Advertisement

ನೆಲೆ ಕಲ್ಪಿಸಿ ಅಥವಾ ದಯಾಮರಣ ನೀಡಿ : ಮಲೆಮನೆ ನಿರಾಶ್ರಿತರ ಮನವಿ

01:43 PM Apr 07, 2022 | Team Udayavani |

ಕೊಟ್ಟಿಗೆಹಾರ:2019ರ ಮಹಾಮಳೆಗೆ ಮನೆ, ಜಮೀನು ಕಳೆದುಕೊಂಡ ಜಾವಳಿ ಗ್ರಾ.ಪಂ ವ್ಯಾಪ್ತಿಯ ಮಲೆಮನೆಯ ನೆರೆ ನಿರಾಶ್ರಿತರ ಬದುಕು ಇನ್ನೂ ನೆಲೆ ಕಂಡುಕೊಂಡಿಲ್ಲ.

Advertisement

2019ರ ಆಗಸ್ಟ್‌ ತಿಂಗಳಲ್ಲಿ ಸುರಿದ ಮಹಾಮಳೆಗೆ ಮಲೆಮನೆ ಗ್ರಾಮದ 5 ಕುಟುಂಬಗಳ ಮನೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು ಈ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲು ಸಾಧ್ಯವಿಲ್ಲದಿರುವುದರಿಂದ ಸರ್ಕಾರ ಮನೆ ಕಟ್ಟಲು ಜಾಗ ಮತ್ತು ಕೃಷಿ ಭೂಮಿಯನ್ನು ಪರ್ಯಾಯವಾಗಿ ನೀಡುವುದಾಗಿ ತಿಳಿಸಿತ್ತು. ಆದರೆ ಈವರೆಗೆ ಸರ್ಕಾರ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಲ್ಲ. ಪುನರ್ವಸತಿ ಕಲ್ಪಿಸುವವರೆಗೆ ಬಾಡಿಗೆ ಮನೆಯಲ್ಲಿರುವಂತೆ ಮತ್ತು ಬಾಡಿಗೆ ಹಣ ನೀಡುವಂತೆ ತಿಳಿಸಿದ್ದ ಸರ್ಕಾರ ಪ್ರಾರಂಭದ 5 ತಿಂಗಳು ಮಾತ್ರ ಬಾಡಿಗೆ ಹಣ ನೀಡಿದ್ದು ಮತ್ತೆ  ಹಣವನ್ನು ನೀಡಿಲ್ಲ.

ಸರ್ಕಾರ ಪರ್ಯಾಯ ಜಾಗ ಗುರುತಿಸದ ಕಾರಣ ಪರ್ಯಾಯ ಜಾಗಕ್ಕೂ ಹೋಗಲಾಗದೇ ಬಾಡಿಗೆ ಮನೆಯಲ್ಲೂ ಇರಲಾಗದೇ ಅತಂತ್ರ ಸ್ಥಿತಿಯಲ್ಲಿ ಇಲ್ಲಿನ ನೆರೆ ಸಂತ್ರಸ್ತ ಕುಟುಂಬಗಳಿವೆ. ಪರ್ಯಾಯ ಜಾಗವನ್ನು ನೆರೆ ಸಂತ್ರಸ್ತ ಕುಟುಂಬಗಳಿಗೆ ನೀಡಲು ತಾಲ್ಲೂಕಿನ ಹಲವೆಡೆ ಜಾಗ ಗುರುತಿಸಿದ್ದು ಈ ಜಾಗ ಅರಣ್ಯ ಇಲಾಖೆಯದ್ದೋ ಅಥವಾ ಕಂದಾಯ ಇಲಾಖೆಗೆ ಸೇರಿದ್ದೋ ಎಂಬ ಗೊಂದಲದಿಂದ ಪುನರ್ವಸತಿ ನಿಂತ ನೀರಾಗಿದೆ.

ನಿರಾಶ್ರಿತರಿಂದ ದಯಾಮರಣ ಕೋರಲು ನಿರ್ಧಾರ
2019ರ ಮಹಾಮಳೆಗೆ ಮನೆ ಕಳೆದುಕೊಂಡ ಮಲೆಮನೆಯ ನೆರೆ ಸಂತ್ರಸ್ತರಾದ ಸತೀಶ್‌, ಅಶ್ವತ್ಥ್, ರಾಜು, ಚಂದ್ರೇಗೌಡ, ರಾಜೇಶ್‌ ಅವರ ಕುಟುಂಬಗಳು ಇಂದಿಗೂ ಕೂಡ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮನೆ ಕೊಚ್ಚಿ ಹೋದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳು ಮಲೆಮನೆ ಗ್ರಾಮಕ್ಕೆ ಆಗಮಿಸಿದರೂ ಕೂಡ ಪುನರ್ವಸತಿ ಕಲ್ಪಿಸಲು ಸಾಧ್ಯವಾಗದೇ ಇರುವುದು ನೆರೆ ಸಂತ್ರಸ್ತರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಕೇವಲ ಭರವಸೆಗೆ ಸೀಮಿತವಾದ ಪುನರ್ವಸತಿಯಿಂದಾಗಿ ಮಲೆಮನೆಯ ನೆರೆ ಸಂತ್ರಸ್ತರು ರಾಷ್ಟ್ರಪತಿಗಳಿಗೆ ದಯಾಮರಣಕೋರಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

”2019 ರಲ್ಲಿ ನೆರೆಯಲ್ಲಿ ಮನೆ, ಜಮೀನು ಕಳೆದುಕೊಂಡು ಬಾಡಿಗೆ ಮನೆಯಲ್ಲಿದ್ದೇವೆ. ಸರ್ಕಾರ ಬಾಡಿಗೆ ಹಣವನ್ನು ನೀಡುತ್ತಿಲ್ಲ. ಪರ್ಯಾಯ ಜಾಗವನ್ನು ನೀಡುತ್ತಿಲ್ಲ. ಸರ್ಕಾರ ಪರ್ಯಾಯ ಜಾಗ ನೀಡದೇ ಇದ್ದರೆ ಮಲೆಮನೆಯ ನೆರೆ ಸಂತ್ರಸ್ತರು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ”
ಅಶ್ವತ್ಥ್ ಜಾವಳಿ. ನೆರೆ ಸಂತ್ರಸ್ತ, ಮಲೆಮನೆ

Advertisement

ಸಂತೋಷ್‌ ಅತ್ತಿಗೆರೆ

Advertisement

Udayavani is now on Telegram. Click here to join our channel and stay updated with the latest news.

Next