮಟ್ಟದ ರಾಜಕಾರಣದಲ್ಲಿದ್ದುಕೊಂಡು ಕರ್ನಾಟಕದ ಮೇಲುಸ್ತುವಾರಿ ನೋಡಿಕೊಳ್ಳುವಂತಹ ಹುದ್ದೆಗೆ ನೇಮಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

ರೇಸ್‌ನಲ್ಲಿ ನಾನಿಲ್ಲ: ಖರ್ಗೆ
ಕಲಬುರಗಿ:
“ಈಗಲೂ ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತಾಗಿ ಹೈಕಮಾಂಡ್‌ ಏನನ್ನೂ ಕೇಳಿಲ್ಲ. ಅಧ್ಯಕ್ಷ ಸ್ಥಾನದ ಬಗ್ಗೆ ನನ್ನನ್ನು ಕರೆದು ಕೇಳಿದರೆ ಅಭಿಪ್ರಾಯ ಹೇಳಬಹುದು. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ತಾವಿಲ್ಲ. ಊಹಾಪೋಹಗಳ ಮೇಲೆ ಮಾತಾಡೋದು ಸರಿಯಲ್ಲ’ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಅವರು, “ಕೆಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ಹೈಕಮಾಂಡ್‌ ಏನು ತೀರ್ಮಾನ ತೆಗೆದು
ಕೊಳ್ಳುತ್ತದೆಯೋ ಅದಕ್ಕೆ ಬದ್ಧ. ಅವರು ಏನು ಹೇಳುತ್ತಾರೋ ಅದನ್ನು ಪಾಲಿಸುತ್ತೇನೆ ಎಂದರು. 

Advertisement

ದೆಹಲಿಗೆ ತೆರಳಿದ ಪರಂ
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ ಅವರು 3 ದಿನ ಸಭೆ ನಡೆಸಿ ತೆರಳಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ದಿಢೀರ್‌ ದೆಹಲಿಗೆ ತೆರಳಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಮಾಡುವ ಬಗ್ಗೆ ವೇಣುಗೋಪಾಲ್‌ ಪ್ರಸ್ತಾಪ ಮಾಡಿ ಹೋಗಿರುವುದರಿಂದ ತಮ್ಮನ್ನೇ ಮುಂದುವರಿಸುವ ಬಗ್ಗೆ ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಪರಮೇಶ್ವರ್‌ ತೆರಳಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮತ್ತೂಂದು ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಪರಮೇಶ್ವರ್‌ ಅಭಿಪ್ರಾಯ ಪಡೆಯಲು ಹೈಕಮಾಂಡ್‌ ಬುಲಾವ್‌ ನೀಡಿದೆ ಎಂದೂ ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next