ಹರಿಹರ: ಸಾಮಾನ್ಯ ಗೃಹಿಣಿಯಾಗಿದ್ದ ಹೇಮರಡ್ಡಿ ಮಲ್ಲಮ್ಮ ಮಾಡಿದ ಅಧ್ಯಾತ್ಮ, ಸಾಮಾಜಿಕ ಸಾಧನೆ ಸಮಾಜಕ್ಕೆ ದಾರಿದೀಪವಾಗಿದೆ ಎಂದು ರಾಣೀಬೆನ್ನೂರಿನ ಪ್ರಾಧ್ಯಾಪಕ ಹೊನ್ನಪ್ಪ ಹೇಳಿದರು.
ತಾಲೂಕು ಆಡಳಿತದಿಂದ ನಗರದ ಮಿನಿ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ಸಾಮಾನ್ಯ ರೈತಾಪಿ ಕುಟುಂಬದಲ್ಲಿ ದನ ಕಾಯುವ ಕೆಲಸ ಮಾಡುತ್ತಿದ್ದ ಮಲ್ಲಮ್ಮರಿಗೆ ನಂತರ ಕುಟುಂಬದ ಸ್ಥಿತಿಗತಿಗಳು ಬದುಕಿನ ದಿಕ್ಕನ್ನೇ ಬದಲಾಯಿಸಿತು.
ಅಂತಹ ಸ್ಥಿತಿಯಲ್ಲಿ ಬೇರೆ ಮಹಿಳೆಯರಿದ್ದರೆ ಬದುಕನ್ನೆ ಕೊನೆಗೊಳಿಸಿಕೊಳ್ಳುತ್ತಿದ್ದರು. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ ಮಲ್ಲಮ್ಮ ತನಗೆ ಅಡ್ಡಿಯಾಗಿ ಪರಿಣಮಿಸಿದ್ದ ಕುಟುಂಬದ ಸದಸ್ಯರನ್ನು ಮಾನವೀಯ ಗುಣವುಳ್ಳವರಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.
ಮಲ್ಲಿಕಾರ್ಜುನ ದೇವರ ಆರಾಧನೆ ಮಾಡುತ್ತಾ ಅಧ್ಯಾತ್ಮದ ತುದಿಯನ್ನು ಮುಟ್ಟಿ ತನ್ನ ಕುಟುಂಬದ ಜೊತೆಗೆ ಸಮಾಜಕ್ಕೂ ಆದರ್ಶ ವ್ಯಕ್ತಿಯಾಗಿ ಬೆಳೆದರು. ಇಂತಹ ಸಾಧಕಿ ಮಹಿಳೆಯ ಜಯಂತಿಯನ್ನು ಸರಕಾರದಿಂದ ಆಚರಿಸುತ್ತಿರುವುದು ಶ್ಲಾಘನೀಯವೆಂದರು.
ತಹಶೀಲ್ದಾರ್ ಜಿ.ನಳಿನ ಮಾತನಾಡಿ, ಮನು-ಕುಲಕ್ಕೆ ಬೇಕಾಗುವ ತತ್ವ ಸಿದ್ಧಾಂತಗಳನ್ನು ನೀಡಿದ ಕೀರ್ತಿ ಮಲ್ಲಮ್ಮರಿಗೆ ಸಲ್ಲುತ್ತದೆ. ಶಿವಶರಣೆಯಾಗಿ ಅಧ್ಯಾತ್ಮಿಕ ಸಾಧನೆ, ಸಾಮಾಜಿಕ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿದ ಮಲ್ಲಮ್ಮ ಮಹಿಳಾ ವರ್ಗಕ್ಕೆ ಮಾದರಿಯಾಗಿದ್ದಾರೆ ಎಂದರು.
ಬಿಇಒ ಕೆ.ಸಿ.ಮಲ್ಲಿಕಾರ್ಜುನ್, ತಾಲೂಕು ಸಮಾಜ ಕಲ್ಯಾಣಾಧಿಧಿಕಾರಿ ಪರಮೇಶ್ವರಪ್ಪ, ನಗರಸಭೆ ಪೌರಾಯುಕ್ತೆ ಎಸ್.ಲಕ್ಷಿ, ಗ್ರಾಮೀಣ ನೀರು ಸರಬರಾಜು ಎಇಇ ಕೃಷ್ಣಪ್ಪ ಜಾಡರ್, ಎಪಿಎಂಸಿ ಸದಸ್ಯ ಹನುಮಂತ ರೆಡ್ಡಿ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ|ದಾಸಪ್ಪ, ನ್ಯಾಯವಾದಿ ಬಿ.ಆರ್.ರುದ್ರೇಶ್, ಪುಷ್ಪ ಇತರರಿದ್ದರು.