ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ವನ್ಯಜೀವಿ ವಲಯದಲ್ಲಿ 4-5 ವರ್ಷ ಪ್ರಾಯದ ಗಂಡು ಹುಲಿಯ ಶವ ಪತ್ತೆಯಾಗಿದೆ.
ವೀರನಹೊಸಹಳ್ಳಿ ವಲಯದ ಅಗಸನಹುಂಡಿ ಶಾಖೆಯ ಬಿ.ಆರ್.ಕಟ್ಟೆ ಗಸ್ತಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ. ಹುಲಿಯ ಮೃತದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿರುವುದು ಕಂಡು ಬಂದಿದ್ದು, ಮತ್ತೊಂದು ಹುಲಿಯೊಂದಿಗಿನ ಆಂತರಿಕ ಕಾದಟದಿಂದ ಬೆನ್ನು ಮೂಳೆ ಮತ್ತು ಬಲ ಮುಂಗಾಲಿನ ಮೂಳೆ ಮುರಿದಿರುವುದು ಕಂಡು ಬಂದಿದೆ.
ಮುಳ್ಳುಹಂದಿ ಬೇಟೆಯಾಡಲು ಮುಳ್ಳು ಬಾಯಿ ಮತ್ತು ಕಾಲಿನ ಭಾಗಗಳಲ್ಲಿ ಚುಚ್ಚಿರುವ ಗಾಯಗಳಾಗಿರುವ ಪರಿಣಾಮ ಆಂತರಿಕ ರಕ್ತಸ್ರಾವದಿಂದ ಮೃತಪಟ್ಟಿರಬಹುದೆಂದು ಮರಣೋತ್ತರ ಪರೀಕ್ಷೆ ನಡೆಸಿರುವ ಪಶುವೈದ್ಯಾಧಿಕಾರಿ ಮತ್ತು ಆನೆಗಳ ಪ್ರಭಾರಕ ಎಚ್.ರಮೇಶ್‌ರವರು ಶಂಕಿಸಿದ್ದಾರೆ.
ಉನ್ನತ ಪರೀಕ್ಷೆಯಿಂದ ಸಾವಿನ ನಿಖರ ಕಾರಣ ತಿಳಿಯಲಿದೆ. ಸ್ಥಳದಲ್ಲೇ ಹುಲಿಯ ಶವ ಸುಟ್ಟು ಹಾಕಲಾಯಿತೆಂದು ಡಿಸಿಎಫ್ ಹರ್ಷಕುಮಾರ ಚಿಕ್ಕನರಗುಂದ ಉದಯವಾಣಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಡಿಸಿಎಫ್ ಹರ್ಷಕುಮಾರಚಿಕ್ಕನರಗುಂದ, ಎಸಿಎಫ್ ದಯಾನಂದ್, ವನ್ಯಜೀವಿ ಪರಿಪಾಲಕರಾದ ಕೃತಿಕಾಆಲನಹಳ್ಳಿ, ಕೆ.ಎನ್.ಮಾದಪ್ಪ, ವೀರನಹೊಸಹಳ್ಳಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಗಣರಾಜಪಟಗಾರ, ಎಸಿಎಫ್ ಸಚಿನ್ ಹಾಗೂ ಬಿ.ಆರ್.ಕಟ್ಟೆ ಗಸ್ತಿನ ಗಸ್ತು ಅರಣ್ಯಪಾಲಕ ಕೃಷ್ಣ ಮತ್ತು ವಲಯದ ಸಿಬಂದಿ ಇದ್ದರು.